ಗೋಣಿಕೊಪ್ಪಲು, ನ. ೮: ವೀರಾಜಪೇಟೆ ಪಟ್ಟಣದ ಅನತಿ ದೂರದಲ್ಲಿ ಹುಲಿ ಚಲನವಲನ ಕಂಡುಬAದಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಜಾಗ್ರತ ಕ್ರಮವಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ.
ವೀರಾಜಪೇಟೆ ಸಮೀಪದ ಮಗ್ಗುಲ ಹಾಗೂ ಐಮಂಗಲ ಗ್ರಾಮದಲ್ಲಿ ಹುಲಿಯ ಸಂಚಾರ ಇರುವ ಬಗ್ಗೆ ಸ್ಥಳೀಯರು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ತಿಳಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಕೇತ್ ಪೂವಯ್ಯ ಕೂಡಲೇ ವೀರಾಜಪೇಟೆ ಡಿಸಿಎಫ್ ಜಗನ್ನಾಥ್ ಅವರಿಗೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.
ಈ ಹಿನ್ನೆಲೆ ಶುಕ್ರವಾರ ಮುಂಜಾನೆ ವ್ಯಾಘ್ರ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಪ್ರವೃತ್ತಗೊಂಡಿದ್ದಾರೆ. ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ವೀರಾಜಪೇಟೆ ಡಿಸಿಎಫ್ ಜಗನ್ನಾಥ್, ಆರ್ಎಫ್ಒ ಶಿವರಾಮ್ ಹಾಗೂ ಸಿಬ್ಬಂದಿಗಳು ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ವೀರಾಜಪೇಟೆ - ಅಮ್ಮತ್ತಿ ಮುಖ್ಯರಸ್ತೆಗೆ ಹೊಂದಿಕೊAಡಿರುವ ಐಮಂಗಲ ಹಾಗೂ ಮಗ್ಗುಲ ಗ್ರಾಮದ ಕಡಿದಾದ ಕಾಲು ದಾರಿಯಲ್ಲಿ ಸಾಗಿ ಹುಲಿಯ ಹೆಜ್ಜೆಯನ್ನು ಹುಡುಕಾಡಿದ್ದಾರೆ.
ನಿರಂತರ ಪ್ರಯತ್ನದಿಂದ ಬೆಟ್ಟದ ಮೇಲ್ಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಕಂಡುಬAದಿದೆ. ಅಲ್ಲದೆ ಈ ಪ್ರದೇಶ ಹುಲಿಯ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಿದ್ದು, ಹುಲಿ ಪತ್ತೆ ಸಾಹಸದ ಕೆಲಸವಾಗಿದೆ. ಈಗಾಗಲೇ ಕಾರ್ಯಾಚರಣೆಗೆ ಮುನ್ನುಡಿ ಇಟ್ಟಿರುವ ಅರಣ್ಯ ಇಲಾಖೆ ಕೆಲವೆಡೆ ಸಿಸಿ ಕ್ಯಾಮರಗಳನ್ನು ಅಳವಡಿಸಿ, ಸಿಬ್ಬಂದಿಗಳನ್ನು ನಿಯೋಜಿಸಿ ವ್ಯಾಘ್ರನ ಸುಳಿವಿಗೆ ಬಲೆ ಬೀಸಿದೆ.
ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಹುಲಿ ಘರ್ಜನೆ ಹೆಚ್ಚಾಗಿ ಕೇಳಿ ಬರುತಿತ್ತು. ಅಲ್ಲದೆ ಕೆಲವರಿಗೆ ಹುಲಿಯ ಸಂಚಾರ ಕಣ್ಣಿಗೆ ಬಿದ್ದಿತ್ತು. ಗ್ರಾಮದ ಬೆಟ್ಟದಲ್ಲಿ ಕೆಲವು ಭಾಗ ಮಾತ್ರ ಕಾಫಿ ತೋಟಗಳಿದ್ದು ಉಳಿದ ಪ್ರದೇಶ ಅರಣ್ಯದಿಂದ ಆವೃತಗೊಂಡಿದೆ. ಅಲ್ಲದೆ ಸಮೀಪದಲ್ಲಿಯೇ ನೀರಿನ ವ್ಯವಸ್ಥೆ ಇರುವುದರಿಂದ ಹುಲಿ ಸುತ್ತಮುತ್ತ ಇರುವ ಬಗ್ಗೆ ಅರಣ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ.