ಐಗೂರು, ನ. ೭: ಕೊಡಗು ಜಿಲ್ಲಾ ಕ.ಸಾ.ಪ., ಸೋಮವಾರಪೇಟೆ ಹೋಬಳಿ ಘಟಕ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಗುಂದ ಆಶ್ರಯದಲ್ಲಿ ಎಸ್.ಎಸ್. ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ವಹಿಸಿದ್ದರು. ಬಳಗುಂದ ಶಾಲಾ ಮಕ್ಕಳು ಹಚ್ಚೇವು ಕನ್ನಡದ ದೀಪದ ನೃತ್ಯವನ್ನು ಮಾಡಿ ದರು. ಪ್ರಾಸ್ತಾವಿಕ ನುಡಿಯನ್ನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಐಗೂರಿಗೆ ಕನ್ನಡದ ರಥ ಬಂದಾಗ ವಿಜೃಂಭಣೆಯಿAದ ಸ್ವಾಗತಿಸಿರುವುದು ಗ್ರಾಮಸ್ಥರ ಕನ್ನಡಾಭಿ ಮಾನವನ್ನು ತೋರಿಸುತ್ತದೆ. ಈ ಹಿಂದೆ ಇದ್ದ ೧೯ ಸಂಖ್ಯೆಯ ದತ್ತಿನಿಧಿ ಈಗ ೩೫ ಸಂಖ್ಯೆಗೆ ಏರಿರುವುದು ಕನ್ನಡದ ಏಳಿಗೆಯನ್ನು ತಿಳಿಸುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್ ಮಾತನಾಡಿ, ಕ್ಲಸ್ಟರ್ನ ಭಾಗದ ಎಲ್ಲಾ ಶಿಕ್ಷಕರನ್ನು ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿ ಮಾಡುವುದರ ಜೊತೆಗೆ ಸಾಹಿತ್ಯ ಸೇವೆಗೆ ದತ್ತಿನಿಧಿ ನೀಡುವುದಾಗಿ ತಿಳಿಸಿದರು.
‘ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡದ ಕವಿಗಳ ಕೊಡುಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಸಾಂದೀಪಿನಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವಸಂತಿ ರವೀಂದ್ರ, ಕನ್ನಡವೆಂಬ ತೋಟದಲ್ಲಿ ನಾವೆಲ್ಲ ಗರಿಬಿಚ್ಚಿ ಹಾರುವ ಹಕ್ಕಿಗಳಾಗಿದ್ದು, ಮಾಸ್ತಿ ಕನ್ನಡದ ಆಸ್ತಿಯಾಗಿದ್ದಾರೆ, ಹಳೆಗನ್ನಡದಲ್ಲಿ ಪಂಪನಿಗೆ ಅಗ್ರಸ್ಥಾನ ವಿದ್ದು, ಅಕ್ಕಮಹಾದೇವಿಯವರು ಕನ್ನಡದ ಮೊದಲ ಕವಯತ್ರಿ ಆಗಿದ್ದಾರೆ, ನಾವು ಏಕಾಂತದಲ್ಲಿದ್ದಾಗ ಮಾತ್ರ ಕವನಗಳು ಹುಟ್ಟುತ್ತದೆ ಎಂದರು. ಅತಿಥಿ ಭಾಷಣ ಮಾಡಿದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ವಿಜೇತ್ ಬಳಗುಂದ ಶಾಲೆಯ ಹಚ್ಚೇವು ದೀಪ ಕಾರ್ಯಕ್ರಮದಲ್ಲಿ ಉತ್ತಮವಾಗಿ ಹಾಡಿದ ಬಳಗುಂದ ಶಾಲೆಯ ವಿದ್ಯಾರ್ಥಿನಿ ರಿತಶ್ರೀಯನ್ನು ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿ ಸುದರ್ಶನ್ ಮತ್ತು ಬಳಗುಂದ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ ಸಾಹಿತ್ಯದ ಬಗ್ಗೆ ಮಾತನಾಡಿದರು. ಶಿಕ್ಷಕ ಅಜಿತ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಕಾಜೂರು ಶಾಲೆಯ ಮುಖ್ಯ ಶಿಕ್ಷಕಿ ಸರಳ ಕುಮಾರಿ ಸ್ವಾಗತಿಸಿ, ಶಿಕ್ಷಕಿ ಅನಸೂಯ ಕಾರ್ಯಕ್ರಮ ನಿರೂಪಿಸಿದರು. ಸಿ.ಆರ್.ಪಿ. ಗಿರೀಶ್, ಬೇಳೂರು ಗ್ರಾ.ಪಂ. ಉಪಾಧ್ಯಕ್ಷ ಕೆ. ಸುದರ್ಶನ್, ಕಸಾಪ ಸದಸ್ಯರುಗಳಾದ ಜಲಜ ಶೇಖರ್, ಜವರಪ್ಪ, ವೀರರಾಜು, ರಂಗಸ್ವಾಮಿ, ದಿನೇಶ್, ಹೇಮಂತ್ ಪಾರೆರ, ಹೊನ್ನಪ್ಪ, ಸೋಮಪ್ಪ, ಕಾರ್ಯದರ್ಶಿ ಬೆಳ್ಳಿಯಪ್ಪ, ಮಚ್ಚಂಡ ಅಶೋಕ್, ಭಾಗ್ಯ ಮತ್ತು ಬಳಗುಂದ ಶಾಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು.