ಮಡಿಕೇರಿ, ನ. ೯: ನಾಮಫಲಕಗಳಲ್ಲಿ ಶೇ ೬೦ ರಷ್ಟು ಕನ್ನಡವಿರಬೇಕೆಂಬ ನಿಯಮಗಳನ್ನು ಉಲ್ಲಂಘಿಸಿ ಅಳವಡಿಸಿದ್ದ ನಾಮಫಲಕಗಳ ತೆರವು ಕಾರ್ಯ ನಗರದಲ್ಲಿ ನಡೆಯಿತು.

ನಗರಸಭೆ ಸಿಬ್ಬಂದಿಗಳು ಪರಿಶೀಲಿಸಿ ಶೇ ೬೦ ರಷ್ಟು ಕನ್ನಡವಿಲ್ಲದ ನಾಮಫಲಕಗಳನ್ನು ತೆರವು ಮಾಡಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ, ವಿಧೇಯಕ, ೨೦೨೪ ಈ ಸಂಬAಧ ಫೆಬ್ರವರಿ ೨೫ ರಂದು ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದ್ದು, ಜಿಲ್ಲೆಯ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷೆ ಇರಲೇಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬAಧಪಟ್ಟ ಇಲಾಖೆಗಳು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಈ ಹಿಂದೆಯೇ ನಿರ್ದೇಶನ ನೀಡಿ ಗಡುವು ನೀಡಿದ್ದರು.

(ಮೊದಲ ಪುಟದಿಂದ) ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭಾ ಪೌರಾಯುಕ್ತ ರಮೇಶ್, ಸರಕಾರದ ಆದೇಶ ಹಿನ್ನೆಲೆ ಈ ಕ್ರಮವಹಿಸಲಾಗಿದೆ. ಈ ಹಿಂದೆ ನೋಟಿಸ್ ನೀಡಿ ಬದಲಾವಣೆಗೆ ತಿಳಿಸಲಾಗಿತ್ತು. ವ್ಯಾಪಾರಿಗಳು, ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಆಗಮಿಸಿ ಕಾಲಾವಕಾಶಕ್ಕೆ ಮನವಿ ಮಾಡಿದ್ದರು. ಅದರನ್ವಯ ಸಮಯವನ್ನು ನೀಡಲಾಗಿತ್ತು. ಆದರೆ, ಬದಲಾವಣೆ ಮಾಡದ ಹಿನ್ನೆಲೆ ನಗರಸಭೆ ಕ್ರಮಕೈಗೊಂಡಿದೆ. ಶೇ ೬೦ ರಷ್ಟು ಕನ್ನಡವಿಲ್ಲದೆ ನಾಮಫಲಕಗಳನ್ನು ತೆರವು ಕಾರ್ಯ ಮುಂದುವರೆಯಲಿದೆ. ಬದಲಾವಣೆ ಮಾಡದವರು ಬದಲಾವಣೆಗೆ ಮುಂದಾಗಬೇಕೆAದು ತಿಳಿಸಿದರು.

ಶೇ.೬೦ರಷ್ಟು ಕನ್ನಡ ಬಳಸಲು ಚೇಂಬರ್ ಮನವಿ

ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ವರ್ತಕರು ಹಾಗೂ ವಾಣಿಜ್ಯೋದ್ಯಮಿಗಳು ತಮ್ಮ ತಮ್ಮ ಅಂಗಡಿ, ವಾಣಿಜ್ಯ ಕಟ್ಟಡಗಳ ನಾಮಫಲಕಗಳಲ್ಲಿ ಶೇ.೬೦ರಷ್ಟು ಕನ್ನಡ ಭಾಷೆಯನ್ನು ಬಳಸುವಂತೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಹಿಂದೆಯೇ ನಾಮಫಲಕಗಳಲ್ಲಿ ಶೇ.೬೦ರಷ್ಟು ಕನ್ನಡ ಭಾಷೆಯನ್ನು ಬಳಸುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರ ಹಿತದೃಷ್ಟಿಯಿಂದ ೨೦೨೪ ಮೇ ೨೨ರಂದು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮನವಿ ಸಲ್ಲಿಸಿ ಮೂರು ತಿಂಗಳ ಕಾಲಾವಕಾಶ ಕೋರಿತ್ತು. ಈಗಾಗಲೇ ಈ ಕಾಲಾವಕಾಶ ಮುಗಿದಿದ್ದು, ಶೇ.೬೦ರಷ್ಟು ಕನ್ನಡ ಭಾಷೆಯನ್ನು ಬಳಸುವ ಮೂಲಕ ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಬೇಕು. ಇತರ ಭಾಷೆಯ ಮೇಲ್ಭಾಗದಲ್ಲಿ ಕನ್ನಡವನ್ನು ದೊಡ್ಡಕ್ಷರಗಳಲ್ಲಿ ಬರೆಯಬೇಕು ಎಂದು ಕೋರಿದ್ದಾರೆ. ಎಲ್ಲಾ ವರ್ತಕರು ಹಾಗೂ ವಾಣಿಜ್ಯೋದ್ಯಮಿಗಳು ಮುಂದಿನ ೪-೫ ದಿನಗಳೊಳಗೆ ಶೇ. ೬೦ರಷ್ಟು ಕನ್ನಡ ಭಾಷೆಯನ್ನು ಬಳಸಿರುವ ನಾಮಫಲಕವನ್ನು ಅಳವಡಿಸುವಂತೆ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.