ಮಡಿಕೇರಿ, ನ. ೯: ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಕಾರ್ಯ ಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಮಾಡುವ ಮೂಲಕ ಕನ್ನಡ ಸಾಹಿತ್ಯದ ಪರಿಚಯವನ್ನು ವಿದ್ಯಾರ್ಥಿ ಗಳಿಗೆ ಮಾಡಿಕೊಡುತ್ತಿದೆ ಇದು ಶ್ಲಾಘನೀಯ ವಿಚಾರ ಎಂದು ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಬೋಡಂಗಡ ಅಯ್ಯಪ್ಪ ನುಡಿದರು.

ಅವರು ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀಮಂಗಲ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ದತ್ತಿನಿಧಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೊಡಗಿನ ಗಡಿಭಾಗವಾದ ಶ್ರೀಮಂಗಲ ಗ್ರಾಮದಲ್ಲಿ ಕನ್ನಡದ ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದ್ದು, ಗಡಿಪ್ರದೇಶದ ಎಲ್ಲಾ ಶಾಲೆಗಳಲ್ಲೂ ಈ ರೀತಿಯ ಕಾರ್ಯ ಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡುತ್ತಾ, ಸಾಹಿತ್ಯ ಪರಿಷತ್ತು ದತ್ತಿನಿಧಿ ಕಾರ್ಯಕ್ರಮ ಗಳಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಮೂಡಬೇಕು, ಕನ್ನಡ ನಾಡು, ನುಡಿ, ಆಚಾರ, ವಿಚಾರ, ಪರಂಪರೆಗಳ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಎನ್ನುವ ಉದ್ದೇಶವಿದ್ದು, ಅದು ಕಾರ್ಯಗತವಾದಾಗ ಮಾತ್ರ ನಾಡು ನುಡಿ ಉಳಿಯಲು ಸಾಧ್ಯ ಎಂದರು. ದಿ. ಮೊಣ್ಣಂಡ ಕೆ. ಚಂಗಪ್ಪ ಜ್ಞಾಪಕ ದತ್ತಿನಿಧಿ ಮತ್ತು ದಿ. ಸಾಹಿತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಸ್ಮಾರಕ ದತ್ತಿನಿಧಿ ಕುರಿತು ಮಾಹಿತಿ ನೀಡಿದರು.

ದಿ. ಮೊಣ್ಣಂಡ ಕೆ. ಚಂಗಪ್ಪ ಜ್ಞಾಪಕ ದತ್ತಿ ನಿಧಿಯ ಆಶಯದಂತೆ ಕನ್ನಡ ಕೊಡವ ಭಾಷಾ ಬೆಳವಣಿಗೆ ಕುರಿತು ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಜ್ಜಮಾಡ ರೇಖಾ ಮಾತನಾಡಿ, ಕನ್ನಡ ಮತ್ತು ಕೊಡವ ಎರಡು ಭಾಷೆಗಳು ಒಂದಕ್ಕೊAದು ಹೊಂದಿಕೊAಡು ಇರುವಂತಹ ಭಾಷೆಗಳಾಗಿದ್ದು, ಕನ್ನಡ ಭಾಷೆಯ ಬೆಳವಣಿಗೆಯೊಂದಿಗೆ ಕೊಡವ ಭಾಷೆ ಕೂಡ ಅತ್ಯುತ್ತಮ ಬೆಳವಣಿಗೆಗೊಂಡಿದೆ. ಪಂಪನಿAದ ಇಂದಿನ ಸಾಹಿತಿಗಳವರೆಗೆ ಕನ್ನಡ ಸಾಹಿತ್ಯಲೋಕ ಹಲವಾರು ಮಜಲುಗಳನ್ನು ಕಂಡಿದ್ದು, ಕೊಡವ ಸಾಹಿತ್ಯದ ಬೆಳವಣಿಗೆಗೆ ಸಾಹಿತಿಗಳಾದ ಹರದಾಸ ಅಪ್ಪಚ್ಚ ಕವಿ, ಬಿ.ಡಿ. ಗಣಪತಿ, ಕಾಕೆಮಾನಿ ಅವರಿಂದ ಇಂದಿನ ಸಾಹಿತಿಗಳವರೆಗೆ ವಿವರಿಸಿದರು. ದಿ. ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಸ್ಮಾರಕ ದತ್ತಿನಿಧಿಯ ಆಶಯದಂತೆ ಕೊಡಗಿನ ಮಹಿಳಾ ಸಾಹಿತಿಗಳ ಕುರಿತು ಶ್ರೀಮಂಗಲ ಜೆ.ಸಿ ಶಾಲೆಯ ಅಧ್ಯಾಪಕಿ ಬಿ.ಯು. ಯಶೋಧ ಅವರು ಮಾತನಾಡಿ, ದಿ. ಸಾಹಿತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಅವರು ಕೊಡಗಿನ ಹಿರಿಯ ಸಾಹಿತಿಗಳಾಗಿದ್ದು, ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಪತಿ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮತ್ತು ಮುಲ್ಲೇಂಗಡ ಮಧೋಶ್ ಪೂವಯ್ಯರವರು ಕೊಡಗಿನ ಮಹಿಳಾ ಸಾಹಿತಿಗಳ ಕುರಿತು ಉಪನ್ಯಾಸ ನೀಡಲು ದತ್ತಿ ಸ್ಥಾಪಿಸಿದ್ದು, ಕೊಡಗಿನ ಹಲವು ಮಹಿಳಾ ಸಾಹಿತಿಗಳು ಸಣ್ಣ ಕಥೆ, ಕಾದಂಬರಿ, ಕವನ ಸಂಕಲನ, ಕ್ಷೇತ್ರ ಪರಿಚಯ, ವಿಜ್ಞಾನ ವಿಚಾರಗಳು, ಪ್ರಬಂಧ, ಬಾಲ ಸಾಹಿತ್ಯ, ಅನುವಾದ ಸಾಹಿತ್ಯ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಪುಸ್ತಕ ರಚಿಸಿ ಉತ್ತಮ ಸಂದೇಶ ನೀಡಿದ್ದಾರೆ. ಸಾಹಿತ್ಯವಲ್ಲದೆ ಸಾಂಸ್ಕೃತಿಕ, ರಾಜಕೀಯ, ಕ್ರೀಡೆ, ವಿಮರ್ಶೆ, ಮನರಂಜನೆ, ಪರಿಸರ ವಲಯ ದಲ್ಲೂ ಕೂಡ ಸಾಕಷ್ಟು ಕೃತಿಗಳನ್ನು ರಚನೆ ಮಾಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾದ ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮುಲ್ಲೇಂಗಡ ಸೋಮಯ್ಯ ಮಾತನಾಡಿ, ವಿದ್ಯಾರ್ಥಿಗಳ ಸಾಹಿತ್ಯಿಕ, ಬೌದ್ಧಿಕ ಬೆಳವಣಿಗೆಗೆ ಈ ರೀತಿಯ ಕಾರ್ಯಕ್ರಮಗಳು ಪೂರಕ ಎಂದರು.

