(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ನ. ೬ : ದೇಶದ ರಕ್ಷಣಾ ಪಡೆಯ ವಿಚಾರ ಬಂದರೆ ಅದು ಸೇನಾ ಜಿಲ್ಲೆ ಖ್ಯಾತಿಯ ಕೊಡಗಿನಲ್ಲಿ ಒಂದು ರೀತಿಯ ಭಾವನಾತ್ಮಕವಾದ ವಿಚಾರವಾಗಿದೆ. ಕೊಡಗು ಎಂಬ ಪುಟ್ಟ ಜಿಲ್ಲೆ ಸೇನಾ ಇತಿಹಾಸದಲ್ಲಿ ದೇಶದಲ್ಲೇ ವಿಭಿನ್ನ ಛಾಪು ಮೂಡಿಸಿರುವ ಪ್ರದೇಶ.
ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯರಿಂದ ಆರಂಭಗೊAಡ ಸೇನಾ ಯಶೋಗಾಥೆ. ಕರ್ನಾಟಕ ರಾಜ್ಯ ಸೇರಿದಂತೆ ಕೊಡಗು ಜಿಲ್ಲೆಯ ಖ್ಯಾತಿಯನ್ನು ವಿಶ್ವಮಟ್ಟದಲ್ಲಿ ಪಸರಿಸಿದೆ. ಈಗಲೂ ಈ ಸೈನಿಕ ಪರಂಪರೆ ಮುಂದುವರಿಯುತ್ತಿರುವುದು ಕೊಡಗಿಗೆ ಮತ್ತೂ ಹೆಮ್ಮೆಯ ವಿಚಾರ.
ಕೊಡಗು ಎಂದರೆ ಸೇನಾ ವಿಚಾರದಲ್ಲಿ ಒಂದು ವಿಭಿನ್ನ ಸ್ಥಳ ಎಂಬದು ಜಿಲ್ಲೆಗೆ ಭೇಟಿ ನೀಡುವವರಿಗೆ ಅರಿವಾಗುತ್ತದೆ. ಮೈಸೂರು ಕಡೆಯಿಂದ ಗಡಿಭಾಗ ಕುಶಾಲನಗರಕ್ಕೆ ಕಾಲಿಡುತ್ತಿರುವಂತೆ ಅಲ್ಲಿನ ಹೃದಯ ಭಾಗದಲ್ಲಿ ಬರುವುದು ಫೀ.ಮಾ. ಕಾರ್ಯಪ್ಪ ವೃತ್ತ. ಅಲ್ಲಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಿದರೆ, ಮೊದಲು ಸಿಗುವುದು ಕಾರ್ಯಪ್ಪ ವೃತ್ತ ಹಾಗೂ ಮಹಾದಂಡ ನಾಯಕನ ಪ್ರತಿಮೆ. ಅನತಿದೂರ ಸಾಗಿದರೆ, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಜನರಲ್ ತಿಮ್ಮಯ್ಯ ಪ್ರತಿಮೆ... ಮತ್ತೆ ಮುಂದುವರಿದರೆ ಹುತಾತ್ಮ ಯೋಧರಾದ ಮೇಜರ್ ಮಂಗೇರಿರ ಮುತ್ತಣ್ಣ ಪ್ರತಿಮೆ ಹಾಗೂ ಸ್ಕಾ÷್ವಡ್ರರ್ನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ. ಬಹುಶಃ ಇಂತಹ ವಿಚಾರ ದೇಶದ ಇನ್ನೆಲೂ ಕಾಣಸಿಗದು.
