ವೀರಾಜಪೇಟೆ, ನ. ೭: ಕಂದಾಯ ಇಲಾಖೆ ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಆದೇಶದಂತೆ ವೀರಾಜಪೇಟೆ ತಾಲೂಕು ಬಗರ್ ಹುಕುಂ ಸಮಿತಿ (ಅಕ್ರಮ ಸಕ್ರಮ) ಸಮಿತಿ ವತಿಯಿಂದ ೧೩ ಫಲಾನುಭವಿಗಳಿಗೆ ಹಕ್ಕು ಪತ್ರ ಮಂಜೂರಾಗಿದ್ದು, ಮುಂದೆ ಹೆಚ್ಚಿನ ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದು ಬಗರ್ ಹುಕುಂ ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ತಹಶೀಲ್ದಾರ್ ರಾಮಚಂದ್ರ ತಿಳಿಸಿದ್ದಾರೆ.
ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಬಗರ್ ಹುಕುಂ ಸಮಿತಿಯ ಅಧ್ಯಕ್ಷ ಆರ್. ಕೆ ಸಲಾಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಮಾಹಿತಿ ನೀಡಿ, ಹಿಂದೆ ೫೭ ಮಂದಿಗೆ ಸಾಗುವಳಿ ಪತ್ರಗಳನ್ನು ವಿತರಿಸಲಾಗಿದೆ. ಆರಂಭದಲ್ಲಿ ತಾತ್ಕಾಲಿಕ ನೋಂದಾವಣಿ ಮಾಡಿ ಹಕ್ಕು ಪತ್ರ ನೀಡಲಾಗುತ್ತ್ತದೆ. ನಂತರ ಹದಿನೈದು ದಿನದ ಕಾಲಾವಕಾಶ ನೀಡಿ ಗ್ರಾಮದ ಜನರಿಂದ ಆಕ್ಷೇಪಣೆಗಳಿದೆಯೇ ಎಂದು ಪರಿಶೀಲಿಸಿ ಆಕ್ಷೇಪಣೆ ಇಲ್ಲವಾದರೆ ನಂತರ ಅವರಿಗೆ ಸಮಿತಿಯ ವತಿಯಿಂದ ಅಧಿಕೃತವಾಗಿ ನೋಂದಾವಣಿ ಮಾಡಿ ಕೊಟ್ಟು ಸಮರ್ಪಕ ದಾಖಲೆಯನ್ನು ಮಾಡಲಾಗುತ್ತದೆ.
ಈ ಹಿಂದೆ ಮೂರು ವರ್ಷಗಳ ಕಾಲ ಯಾವ ಮಂಜೂರಾತಿ ಆಗದ ಕಾರಣ ೧,೫೧೯ ಅರ್ಜಿ ಉಳಿದಿದ್ದು, ಸಮಿತಿ
(ಮೊದಲ ಪುಟದಿಂದ) ರಚನೆಯಾದ ಬಳಿಕ ಇದರಲ್ಲಿ ೩೫೨ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದ ಅರ್ಜಿಯಲ್ಲಿ ೫೭ ಜನರಿಗೆ ಈಗಾಗಲೇ ಹಕ್ಕು ಪತ್ರ ನೀಡಲಾಗಿದೆ. ೧೩ ಜನರಿಗೆ ಹಕ್ಕುಪತ್ರ ಮಂಜೂರು ಮಾಡಲಾಗಿದೆ.
ಇಲ್ಲಿ ಕೆಲವು ಮಾನದಂಡಗಳಿದ್ದು, ೦೧.೦೧.೨೦೦೨ ಕ್ಕೆ ಮುಂಚಿತವಾಗಿ ಸರಕಾರಿ ಜಾಗದಲ್ಲಿ ಸಾಗುವಳಿ ಮಾಡಿದ ಫಲನುಭವಿಗಳಿಗೆ ಸರ್ಕಾರದ ನಿಯಮ ಹಾಗೂ ಮಾನದಂಡದAತೆ ನಿಗದಿತ ಅಳತೆಯ ಜಮೀನಿಗೆ ಅರ್ಜಿ ಹಾಕಿದವರ ಅರ್ಜಿಯನ್ನು ಮಾನ್ಯ ಮಾಡಲಾಗುತ್ತದೆ. ಪುರಸಭೆ ವ್ಯಾಪ್ತಿಯ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಅರಣ್ಯ ಭೂಮಿಗೆ ಅರ್ಜಿ ಸಲ್ಲಿಸುವಂತಿಲ್ಲ. ಜಾಗದ ಪರಿಶೀಲನೆ ಆನ್ಲೈನ್ ಮೂಲಕ ಪಾರದರ್ಶಕವಾಗಿ ನಡೆಯುತ್ತಿದ್ದು, ಆಯಾ ಗ್ರಾಮದಲ್ಲಿರುವ ಬಗರ್ಹುಕುಂ ಮಂಜೂರಾತಿ ಭೂಮಿಯನ್ನು ಗೂಗಲ್ ಮೂಲಕ ಪರಿಶೀಲಿಸಿ ಸಾಗುವಳಿ ಸ್ಥಳ ಮನೆ ಎಲ್ಲವನ್ನೂ ನಿಖರವಾಗಿ ಗುರುತಿಸಿ ಕಂದಾಯ ಸಚಿವಾಲಯದ ನಿಯಮದಂತೆ ದಾಖಲಿಸಲಾಗುತ್ತದೆ. ಈ ಜಾಗವನ್ನು ರಾಜ್ಯದ ಎಲ್ಲಿ ಬೇಕಾದರೂ ಗೂಗಲ್ ಮೂಲಕ ನೋಡಬಹುದಾಗಿದೆ. ಮುಂದಿನ ದಿನದಲ್ಲಿ ಸಮಿತಿ ಉಳಿದ ಅರ್ಜಿಯನ್ನು ಪರಿಶೀಲಿಸಿ ಉಳಿದ ಅರ್ಹ ಅರ್ಜಿದಾರರಿಗೆ ಸಾಗುವಳಿ ಪತ್ರ ಮಂಜೂರು ಮಾಡುತ್ತದೆ ಎಂದು ತಹಶೀಲ್ದಾರ್ ರಾಮಚಂದ್ರ ವಿವರಣೆ ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ವಕೀಲ ಪಿ.ಜಿ ಅಯ್ಯಪ್ಪ ವಿ.ಕೆ ಸತೀಶ್, ಕೋಳೆರ ಟೀನಾ ಬಗರ್ಹುಕುಂ ಭೂಮಿ ಸಮನ್ವಯ ಅಧಿಕಾರಿ ನಿತಿನ್, ಶಿರಸ್ತೇದಾರ್ ಪುರುಷೋತ್ತಮ ವೀರಾಜಪೇಟೆ ಕಂದಾಯ ಪರಿವೀಕ್ಷಕ ಹರೀಶ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಸಿಬ್ಬಂದಿ ಶಿಲ್ಪ ಉಪಸ್ಥಿತರಿದ್ದರು.