ಪೊನ್ನAಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ ಪಾಠ ಪಠ್ಯಗಳೊಂದಿಗೆ ಸಾಹಿತ್ಯ ಕವನ ಕಾದಂಬರಿಗಳನ್ನು ಕೂಡ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ಸಾರ್ವಜನಿಕವಾಗಿ ಕನ್ನಡ ಮಾತನಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡು ಕನ್ನಡದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು. ದಾನಿಗಳು ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕೃತರು ಆದ ಕೈಬುಲಿರ ಪಾರ್ವತಿ ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು.

ನಾಡತಕ್ಕರು ಮತ್ತು ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಮಾತನಾಡಿ, ಕನ್ನಡ ನಾಡು ನುಡಿ ಕುರಿತು ಮಕ್ಕಳಿಗೆ ತಿಳಿಯಪಡಿಸಲು ಈ ತರಹದ ದತ್ತಿ ಕಾರ್ಯಕ್ರಮಗಳು ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕದೊಂದಿಗೆ ಸಾಹಿತ್ಯಿಕ ಓದು ಕೂಡ ಅವಶ್ಯಕ ಎಂದರು.

ದತ್ತಿದಾನಿಗಳು ತೂಕ್‌ಬೊಳಕ್ ಕೊಡವ ಪತ್ರಿಕೆಯ ಸಂಪಾದಕರು ಹಾಗೂ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಮುಲ್ಲೇಂಗಡ ಮಧೋಶ್ ಪೂವಯ್ಯ ದತ್ತಿ ಕಾರ್ಯ ಕ್ರಮಗಳ ಕುರಿತು ವಿಚಾರಗಳನ್ನು ತಿಳಿಸಿದರು.

ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸರ್ವೆ ಇಲಾಖೆಯ ಅಧಿಕಾರಿಯೂ ಆಗಿರುವ ಬಾನಂಗಡ ಅರುಣ್ ಕುಮಾರ್ ತಮ್ಮ ಕಚೇರಿಯಲ್ಲಿ ಸಾರ್ವಜನಿಕರು ನೀಡುವ ಅರ್ಜಿಗಳನ್ನು ಕನ್ನಡದಲ್ಲಿ ನೀಡಬೇಕು ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ಅದನ್ನು ಮುಂದು ವರಿಸುವುದಾಗಿ ತಿಳಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಮಾತನಾಡಿದರು.

ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ತಾಲೂಕು ಕ.ಸಾ.ಪ. ಕಾರ್ಯದರ್ಶಿ ಕೆ.ವಿ ರಾಮಕೃಷ್ಣ, ಶ್ರೀಮಂಗಲ ಹೋಬಳಿ ಗೌರವ ಕೋಶಾಧಿಕಾರಿ ಎಸ್.ಎಂ. ರಾಜೇಂದ್ರ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಪಿ.ಎಂ. ಪೂಣಚ್ಚ, ನಿರ್ದೇಶಕರುಗಳಾದ ಅಜ್ಜಮಾಡ ಸಾವಿತ್ರಿ, ಟಿ.ಆರ್. ವಿನೋದ್, ಎಸ್.ಡಿ. ಗಿರೀಶ್, ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಸಿದ ಗೀತಗಾಯನ ಸ್ಪರ್ಧೆಯಲ್ಲಿ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿನಿ ರೂಪ ಪಿ.ಎ. ಪ್ರಥಮ ಬಹುಮಾನ, ಪರ್ಸೀನಾ ಬೀವಿ. ದ್ವಿತೀಯ, ಅನುಷಾ ಪಿ.ಆರ್. ತೃತೀಯ ಬಹುಮಾನ ಪಡೆದರು.

ಪ್ರೌಢಶಾಲಾ ವಿಭಾಗದಲ್ಲಿ ಪ್ರೀನಿತ್ ಎನ್.ಕೆ. ಪ್ರಥಮ, ಅಲನ್ಯ ಸುರೇಶ್ ದ್ವಿತೀಯ, ಬೋಜಮ್ಮ ತೃತೀಯ ಬಹುಮಾನ ಪಡೆದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಗೇಶ್ ಕುಮಾರ್ ನಿರೂಪಿಸಿದರು.

ಉಪನ್ಯಾಸಕಿ ಪನ್ನ ಸ್ವಾಗತಿಸಿದರು. ಉಪನ್ಯಾಸಕ ಕೆ.ಆರ್. ಅರುಣಾಚಲ್ ವಂದಿಸಿದರು.