ಇದು ಒಂದೆಡೆಯಾದರೆ ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲಿ ಮತ್ತೊಂದು ವಿಶೇಷತೆಯಿದೆ. ಇಲ್ಲಿ ದೇಶಕಂಡ ಇಬ್ಬರು ಅಪ್ರತಿಮ ಸೇನಾನಿಗಳಾದ ಫೀ.ಮಾ. ಖ್ಯಾತಿಯ ಜನರಲ್ ಕಾರ್ಯಪ್ಪ ಹಾಗೂ ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರುಗಳ ಜೋಡಿ ಪ್ರತಿಮೆ ಒಂದೇ ಸ್ಥಳದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸ್ಥಾಪನೆಯಾಗಿದೆ.
ಕಾವೇರಿ ಕಾಲೇಜಿನ ಒತ್ತಿನಲ್ಲಿ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನವರ ಪ್ರಯತ್ನದ ಫಲವಾಗಿ ಈ ಐತಿಹಾಸಿಕವಾದ ಕಾರ್ಯ ನೆರವೇರಿದೆ.
ಬಿಪಿನ್ ರಾವತ್ ಸ್ಪಂದನ
ಗೋಣಿಕೊಪ್ಪದ ಜೋಡಿ ಪ್ರತಿಮೆಯನ್ನು ಉದ್ಘಾಟನೆ ಮಾಡಿ ರುವುದು ಈ ಹಿಂದೆ ಆರ್ಮಿ ಚೀಫ್ ಆಗಿದ್ದ ಜನರಲ್ ಬಿಪಿನ್ ರಾವತ್ ಅವರು. ಪ್ರತಿಮೆ ಸ್ಥಾಪನೆ ಬಳಿಕ ಇವರ ಭೇಟಿ ತರಾತುರಿಯಲ್ಲಿ ನಿಗದಿಯಾಗಿದ್ದರಿಂದ ಆ ಸಂದರ್ಭ ದಲ್ಲಿ ಈ ಸ್ಥಳ ಅಷ್ಟಾಗಿ ಸಜ್ಜು ಗೊಂಡಿರಲಿಲ್ಲ. ಕೇವಲ ಪ್ರತಿಮೆ ಅಳವಡಿಕೆ ಹಾಗೂ ಸಣ್ಣದಾದ ರೂಫಿಂಗ್ (ಮೇಲ್ಛಾವಣಿ) ಮಾತ್ರ ರೂಪುಗೊಂಡಿತ್ತು.
(ಮೊದಲ ಪುಟದಿಂದ)
ಇದೀಗ ಮತ್ತೆ ಕಾಯಕಲ್ಪ
ಕೊಡಗಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಬಿಪಿನ್ ರಾವತ್ ಅವರು ನಂತರದಲ್ಲಿ ದೇಶದ ರಕ್ಷಣಾ ಪಡೆಯ ಸಿಡಿಎಸ್ ಆಗಿ ಅಧಿಕಾರಕ್ಕೆ ಬಂದ ಬಳಿಕ ಮತ್ತೊಮ್ಮೆ ಜಿಲ್ಲೆಗೆ ಆಗಮಿಸಿದ್ದರು. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟçಪತಿ ರಾಮನಾಥ್ ಕೋವಿಂದ್ ಜತೆ ಆಗಮಿಸಿದ್ದ ಬಿಪಿನ್ ರಾವತ್ ಅವರು ಫೋರಂನವರ ಬೇಡಿಕೆಗೆ ಸ್ಪಂದಿಸಿ ಗೋಣಿಕೊಪ್ಪದ ಜೋಡಿ ಪ್ರತಿಮೆ ಸ್ಥಳವನ್ನು ಮತ್ತಷ್ಟು ಆಕರ್ಷಕವಾಗಿ ರೂಪುಗೊಳಿಸಲು ರೂ. ೧೦ ಲಕ್ಷದ ಕೊಡುಗೆಯನ್ನು ನೀಡಿದ್ದರು. ಇದರಲ್ಲಿ ಸುಮಾರು ೨ ಲಕ್ಷ ನಂತರದಲ್ಲಿ ತಿಮ್ಮಯ್ಯ ಮ್ಯೂಸಿಯಂಗೆ ನೌಕಾದಳದಿಂದ ಯುದ್ಧನೌಕೆಯನ್ನು ತಂದು ಸಜ್ಜುಗೊಳಿಸಲು ವ್ಯಯವಾಗಿತ್ತು. ಇದೀಗ ರೂ. ೮ ಲಕ್ಷದಲ್ಲಿ ಗೋಣಿಕೊಪ್ಪಲಿನ ಪ್ರತಿಮೆ ಸ್ಥಳ ಮತ್ತೆ ಮರುಕಾಯಕಲ್ಪ ಕಾಣುತ್ತಿದೆ. ಫೋರಂನ ಆಡಳಿತ ಮಂಡಳಿಯ ಮುತುವರ್ಜಿಯಲ್ಲಿ ಈ ಸ್ಥಳ ಆಕರ್ಷಣೀಯವಾಗುತ್ತಿದೆ.
