ಮಡಿಕೇರಿ, ನ. ೯ : ಎಲ್ಲ ಸಂದರ್ಭಗಳಲ್ಲೂ ಕೂಡ ಪೊಲೀಸರು ಹಾಗೂ ಮಾಧ್ಯಮದವರು ಸಹೋದರರಂತೆ ಕೆಲಸ ಮಾಡುತ್ತಿರುತ್ತಾರೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಇದೇ ಪ್ರಥಮ ಬಾರಿಗೆ ಏರ್ಪಡಿಸಲಾಗಿದ್ದ ಪೊಲೀಸರ ನಡುವಿನ ಕೊಡಗು ಪೊಲೀಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಬಲೂನ್‌ಗಳನ್ನು ಹಾರಿಬಿಡುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಯಾವದೇ ಕಾರ್ಯಕ್ರಮವಿರಲಿ, ಬಂದೋಬಸ್ತ್ ಕಾರ್ಯಗಳಿರಲಿ. ಪೊಲೀಸರಂತೆ ಮಾಧ್ಯಮದವರು ಕೂಡ ಕಾರ್ಯನಿರ್ವಹಿಸುತ್ತಿರುತ್ತಾರೆ. ಆದರೆ ಇಬ್ಬರ ಜವಾಬ್ದಾರಿಗಳು ಬೇರೆ ಬೇರೆಯಾಗಿರುತ್ತದೆ. ಪೊಲೀಸರು ತಪ್ಪುಗಳನ್ನು ಮಾಡಿದ ಸಂದರ್ಭಗಳಲ್ಲಿ ಮಾಧ್ಯಮದವರು ಪ್ರಶ್ನೆ ಹಾಗೂ ಟೀಕೆಗಳ ಮೂಲಕ ಎಚ್ಚರಿಸುತ್ತಿರುತ್ತಾರೆ. ಇದರಿಂದ ನಮ್ಮ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಕೊಡಗು ಜಿಲ್ಲೆಯ ಮಾಧ್ಯಮದ ಬಗ್ಗೆ ಉತ್ತಮ ಅಭಿಪ್ರಾಯಗಳಿವೆ ಎಂದು ಹೇಳಿದರು. ಬಿಡುವಿಲ್ಲದ ಕೆಲಸಗಳ ನಡುವೆ ಇಂತಹ ಸೌಹಾರ್ದ ಕ್ರೀಡಾಕೂಟದಲ್ಲಿ ಎಲ್ಲರೂ ಪಾಲ್ಗೊಂಡಿರುವದು ಉತ್ತಮ ಕಾರ್ಯವಾಗಿದೆ. ಮಡಿಕೇರಿ ಡಿವೈಎಸ್‌ಪಿ ಮಹೇಶ್ ಮತ್ತು ತಂಡದವರು ಉತ್ತಮವಾಗಿ ಕ್ರೀಡಾಕೂಟ

(ಮೊದಲ ಪುಟದಿಂದ) ಆಯೋಜನೆ ಮಾಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್‌ರಾಜ್ ಮಾತನಾಡಿ, ಕೊಡಗು ಜಿಲ್ಲಾ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂಬದನ್ನು ಕೇಳುವಾಗ ಸಂತೋಷವಾಗುತ್ತದೆ. ಇದೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇಂತಹ ಕ್ರೀಡಾಕೂಟ ಏರ್ಪಾಟು ಮಾಡಿದ್ದು, ಬಹುಷ ರಾಜ್ಯದಲ್ಲೇ ಇದು ಪ್ರಥಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡಿವೈಎಸ್‌ಪಿ ಮಹೇಶ್ ಹಾಗೂ ತಂಡದವರ ಪ್ರಯತ್ನವನ್ನು ಶ್ಲಾಘಿಸಿದ ಅವರು, ಇದರಲ್ಲಿ ಮಾಧ್ಯಮದವರ ಪಾತ್ರವೂ ಇದೆ, ಸೋಲು-ಗೆಲುವು ಆಟದ ಒಂದು ಭಾಗವಾಗಿದ್ದು, ಎಲ್ಲರೂ ಸೌಹಾರ್ದಯುತವಾಗಿ ಆಡಿ ಸಂಭ್ರಮಿಸಬೇಕೆAದು ಹೇಳಿದರು. ಪೊಲೀಸ್ ಹಾಗೂ ಮಾಧ್ಯಮದವರ ನಡುವೆ ಆಗಾಗ್ಗೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಅದು ಕೆಲಸ-ಕಾರ್ಯದ ಹಿತದೃಷ್ಟಿಯಿಂದಲೇ ಹೊರತು ನಂತರದಲ್ಲಿ ನಾವೆಲ್ಲರೂ ಒಂದೇ ಎಂದು ಹೇಳಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ವೀರಾಜಪೇಟೆ ಡಿವೈಎಸ್‌ಪಿ ಮೋಹನ್, ಮಡಿಕೇರಿ ಸೆನ್ ವಿಭಾಗದ ಡಿವೈಎಸ್‌ಪಿ ರವಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ ಇದ್ದರು. ಮಡಿಕೇರಿ ವೃತ್ತ ನಿರೀಕ್ಷಕ ಪಿ.ಕೆ. ರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.