ಮಡಿಕೇರಿ, ನ. ೯: ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರ ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ಭಾರತೀಯ ಅಂಚೆ ಇಲಾಖೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ) ಅಭಿಯಾನ ೩.೦ ಆರಂಭಿಸಿದ್ದು, ಕೊಡಗಿನಲ್ಲಿ ಈ ಸೇವೆಗೆ ಕ್ರಮ ವಹಿಸಲಾಗಿದೆ.
ನ.೩೦ರವರೆಗೆ ನಡೆಯಲಿರುವ ಅಭಿಯಾನದಲ್ಲಿ ಪಿಂಚಣಿದಾರರು ತಮ್ಮ ಜೀವನ ಪ್ರಮಾಣ ಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್ಮ್ಯಾನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಮುಖ ಚಹರೆ ಆಧಾರಿತ ಪ್ರಕ್ರಿಯೆ ಮೂಲಕ ಸಲ್ಲಿಸಬಹುದು. ಇದು ಹಿರಿಯ ಪಿಂಚಣಿದಾರರ ಬೆರಳಚ್ಚು ಗುರುತಿಸುವಲ್ಲಿ ಹಾಗೂ ಇತರೆ ಬೆರಳಚ್ಚು ಸಂಬAಧಿತ ದೃಢೀಕರಣದ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಕೇಂದ್ರ ಸರ್ಕಾರದ ನಿವೃತ್ತ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರು, ಇಪಿಎಫ್‌ಒ ಪಿಂಚಣಿದಾರರು, ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರು ಈ ಸೇವೆ ಪಡೆಯಬಹುದು. ಈ ಸೇವೆಯು ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿದಾರರಿಗೆ ಅನ್ವಯ ಆಗುವುದಿಲ್ಲ. ಈ ಸೇವೆಗೆ ಕೇವಲ ರೂ. ೭೦ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸೇವೆ ಪಡೆಯಲು ತಮ್ಮ ಹತ್ತಿರದÀ ಅಂಚೆ ಕಚೇರಿಗೆ ಭೇಟಿ ನೀಡಬಹುದು ಎಂದು ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಹತ್ತಿರದ ಅಂಚೆ ಕಚೇರಿ ಅಥವಾ ೮೧೦೫೮೬೯೫೦೨ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.