ಬಿಪಿನ್ ರಾವತ್ ಅವರು ನೀಡಿದ್ದ ಅನುದಾನದಲ್ಲಿ ಬಾಕಿ ಇದ್ದ ರೂ. ೮ ಲಕ್ಷ ಹಾಗೂ ಹೆಚ್ಚುವರಿಯಾಗಿ ಬೇಕಾದ ಹಣವನ್ನು ಫೋರಂನವರು ಭರಿಸಿ ಕೆಲಸ ಸಾಗುತ್ತಿದೆ. ಈ ಹಿಂದೆ ಅಳವಡಿಸಿದ್ದ ಪ್ರತಿಮೆಯನ್ನು ತೆಗೆದು ಮತ್ತೆ ಭದ್ರ ಬುನಾದಿಯೊಂದಿಗೆ ಮರು ಅಳವಡಿಸಲಾಗಿದೆ. ಮಳೆ - ಗಾಳಿಯಿಂದ ಅಸುರಕ್ಷಿತವೆನಿಸಿದ್ದ ಹಳೆಯ ರೂಫಿಂಗ್ ಅನ್ನು ತೆರವುಗೊಳಿಸಿ ಹೊಸದಾಗಿ ಸ್ಥಳವನ್ನು ಪರಿವರ್ತಿಸಲಾಗುತ್ತಿದೆ. ಈ ಹಿಂದೆ ಪ್ರತಿಮೆಸ್ಥಳ ಕೇವಲ ೧೨ ಅಡಿ ಉದ್ದ ೧೦ ಅಡಿ ಅಗಲ ಹೊಂದಿತ್ತು. ಇದೀಗ ೩೦x೨೦ ರ ವಿಶಾಲ ಸ್ಥಳವಾಗಿ ಇದು ರೂಪುಗೊಳ್ಳುತ್ತಿದೆ. ಪ್ರತಿಮೆಯ ಸ್ಥಳದ ಸುತ್ತ ಕೊಡಗಿನ ಐನ್‌ಮನೆಯ ರೀತಿಯ ಐಮರವನ್ನು (ಕೂರುವಸ್ಥಳ) ನಿರ್ಮಿಸಲಾಗುವುದು, ಇದರೊಂದಿಗೆ ಎದುರು ಭಾಗದಲ್ಲಿ ಎರಡು ಕನ್ನಿಕಂಬಗಳನ್ನು ಅಳವಡಿಸಲಾಗುವುದು. ಹಿಂಬದಿಯ ಗೋಡೆಯನ್ನು ಉತ್ತಮ ವಿನ್ಯಾಸ (ಆರ್ಕಿಟೆಕ್ಟ್)ದೊಂದಿಗೆ ಸಜ್ಜುಗೊಳಿಸಲಾಗುವುದು ಎಂದು ಫೋರಂನ ಅಧ್ಯಕ್ಷರಾದ ನಿವೃತ್ತ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ ಅವರು ‘ಶಕ್ತಿ’ಗೆ ಮಾಹಿತಿ ನೀಡಿದರು.
