ಗೋಣಿಕೊಪ್ಪಲು, ನ. ೮: ಮಕ್ಕಳಲ್ಲಿ ಅಡಗಿರುವ ಆಂತರಿಕ ಪ್ರತಿಭೆಯನ್ನು ಹೊರ ಸೂಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯಂತ ಪ್ರಯೋಜನಕಾರಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಕ್ಷಣ ಇಲಾಖೆಯು ಹಮ್ಮಿಕೊಂಡಿರುವ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಕಲೋತ್ಸವ ಸ್ಪರ್ಧೆಗಳು ಉತ್ತಮ ವೇದಿಕೆಯಾಗಿದೆ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನುಡಿದಂತೆ ನಡೆ ನಡೆದಂತೆ ನುಡಿ ಎಂಬುವುದನ್ನು ಅಳವಡಿಸಿಕೊಂಡಲ್ಲಿ ತಮ್ಮ ಜೀವನ ಅತ್ಯಂತ ಉತ್ತಮವಾಗಿ ನಡೆಯಲಿದೆ ಎಂದು ಅರುವತ್ತೋಕ್ಲು ಸರ್ವದೈವತಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೊಡಗು ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕಚೇರಿ ಗೋಣಿಕೊಪ್ಪ ಸಮೂಹ ಸಂಪನ್ಮೂಲ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅರುವತ್ತೋಕ್ಲು ಸರ್ವದೈವತಾ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಪ್ರತಿ ಮಕ್ಕಳಲ್ಲಿಯೂ ವಿಶೇಷ ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಅವುಗಳ ಹೊರಸೂಸುವಿಕೆಗೆ ಉತ್ತಮ ವೇದಿಕೆಗಳು ನಿರ್ಮಾಣವಾಗಬೇಕು. ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣಕ್ರೀಡೆ ನೀಡಿದರೆ ಸಾಲದು ಜೊತೆಗೆ ಮಕ್ಕಳಲ್ಲಿ ಆಂತರಿಕವಾಗಿ ಅಡಗಿರುವ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಮಾಡಬೇಕು ಎಂದರು.
ಪೊನ್ನAಪೇಟೆ ತಾಲೂಕು ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಕೆ.ರಾಧ ಮಾತನಾಡಿ ಶಿಕ್ಷಣ ಇಲಾಖೆಯು ಮಕ್ಕಳ ಪ್ರತಿಭೆ ಆನಾವರಣಕ್ಕೆ ಪ್ರತಿಭಾಕಾರಂಜಿಯನ್ನು ಕ್ಲಸ್ಟರ್ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ತಾಲೂಕು ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುತ್ತಿದೆ. ಶಾಲೆಯಲ್ಲಿರುವ ವಿದ್ಯಾರ್ಥಿಗಳಲ್ಲಿ ವಿಶೇಷವಾದ ಪ್ರತಿಭೆಗಳು ಅಡಗಿವೆ. ಅವುಗಳನ್ನು ಹೊರತರಲು ಪ್ರತಿಭಾಕಾರಂಜಿ ಉತ್ತಮ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಶಿಕ್ಷಕರ ಸಹಕಾರ ಪಡೆದು ಉತ್ತಮ ಪ್ರದರ್ಶನ ನೀಡಲು ಮುಂದೆ ಬರುತ್ತಿರುವುದು ಶ್ಲಾಘನೀಯ. ಪಾಠದೊಂದಿಗೆ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಆರ್. ರವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸರ್ಕಾರವು ಮಕ್ಕಳ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬಂದಿದೆ. ಇದರಲ್ಲಿ ಪ್ರಮುಖವಾಗಿ ಪ್ರತಿಭಾಕಾರಂಜಿಯು ವಿದ್ಯಾರ್ಥಿಗಳಲ್ಲಿ ಅಡಗಿರುವ ಹಲವು ಪ್ರತಿಭೆಗಳಿಗೆ ಉತ್ತಮ ವೇದಿಕೆ ನಿರ್ಮಿಸುವುದು ಮೂಲ ಉದ್ದೇಶವಾಗಿದೆ. ಇದರಿಂದ ಪ್ರತಿ ವಿದ್ಯಾರ್ಥಿಯಿಂದ ಪ್ರತಿಭೆಯು ಅನಾವರಣಗೊಳ್ಳುತ್ತಿದೆ. ಇದರಿಂದ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಯು ಉತ್ತಮ ರೀತಿಯಲ್ಲಿ ತನ್ನ ಪ್ರತಿಭೆಯನ್ನು ಹೊರಹಾಕಲು ಅನುಕೂಲವಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅರುವತೋಕ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶರೀಫಾ ಬೀಬಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಕೆ.ಆರ್.ಬಿಂದು, ಸರ್ವದೈವತಾ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪೊನ್ನಿಮಾಡ ಪ್ರದೀಪ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಕೆ. ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಅರುವತೋಕ್ಲು ಗ್ರಾ.ಪಂ. ಸದಸ್ಯರಾದ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಂದ್ರ, ಉಪಾಧ್ಯಕ್ಷರಾದ ಭಾರತಿ, ಟಿ.ಎನ್.ಮಹೇಶ್, ಸಂಪನ್ಮೂಲ ವ್ಯಕ್ತಿಗಳಾದ ತಿರುನೆಲ್ಲಿಮಾಡ ಜೀವನ್, ಸರ್ವದೈವತಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಮನೆಯಪಂಡ ಶೀಲಾ ಬೋಪಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಿ.ಕೃಷ್ಣಚೈತನ್ಯ, ಹಾತೂರು ಶಾಲಾ ಮುಖ್ಯ ಶಿಕ್ಷಕರಾದ ಮಾಲೀನಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಇಂದಿರಾ, ಸೋಮಯ್ಯ ಹಾಗೂ ಕುಶಾಲಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘದ ವಿವಿಧ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಕ್ಕಳ ಪ್ರತಿಭಾ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಮಕ್ಕಳು ವಿವಿಧ ವೈಯುಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮಕ್ಕಳು ಕಂಠಪಾಠ, ಧಾರ್ಮಿಕ ಪಠಣ, ಛದ್ಮವೇಷ ಸ್ಪರ್ಧೆ, ರಸಪ್ರಶ್ನೆ, ರಂಗೋಲಿ, ಜಾನಪದಗೀತೆ, ಕವ್ವಾಲಿ, ಕ್ಲೇ ಮಾಡಲಿಂಗ್, ಭಾಷಣ ಮತ್ತು ಪ್ರಬಂಧ ಸ್ಪರ್ಧೆ ಸೇರಿದಂತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಶಿಕ್ಷಕಿ ಮೋನಿಕಾ ನಿರೂಪಿಸಿ, ಗೋಣಿಕೊಪ್ಪ ಸಿಆರ್‌ಪಿ ರಾಧ ಸ್ವಾಗತಿಸಿ, ವಂದಿಸಿದರು. -ಹೆಚ್.ಕೆ. ಜಗದೀಶ್