ಮಡಿಕೇರಿ, ನ. ೧೧: ಅಕ್ರಮವಾಗಿ ಮರ ಕಡಿದು ಅದರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ದಾಳಿ ನಡೆಸಿ ಮಾಲು ಸಹಿತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೂಲತಃ ಹೆಚ್.ಡಿ. ಕೋಟೆ ನಿವಾಸಿ ಆದಿತ್ಯ (೨೨) ಬಂಧಿತ ಆರೋಪಿಯಾಗಿದ್ದು, ಸಾಗಾಟಕ್ಕೆ ಬಳಸಿದ ಪಿಕಪ್ (ಕೆಎ-೦೯-ಎಎ-೧೮೬೯) ಸೇರಿದಂತೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ. ೮ ಲಕ್ಷ ಮೌಲ್ಯದ ಬೀಟೆ ಮರದ ನಾಟಾಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ಶುಂಠಿ ಸಾಗಾಟ ನೆಪದಲ್ಲಿ ಅದರ ಒಳಭಾಗದಲ್ಲಿ ಮರದ ನಾಟಾಗಳನ್ನಿಟ್ಟು ವೀರಾಜಪೇಟೆ ಮಾರ್ಗವಾಗಿ ಮಡಿಕೇರಿಯತ್ತ ಸಾಗಾಟ ಮಾಡುವ ಸಂದರ್ಭ ಖಚಿತ ಮಾಹಿತಿ ಮೇರೆಗೆ ಮೂರ್ನಾಡು ಬಳಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ದಾಳಿ ನಡೆಸಿದ ಸಂದರ್ಭ ವಾಹನ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಬೆನ್ನಟ್ಟಿದ್ದ ಅರಣ್ಯ ಇಲಾಖೆ ತಂಡ ಹಾಕತ್ತೂರಿನಲ್ಲಿ ವಾಹನ ಅಡ್ಡಗಟ್ಟಿ ಚಾಲಕನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್.ಬಿ. ಅವರ ಮಾರ್ಗದರ್ಶನ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಸೀನ್ ಬಾಷ ಮುಂದಾಳತ್ವ, ವಲಯ ಅರಣ್ಯಾಧಿಕಾರಿಗಳಾದ ಡಿನ್ಸಿ ದೇಚಮ್ಮ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಉಮೇಶ್.ಸಿ, ಮಲ್ಲಯ್ಯ ಹಿರೇಮಠ್, ಗಸ್ತು ವನ ಪಾಲಕ ಯತೀಶ್.ಸಿ.ಸಿ ಮತ್ತು ಸಿಬ್ಬಂದಿಗಳಾದ ವಾಸುದೇವ. ಯು.ಸಿ, ಸಂತೋಷ್.ಪಿ.ಬಿ, ನಿಖಿಲ್, ಮೋಹನ್, ವಚನ್, ತಿಮ್ಮಯ್ಯ, ಸುಧಾ ಹಾಗೂ ಮಡಿಕೇರಿ ವಲಯದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.