ಕುಶಾಲನಗರ, ನ. ೭: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ದಿನಾಚರಣೆ ಹಾಗೂ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲೂಕು ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲೂಕು ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜ ದಿನಾಚರಣೆಯ ಧ್ವಜ ಚೀಟಿಯನ್ನು ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಬಿಡುಗಡೆ ಮಾಡಿದರು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಕಿರಣ್ ಗೌರಯ್ಯ ಸ್ಕೌಟ್ಸ್ ಮತ್ತು ಗೈಡ್ಸ್ಯಿಂದ ಸಂಸ್ಥೆಯು ವಿದ್ಯಾರ್ಥಿಗಳಿಗೆ ದೇಶಭಕ್ತಿ ಹಾಗೂ ದೇಶದ ಕುರಿತಾದ ಕರ್ತವ್ಯಗಳನ್ನು ತಿಳಿಹೇಳುವ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಧ್ವಜ ದಿನಾಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲೂಕು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದಲ್ಲಿ ಶಿಸ್ತು - ಸಂಯಮ ಹಾಗೂ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ದೇಶದ ಪ್ರಗತಿಗೆ ಪ್ರತಿ ಯೊಬ್ಬರೂ ಸಂಕಲ್ಪ ಹೊಂದಬೇಕೆAಬ ಸದಾಶಯಗಳನ್ನು ಹೊಂದಿದೆ ಎಂದರು.
ಧ್ವಜ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಪ್ರೇಮಕುಮಾರ್, ಭ್ರಾತೃತ್ವ ಹಾಗೂ ಭಾವೈಕ್ಯತೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಶಿರಸ್ತೇದಾರ್ ಬಿ.ಪಿ. ಅನಿತ, ಕಂದಾಯಾಧಿಕಾರಿ ಸಂತೋಷ್, ಸ್ಕೌಟ್ಸ್, ಗೈಡ್ಸ್ನ ಕುಶಾಲನಗರ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ವಿ.ಅರುಣ್, ಕೆ.ಪಿ. ರಾಜು, ಕಾರ್ಯದರ್ಶಿ ಎಂಎಸ್. ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್. ಶಿವಲಿಂಗ, ಹಾಗೂ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ಸ್ನ ವಿದ್ಯಾರ್ಥಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.