ಮಡಿಕೇರಿ, ನ. ೭: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೀರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜು ವತಿಯಿಂದ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನುಡಿ ನೃತ್ಯ ಸಂಭ್ರಮವೆAಬ ನೃತ್ಯ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ; ಕೊಡಗು ಜಿಲ್ಲೆಯ ಪದವಿ, ತತ್ಸಮಾನ ಹಾಗೂ ಸ್ನಾತಕೋತ್ತರ ಪದವಿ, ತತ್ಸಮಾನ ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿಗೆ ಸಂಬAಧಿಸಿದ ಗೀತೆಗಳಿಗೆ ನುಡಿ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಒಂದು ಕಾಲೇಜಿನಿಂದ ಒಂದು ತಂಡಕ್ಕೆ ಭಾಗವಹಿಸಬಹುದಾಗಿದೆ. ವಿಜೇತರಾಗುವ ತಂಡಗಳಿಗೆ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕ ನೀಡಲಾಗುವದೆಂದು ತಿಳಿಸಿದರು.

ತಾ.೨೦ರಂದು ನೃತ್ಯ ಸ್ಪರ್ಧೆ ನಡೆಯಲಿದೆ. ಭಾಗವಹಿಸುವ ತಂಡಗಳು ತಾ.೧೫ರ ಒಳಗಡೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರತಿಮಾ ರೈ(೯೪೮೧೧೧೩೪೬೯) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯುವ ನೃತ್ಯ ಸ್ಪರ್ಧೆಯನ್ನು ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಉದ್ಘಾಟಿಸುವರು.ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ, ಕೊಡಗು ವಿವಿ ಕುಲಸಚಿವ ಡಾ.ಸುರೇಶ್, ವೀರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ, ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಕೊಡಗು ವಿವಿ ಕೂಡ ಕೈಜೋಡಿಸಲಿದೆ ಎಂದು ಹೇಳಿದರು.

ಈ ಪ್ರಯುಕ್ತ ತಾ.೧೯ರಂದು ಕಾಲೇಜಿನಲ್ಲಿ ಕನ್ನಡ ಸಂಸ್ಕೃತಿ, ಪರಂಪರೆ, ಸ್ಥಳೀಯ ಜಾನಪದ ಸ್ವರೂಪಗಳನ್ನು ಬಿಂಬಿಸುವ ಪಾರಂಪರಿಕ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದು ಕಾಲೇಜಿನ ತರಗತಿವಾರು ಸ್ಪರ್ಧೆಯಾಗಿದೆ ಎಂದು ತಿಳಿಸಿದರು.

ವೀರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧಿಕಾರಿ ಶಭರೀಶ ಶೆಟ್ಟಿ ಮಾತನಾಡಿ ಕನ್ನಡ ನಾಡು ನುಡಿ, ಜಾನಪದಕ್ಕೆ ಆದ್ಯತೆ ನೀಡುವದರೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲಾಗುವದು. ಜಿಲ್ಲೆಯ ಎಲ್ಲ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸುವದರೊಂದಿಗೆ ನಾಡಿಗೆ ಉತ್ತಮ ಸಂದೇಶ ನೀಡುವ ಉದ್ದೇಶವಾಗಿದೆ ಎಂದು ಹೇಳಿದರು.

ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರತಿಮಾ ರೈ ಮಾತನಾಡಿ; ಕಾಲೇಜು ವತಿಯಿಂದ ಹಲವಾರು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಕಾಲೇಜಿನ ವ್ಯವಸ್ಥಾಪಕರಾದ ಮದಲೈ ಮುತ್ತು ಇಂತಹ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ರೀತಿ, ನಿಯಮಗಳ ಬಗ್ಗೆ ಈಗಾಗಲೇ ಎಲ್ಲ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ, ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಹೆಚ್.ಜಿ.ಸಾವಿತ್ರಿ, ಕಾಲೇಜಿನ ಕನ್ನಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೇಕಬ್ ಲೆವಿನ್ ಇದ್ದರು.