ವೀರಾಜಪೇಟೆ, ನ. ೮: ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಹೆಚ್ಚು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ವೀರಾಜಪೇಟೆ ಪುರಸಭೆ ಅಧ್ಯಕ್ಷೆ ಮನಿಯಪಂಡ ದೇಚಮ್ಮ ಕಾಳಪ್ಪ ಹೇಳಿದರು.

ವೀರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಗರ ಹಾಗೂ ಪಟ್ಟಣಗಳಲ್ಲಿ ಇತರೆ ಭಾಷಿಕರಿಂದ ಕನ್ನಡ ಭಾಷೆಯ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗದ ಅವಕಾಶವು ಕಡಿಮೆಯಾಗುತ್ತಿದೆ. ಸರಕಾರದ ನಿಯಮದಂತೆ ವೀರಾಜಪೇಟೆ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವುದು ಕಡ್ಡಾಯವಾಗಿದೆ. ನಂತರ ಇತರೆ ಭಾಷೆಯನ್ನು ಸೇರಿಸಿಕೊಳ್ಳವುದು. ಇದಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ನಂತರದ ದಿನಗಳಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತೀರ್ಮಾನಿಸಲಾಗಿದೆ. ನವೆಂಬರ್ ತಿಂಗಳು ಕನ್ನಡ ರಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು ಇದಕ್ಕೆ ಜಾತಿ ಮತ ಬೇಧÀವಿಲ್ಲದೆ ಎಲ್ಲಾ ಭಾಷೆಯ ಜನರು ಸಹಕಾರ ನೀಡುತ್ತಿರುವುದಾಗಿ ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಪ್ರತಿಯೋಬ್ಬರು ಸಹಕಾರ ನೀಡುವಂತಾಗಬೇಕು. ಗಡಿ ಭಾಗವಾದ ವೀರಾಜಪೇಟೆ ಕರ್ನಾಟಕ ಸಂಘದಿAದ ಮುಂದಿನ ದಿನದಲ್ಲಿ ಇನ್ನು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು. ವೇದಿಕೆಯಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳAಡ ಕುಸುಮ ಸೋಮಣ್ಣ, ಖಜಾಂಚಿ ಕೋಟೆರ ಯು. ಗಣೇಶ್ ತಮ್ಮಯ್ಯ, ನಿರ್ದೇಶಕರಾದ ಸಿ.ಪಿ.ಕಾವೇರಪ್ಪ, ಸಿ.ಎಂ.ಸುರೇಶ್ ನಾಣಯ್ಯ, ಪಿ.ಎಸ್.ನಂದ, ಕೆ.ಎಂ.ಮೊಣ್ಣಪ್ಪ ಬಾಚಿರ ಗಣೇಶ್ ಬಿದ್ದಪ್ಪ, ಮುಂಡAಡ ರಾಣು ಮಂದಣ್ಣ, ಬೊಳ್ಯಪಂಡ ಸುರೇಶ್, ಕಚೇರಿ ಕಾರ್ಯದರ್ಶಿ ಎಂ.ಪಿ.ರಾಧ ಉಪಸ್ಥಿತರಿದ್ದರು.

ಕ್ರೀಡಾ ಕ್ಷೇತ್ರದಲ್ಲಿ ಮಾಳೇಟಿರ ದಿಶ ಪೊನ್ನಮ್ಮ, ಸೇನಾ ಕ್ಷೇತ್ರದ ಕಟ್ಟೆರ ಲೋಕೇಶ್, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕೆ.ಸಿ.ಗೀತಾಂಜಲಿ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು, ತೀರ್ಪುಗಾರರಾಗಿ ಹಿರಿಯ ಕಲಾವಿದರಾದ ತಾತಂಡ ಪ್ರಭಾನಾಣಯ್ಯ ಭಾಗವಹಿಸಿದ್ದರು, ಸಂಘದ ಸುರೇಶ್ ನಾಣಯ್ಯ ಸ್ವಾಗತಿಸಿದರು. ಪುರಸಭೆ ಸದಸ್ಯೆ ಆಶಾ ಸುಬ್ಬಯ್ಯ ನಿರೂಪಿಸಿ, ಗಿರೀಶ್ ಪೂಣಚ್ಚ ವಂದಿಸಿದರು.