ಗುತ್ತಿಗೆದಾರರಾಗಿ ಆದೇಂಗಡ ಪ್ರದೀಪ್, ಆರ್ಕಿಟೆಕ್ಟ್ ಆಗಿ ಬಡುವಮಂಡ ಅನೂಪ್ ಮಂದಣ್ಣ, ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸ್ಥಳದಲ್ಲಿ ಗ್ರಾನೈಟ್‌ಗಳನ್ನು ಅಳವಡಿಸಿ ಸ್ಥಳವನ್ನು ಆಕರ್ಷಕವಾಗಿಸಲಾಗುತ್ತಿದ್ದು,. ಕೈಕೇರಿಯವರಾದ ಕುಪ್ಪಂಡ ಗಾಂಧಿ ಪೊನ್ನಪ್ಪ ಅವರು ಶೇ. ೫೦ರ ರಿಯಾಯಿತಿ ದರದಲ್ಲಿ ಗ್ರಾನೈಟ್ ನೀಡುತ್ತಿದ್ದಾರೆ ಎಂದು ಸುಬ್ಬಯ್ಯ ಅವರು ತಿಳಿಸಿದರು. ಪ್ರತಿಮೆ ಸ್ಥಳದಲ್ಲಿ ಫೋಕಸ್ ಲೈಟಿಂಗ್, ಸೋಲಾರ್ ಪ್ಯಾನೆಲ್, ಗಾರ್ಡನ್, ಲಾನ್ ನಿರ್ಮಾಣವಾಗಲಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯೂ ಕೆಲವು ಅಗತ್ಯ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದೆ ಎಂದು ಅವರು ವಿವರಿಸಿದರು.
ನಿರ್ವಹಣೆಗೆ ಅವಕಾಶ
ಪ್ರಸ್ತುತ ಈ ತನಕ ಪ್ರತಿಮೆಯನ್ನು ಕಾವೇರಿ ಕಾಲೇಜಿನ ಎನ್‌ಸಿಸಿ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಇದೀಗ ಸ್ಥಳ ಮತ್ತೆ ಕಾಯಕಲ್ಪ ಕಂಡ ಬಳಿಕ ಇವರಿಗೆ ಇದು ಕಷ್ಟ ಸಾಧ್ಯವಾಗಲಿದೆ. ಈ ಹಿನ್ನೆಲೆ ಸ್ಥಳವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಯಾರಾದರೂ ಮುಂದೆ ಬಂದಲ್ಲಿ ಅವಕಾಶ ಕಲ್ಪಿಸಲಾಗುವುದು. ಆದರೆ ಯಾವುದೇ ಕಾರಣಕ್ಕೂ ಈ ವಿಚಾರವನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಡಲಾಗುವುದಿಲ್ಲ. ಸ್ವಯಂಪ್ರೇರಣೆಯಿAದ ಮುಂದೆ ಬರುವವರಿಗೆ ಅವಕಾಶ ನೀಡಲಾಗುವುದು. ಆಸಕ್ತರಿದ್ದಲ್ಲಿ (ಮೊ. ೯೯೦೦೩೨೮೪೮೫) ಸಂಪರ್ಕಿಸಬಹುದಾಗಿದೆ.
ಮರು ಕಾಯಕಲ್ಪದ ಕೆಲಸ ಪೂರ್ಣಗೊಂಡ ಬಳಿಕ ಮುಂದಿನ ಜನವರಿಯಲ್ಲಿ ಸೇನಾದಿನಾಚರಣೆ ಸಂದರ್ಭ ಅಥವಾ ಬೇರೆ ದಿನ ನಿಗದಿಪಡಿಸಿ ಸೇನೆಯ ಪ್ರಮುಖರನ್ನು ಕರೆಸಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸುಬ್ಬಯ್ಯ ಮಾಹಿತಿಯಿತ್ತರು.