ಮಡಿಕೇರಿ, ನ. ೭ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾಲೂಕಿನ ಚೆಯ್ಯಂಡಾಣೆ ಗ್ರಾಮದ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವವು ತಾ. ೧೦ ರಂದು ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.
ನಗರದ ಅಕಾಡೆಮಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಅರೆಭಾಷೆಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಅಂದು ಬೆಳಿಗ್ಗೆ ೮.೩೦ ಗಂಟೆಗೆ ಕಡಂಗ ಗಣಪತಿ ದೇವಸ್ಥಾನದ ಎದುರಿನಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡುವ ಮೂಲಕ ಉತ್ಸವ ಆರಂಭಗೊಳ್ಳಲಿದೆ.
ನAತರ ಬೆಳಗ್ಗೆ ೯.೩೦ ಗಂಟೆಗೆ ಧ್ವಜಾರೋಹಣ ಮತ್ತು ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ನರಿಯಂದಡ ಗ್ರಾ.ಪಂ. ಅಧ್ಯಕ್ಷ ಪೆಮ್ಮಂಡ ಕೌಶಿ ಕಾವೇರಮ್ಮ, ನೌಕಾದಳದ ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ, ಯವಕಪಾಡಿ ನಿವೃತ್ತ ಶಿಕ್ಷಕಿ ಮಂಞAಡ್ರ ರೇಖಾ ಉಲ್ಲಾಸ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಳಿಗ್ಗೆ ೧೦ ಗಂಟೆಗೆ ವಿವಿಧ ಕ್ರೀಡಾಕೂಟ ಮತ್ತು ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ ೧.೩೦ ಕ್ಕೆ ಚೆಯ್ಯಂಡಾಣೆ ಮುಖ್ಯರಸ್ತೆಯಿಂದ ಶಾಲೆವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಆಕರ್ಷಕ ಹುಲಿವೇಷ ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳ ಪ್ರದರ್ಶನವಿರುತ್ತದೆ ಎಂದು ಸದಾನಂದ ಮಾವಜಿ ತಿಳಿಸಿದರು.
ಮಧ್ಯಾಹ್ನ ೨ ಗಂಟೆಗೆ ಪುರುಷರ ಹಗ್ಗಜಗ್ಗಾಟದ ಅಂತಿಮ ಪಂದ್ಯಾಟ ನಡೆಯಲಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಅರೆಭಾಷೆ ಕುರಿತು ಉಪನ್ಯಾಸ, ಹಿರಿಯ ಸಾಧಕರಿಗೆ ಸನ್ಮಾನ, ಬಹುಮಾನಗಳ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೩.೩೦ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಸಭಾ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
(ಮೊದಲ ಪುಟದಿಂದ) ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾಕುಶಾಲಪ್ಪ, ಎಸ್.ಎಲ್. ಭೋಜೇಗೌಡ, ಡಾ. ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ. ಬೋಪಯ್ಯ ಬಹುಮಾನ ವಿತರಿಸಲಿದ್ದಾರೆ. ಮಡಿಕೇರಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಸಮಾರೋಪ ಭಾಷಣ ಮಾಡಲಿದ್ದಾರೆ. ಪಾರಾಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ, ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷÀ ಹರಿಪ್ರಸಾದ್ ಬೆಳಿಯಂಡ್ರ, ಮೈಸೂರು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್, ಚೆಯ್ಯಂಡಾಣೆ ಸ.ಹಿ.ಮಾ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಕುಮಾರಿ, ಕೆದಮುಳ್ಳೂರು ಗ್ರಾ.ಪಂ. ಮಾಜಿ ಸದಸ್ಯ ಗೌಡುಧಾರೆ ಚೋಟು ಬಿದ್ದಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷರು ಮಾಹಿತಿ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ದಶವರ್ಷ ಸಂಭ್ರಮದ ಸ್ಮರಣಾರ್ಥ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅರೆಭಾಷಿಕರು ಇರುವ ಗಡಿಪ್ರದೇಶಗಳಲ್ಲಿ ಅರೆಭಾಷಿಕರ ಬಾಂಧವ್ಯವನ್ನು ವೃದ್ಧಿಸಿ ಅರೆಭಾಷೆಯನ್ನು ಮತ್ತಷ್ಟು ಬೆಳೆಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರೆಭಾಷೆ ಗಡಿನಾಡ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸದಾನಂದ ಮಾವಜಿ ಹೇಳಿದರು.
ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ ಅವರು ಮಾತನಾಡಿದರು. ಅರೆಭಾಷೆ ಗಡಿನಾಡ ಉತ್ಸವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಗಡಿನಾಡ ಉತ್ಸವ ಅಂಗವಾಗಿ ನಡೆಯುವ ಆಟೋಟಗಳಲ್ಲಿ ಗುಡ್ಡಗಾಡು ಓಟ, ೫ ವರ್ಷದೊಳಗಿನ ಮಕ್ಕಳಿಗೆ ಕಾಳು ಹೆಕ್ಕುವುದು, ೫ ರಿಂದ ೧೦ ವರ್ಷದೊಳಗಿನ ಮಕ್ಕಳಿಗೆ ೫೦ ಮೀಟರ್ ಓಟ, ೧೦ ರಿಂದ ೧೫ ವರ್ಷದೊಳಗಿನ ಮಕ್ಕಳಿಗೆ ೧೦೦ ಮೀಟರ್ ಓಟ, ಪುರುಷರಿಗೆ ಭಾರದ ಗುಂಡು ಎಸೆತ, ೬೦ ವರ್ಷ ಮೇಲ್ಪಟ್ಟವರಿಗೆ ೭೫ ಮೀಟರ್ ಓಟ, ೧೫ ರಿಂದ ೨೦ ವರ್ಷದೊಳಗಿನ ಯುವಕರಿಗೆ ೨೦೦ ಮೀಟರ್ ಓಟ, ೨೦ ಮೇಲ್ಪಟ್ಟ ಮಹಿಳೆಯರಿಗೆ ಪಾಸ್ ಇನ್ ದ ಬಾಲ್, ಬಾಂಬ್ ಇನ್‌ದ ಸಿಟಿ ಆಟ ನಡೆಯಲಿದ್ದು, ಹಗ್ಗ ಜಗ್ಗಾಟ, ಊರಿನವರಿಗೆ ಸೋಬಾನೆ ಹೇಳುವ ಸ್ಪರ್ಧೆ ನಡೆಯಲಿದೆ. ಈ ಆಟೋಟಗಳಲ್ಲಿ ಕೆದಮುಳ್ಳೂರು, ಕೊಡಂಜಗೇರಿ, ನರಿಯಂದಡ, ಕಕ್ಕಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರೆಭಾಷಿಕರು ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ನರಿಯಂದಡ ಅಯ್ಯಪ್ಪ ಯುವಕ ಸಂಘದ ಗೌರವ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಅರೆಭಾಷೆ ಗಡಿನಾಡ ಉತ್ಸವ ಸಿದ್ಧತೆ ಬಗ್ಗೆ ವಿವರಿಸಿದರು. ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ವಿನೋದ್ ಮೂಡಗದ್ದೆ ಸುದ್ದಿಗೋಷ್ಠಿಯಲ್ಲಿ ಇದ್ದರು.