ಪೊನ್ನಂಪೇಟೆ, ನ. ೧೧: ಮುಂದಿನ ತಿಂಗಳು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಜರುಗಲಿರುವ ೧೪ ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ರಾಜ್ಯ ತಂಡಕ್ಕೆ ಕೊಡಗಿನಿಂದ ೨೦ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಕಳೆದ ಅ. ೨೭ರಿಂದ ೩೦ರವರೆಗೆ ಪೊನ್ನಂಪೇಟೆಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ತಂಡ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು. ಆಯ್ಕೆಗೊಂಡ ರಾಜ್ಯ ತಂಡದಲ್ಲಿರುವ ವಿದ್ಯಾರ್ಥಿಗಳ ಪೈಕಿ ಬಹುಪಾಲು ಗೋಣಿಕೊಪ್ಪಲಿನ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.
ರಾಜ್ಯ ಬಾಲಕರ ಹಾಕಿ ತಂಡದಲ್ಲಿ ಗೋಣಿಕೊಪ್ಪಲುವಿನ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ಬಿ.ಪಿ. ಪೂಣಚ್ಚ, ವಿ. ಎಸ್. ಸೋಹನ್, ಎಂ. ಯು. ಶ್ರುಹಾಲ್ ಸೋಮಣ್ಣ, ಎಂ.ಪಿ. ಚೇತನ್, ಸಿ.ಪಿ. ನಾಚಪ್ಪ, ಕೆ.ಬಿ. ರಿಶಾನ್, ಪೊನ್ನಂಪೇಟೆ ಅಪ್ಪಚ್ಚ ಕವಿ ವಿದ್ಯಾಲಯದ ಆತ್ಮಿಕ್ ದೀಪ್, ಧವನ್ ದೇವಯ್ಯ, ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ತರುಣ್ ತಮ್ಮಯ್ಯ ಹಾಗೂ ಮಡಿಕೇರಿಯ ಪಿ.ಎಂ.ಶ್ರೀ. ಸರ್ಕಾರಿ ಶಾಲೆಯ ಕೆ. ಟಿ. ಯುವ ಮುತ್ತಪ್ಪ ಆಯ್ಕೆಗೊಂಡಿದ್ದಾರೆ. ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ರಾಜ್ಯ ಬಾಲಕಿಯರ ಹಾಕಿ ತಂಡದಲ್ಲಿ ಗೋಣಿಕೊಪ್ಪಲು ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ಪಿ. ಪಿ. ಪ್ರತಿಕ್ಷಾ ಪೂವಮ್ಮ, ಕೆ. ರಿಷಿಕ ಭೀಮಯ್ಯ, ಕೆ. ಎಸ್. ಹಿತಾಂಶಿ, ವಿ. ಆರ್. ಪರಿಣಿತ, ವಿ. ಆರ್. ತೃಪ್ತ, ಸಿ.ಡಿ. ತೃಪ್ತಿ, ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆಯ ನೇನ ಕರುಂಬಯ್ಯ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ತಾನಿಯ, ಮಡಿಕೇರಿಯ ಪಿ.ಎಂ. ಶ್ರೀ ಸರ್ಕಾರಿ ಶಾಲೆಯ ಪಿ.ಕೆ. ಆಂಚಲ್ ದೇಚಮ್ಮ ಮತ್ತು ಎಸ್. ವಿ. ಖುಷಿ ಆಯ್ಕೆಯಾಗಿದ್ದಾರೆ.
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಗೋಣಿಕೊಪ್ಪಲು ಲಯನ್ಸ್ ಶಾಲೆಯ ದೈಹಿಕ ಶಿಕ್ಷಕ ಸಿ.ಪಿ. ಗಾನ್ ಗಣಪತಿ, ೧೪ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಕರ್ನಾಟಕ ತಂಡದಲ್ಲಿರುವ ಆಟಗಾರರ ಪೈಕಿ ಒಟ್ಟು ೨೦ ವಿದ್ಯಾರ್ಥಿಗಳು ಕೊಡಗಿನಿಂದ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಚ್ಚು ಅಭಿಮಾನ ಮೂಡಿಸುವ ವಿಷಯವಾಗಿದೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಈ ಎರಡೂ ತಂಡಗಳು ಮುಂಬರುವ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯಲ್ಲೂ ಉತ್ತಮ ಸಾಧನೆಗೈಯುವ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. - ರಫೀಕ್ ತೂಚಮಕೇರಿ