ಕುಶಾಲನಗರ, ನ. ೯: ತಾ.೧೧ರಂದು ಕುಶಾಲನಗರದಲ್ಲಿ ಏಕಕಾಲಕ್ಕೆ ೫೦೦೦ ಮಂದಿಯಿAದ ಕಂಠಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ರಾಜ್ಯೋತ್ಸವ ಅಂಗವಾಗಿ ಈ ವಿಶೇಷ ಅರ್ಥಪೂರ್ಣ ಆಚರಣೆ ನಡೆಯಲಿದೆ.
೫೦೦೦ ಮಂದಿ ಕುಶಾಲನಗರ ಪಟ್ಟಣದಲ್ಲಿ ಒಂದೆಡೆ ಸೇರಿ ನಾಡಗೀತೆ, ರೈತಗೀತೆ ಮತ್ತು ಕನ್ನಡದ ಹಾಡುಗಳನ್ನು ಏಕಕಾಲದಲ್ಲಿ ಹಾಡಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭ ಕುಶಾಲನಗರಕ್ಕೆ ಆಗಮಿಸುವ ಜ್ಯೋತಿ ರಥವನ್ನು ಕುಶಾಲನಗರ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿ ಬರಮಾಡಿಕೊಳ್ಳಲಾಗುವುದು. ಕಾರ್ಯಕ್ರಮದಲ್ಲಿ ಸುಮಾರು ೩೫೦೦ ವಿದ್ಯಾರ್ಥಿಗಳು ೧೫೦೦ಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ. ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತು ಪ್ರಮುಖರಾದ ದೇವಿ ಪ್ರಸಾದ್, ಹರೀಶ್, ಬಿ.ಎಸ್. ಪರಮೇಶ್, ಕೆ.ಪಿ. ಉಮೇಶ್, ಶ್ರೀನಿವಾಸ್ ಕೆ.ಬಿ ಇದ್ದರು.