ಮಡಿಕೇರಿ, ನ. ೭: ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಮೊದಲ ಬಾರಿಗೆ ಅಜ್ಜಿ ತಾತಂದಿರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ವಹಿಸಿದ್ದರು.

ಅತಿಥಿಗಳಾಗಿ ಶಾಲಾ ಆಡಳಿತ ಅಧಿಕಾರಿ ಎನ್.ಎ. ಪೊನ್ನಮ್ಮ ಹಾಗೂ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸವಿತಾ ಎಂ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ಮನೆಯಲ್ಲಿ ಅಜ್ಜಿ - ತಾತಂದಿರು ಇದ್ದರೆ ಅವರುಗಳು ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ತಿಳುವಳಿಕೆಯನ್ನು ನೀಡುವುದರಿಂದ ಮಕ್ಕಳು ಸುಸಂಸ್ಕೃತರಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದರು.

ಪುಟಾಣಿಗಳು ದಿನದ ಮಹತ್ವದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿಗಳಿಂದ ನೃತ್ಯ ಹಾಗೂ ಅಜ್ಜಿ ತಾತಂದಿರಿಗೆ ಕೆಲವು ಸ್ಪರ್ಧೆಗಳನ್ನು ನಡೆಸಲಾಯಿತು. ಮಂಡುವAಡ ಮುತ್ತಪ್ಪ ಮಾತನಾಡಿ, ಮಕ್ಕಳ ಪ್ರತಿಭೆಗೆ ನಾವು ಪ್ರೋತ್ಸಾಹ ಕೊಡಬೇಕು. ಈಗಿನ ಸಮಾಜದಲ್ಲಿ ಮಕ್ಕಳು ಮುಂದೆ ಬರಬೇಕಾದರೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು. ಕಾರ್ಯಕ್ರಮದ ಕುರಿತು ಅಜ್ಜಿ, ತಾತಂದಿರು ಅನಿಸಿಕೆ ವ್ಯಕ್ತಪಡಿಸಿದರು.

ಆಟೋಟ ಸ್ಪರ್ಧೆಗಳನ್ನು ಭರತ್ ಕೆ.ಎನ್. ಮತ್ತು ದೈಹಿಕ ಶಿಕ್ಷಕರುಗಳಾದ ಈರಪ್ಪ ಹೆಚ್.ಎನ್. ಹಾಗೂ ಸೀಮಾ ಪರ್ವಿನ್ ನಡೆಸಿಕೊಟ್ಟರು. ವಿನ್ಯಾ ಉತ್ತಪ್ಪ, ಕುಸುಮ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಚಂದ್ರಾವತಿ ಪ್ರಾರ್ಥಿಸಿದರು. ಶಾಹಿರ ಎಂ.ಹೆಚ್. ಸ್ವಾಗತಿಸಿ, ಮಿಥಿಲಾ ಪೊನ್ನಪ್ಪ ಸಿ. ವಂದಿಸಿದರು.