ಮಡಿಕೇರಿ, ನ. ೮: ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-೫೦ ಪ್ರಯುಕ್ತ ಕಾರ್ಯಕ್ರಮಗಳಲ್ಲಿ ಕೊನೆಯ ಹಾಗೂ ನಾಲ್ಕನೆಯ ಕಾರ್ಯಕ್ರಮವು ನವೆಂಬರ್ ೨೦ ಮತ್ತು ೨೧ ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಅರೆಭಾಷೆ, ಕೊಡವ, ತುಳು, ಕೊಂಕಣಿ, ಬ್ಯಾರಿ ಹಾಗೂ ಯಕ್ಷಗಾನ ಅಕಾಡೆಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರು, ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಈಗಾಗಲೇ ಮೈಸೂರು, ಕರ್ನಾಟಕದ ಗಡಿ ಪ್ರದೇಶವಾಗಿರುವ ಮಹಾರಾಷ್ಟçದ ಜತ್ತ ತಾಲೂಕಿನ ಗುಡ್ಡಾಪುರ ಹಾಗೂ ರಾಯಚೂರುಗಳಲ್ಲಿ ಮೂರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಮುಂದೂಡಲ್ಪಟ್ಟಿದ್ದ ಮಂಗಳೂರಿನ ಕಾರ್ಯಕ್ರಮವು ಇದೀಗ ನಿಗದಿಯಾಗಿದೆ ಎಂದರು. ಈ ಕುರಿತು ಪೂರ್ವ ತಯಾರಿಗಳು ಈಗಾಗಲೇ ನಡೆದಿದೆ. ಮೂರು ಜಿಲ್ಲೆಗಳ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿವಿಧೆಡೆ ವಿವಿಧ ಸ್ಫರ್ಧೆಗಳನ್ನು ನಡೆಸಲಾಗಿದ್ದು, ಅಂತಿಮ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸದಾನಂದ ಮಾವಜಿ ಅವರು ನುಡಿದರು.
ಬಹುಸಂಸ್ಕೃತಿಯ ಅನಾವರಣ: ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ ವಿವಿಧ ಭಾಷಾ ಸಂಸ್ಕೃತಿ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಂಭದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಲಿದ್ದು ಇದರಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಹಾಗೂ ವಿವಿಧ ರೀತಿಯ ಸ್ಥಬ್ದಚಿತ್ರಗಳ ಪ್ರದರ್ಶನದೊಂದಿಗೆ ಬಹುಸಂಸ್ಕೃತಿಯ ಅನಾವರಣ ನಡೆಯಲಿದೆ. ಬಹುಭಾಷಾ ಸಂಸ್ಕೃತಿಗಳನ್ನು ಪರಿಚಯಿಸುವ ವಿಶೇಷ ಮೆಚ್ಚುಗೆಗೆ ಪಾತ್ರವಾಗಿರುವ ಹೊನ್ನಬಿತ್ತೇವು ನೃತ್ಯದ ಪ್ರದರ್ಶನ ಸೇರಿದಂತೆ, ನೃತ್ಯ ರೂಪಕಗಳನ್ನೊಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳೂ ನಡೆಯಲಿವೆ.
ಅದೇ ರೀತಿ ವಿವಿಧ ಸಂಪ್ರದಾಯ ಸಂಸ್ಕೃತಿಗಳನ್ನೊಳಗೊAಡ ಪ್ರಾದೇಶಿಕ ವಿಶೇಷತೆಯ ಆಹಾರ ಮೇಳ ನಡೆಯಲಿದೆ. ಅರೆಭಾಷೆ, ತುಳು, ಕೊಡವ, ಬ್ಯಾರಿ, ಕೊಂಕಣಿ ಅಕಾಡೆಮಿಗಳ ವತಿಯಿಂದ ಆಯಾಯ ಸಾಂಪ್ರದಾಯಿಕ ತಿಂಡಿ-ತಿನಿಸು, ಅಡುಗೆಗಳ ಪ್ರದರ್ಶನ ಹಾಗೂ ಮಾರಾಟವಿದೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ವಸ್ತು ಪ್ರದರ್ಶನ ಏರ್ಪಡಿಸಲಾಗುವುದು ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ವಿವರಿಸಿದರು.