- ಅನಿಲ್ ಎಚ್.ಟಿ.

ಮಡಿಕೇರಿ, ನ. ೧೧: ಎದುರಿನಲ್ಲಿ ೪-೫ ದಿನಗಳ ಹಿಂದೆಯೇ ಬಹುತೇಕ ಬೆಂದು ಹೋದ ಸ್ಥಿತಿಯಲ್ಲಿರುವ ಶವ,, ಮುಟ್ಟಿದರೆ ಬೆಂದ ದೇಹದ ಮಾಂಸ ಕೈಗೆ ಬರುತ್ತಿತ್ತು. ಶವ ಸಿಕ್ಕಿದ ಜಾಗದಲ್ಲಿ ಯಾವುದೇ ಗುರುತಾಗಲಿ, ಸುಳಿವಾಗಲೀ ಇಲ್ಲವೇ ಇಲ್ಲ.

ಯಾರ ಶವವಿದು, ಯಾರು ಸುಟ್ಟವರು, ಯಾಕಾಗಿ ಸುಟ್ಟರು ಎಂಬೆಲ್ಲಾ ಪ್ರಶ್ನೆಗಳ ಸುಳಿಯಲ್ಲಿ ಆ ಶವದ ಮುಂದೆ ನಿಂತಿದ್ದ ಸುಂಟಿಕೊಪ್ಪ ಪೊಲೀಸರಿಗೆ ಆ ಸಂದರ್ಭ ಕೇಳಿಬಂದ ಧ್ವನಿ ಒಂದೇ. ಎಲ್ಲಾ ಸುಳಿವು ಸಿಕ್ಕಿ ಕೊಲೆ ಪ್ರಕರಣ ಪತ್ತೆ ಹಚ್ಚುವುದು ಗ್ರೇಟ್ ಅಲ್ಲವೇ ಅಲ್ಲ ಯಾವುದೇ ಸುಳಿವಿಲ್ಲದ ಕೊಲೆ ಕೇಸ್ ನಲ್ಲಿ ನಿಜವಾದ ಹಂತಕನನ್ನು ಪತ್ತೆ ಹಚ್ಚಿ ಬಂಧಿಸಿ ಶಿಕ್ಷೆ ಕೊಡಿಸುವುದಿದೆಯಲ್ಲ ಅದೇ ಪೊಲೀಸರ ಪಾಲಿಗೆ ನಿಜವಾದ ಚಾಲೆಂಜ್. ಈ ಕೇಸ್ ಕೂಡ ಅಷ್ಟೇ ಹೇಗಾದರೂ ನಾವು ಹಂತಕರನ್ನು ಪತ್ತೆ ಮಾಡಲೇ ಬೇಕು, ಎಲ್ಲಿಂದಾದರೂ ಹಿಡಿದು ತರಬೇಕು,, ತಡಮಾಡಬೇಡಿ,, ಸುಳಿವಿಲ್ಲದ ಕೇಸ್ ನಲ್ಲಿ ಕೊಲೆಗಾರರನ್ನು ಹುಡುಕಿ ತರುವವರೆಗೆ ರೆಸ್ಟ್ ಇಲ್ಲ,, ಕೊಡಗು ಪೊಲೀಸ್ ಏನೆಂದು ನಿರೂಪಿಸಿ ಅಷ್ಟೇ ಸಾಕಾಯಿತು. ಅಲ್ಲಿದ್ದ ಪೊಲೀಸರು ಎದೆ ಉಬ್ಬಿಸಿ, ಎಸ್ ಸಾರ್ ಎಂದರು.

ಸುAಟಿಕೊಪ್ಪ ಬಳಿಯ ಪನ್ಯ ಎಸ್ಟೇಟ್‌ನಲ್ಲಿ ಸಿಕ್ಕಿದ ಸುಟ್ಟುಹೋಗಿದ್ದ ಶವದ ಹಿನ್ನೆಲೆಯ ಭಯಾನಕ ಕಥೆ ಕೊಡಗು ಪೊಲೀಸ್ ಇತಿಹಾಸದಲ್ಲಿ ರೋಚಕ ತನಿಖೆಯ ಅಧ್ಯಾಯವಾಗಿ ತೆರೆದುಕೊಂಡಿತು. ಸುಂಟಿಕೊಪ್ಪ ಪೊಲೀಸರಿಗೆ ಆ ರೀತಿ ಧೈರ್ಯ ಹೇಳಿದ್ದ ಧ್ವನಿ ಬೇರೆ ಯಾರದ್ದೂ ಅಲ್ಲ, ಅದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಆದೇಶ ಮತ್ತು ಧೈರ್ಯದ ಧ್ವನಿ.

ಅದು ಅಕ್ಟೋಬರ್ ೮ನೇ ತಾರೀಕು. ಸಂದೇಶ್ ಅವರ ಪುತ್ರ ಆದೀಶ್ವರ್ ಅವರಿಗೆ ಸೇರಿದ ಪನ್ಯ ಎಸ್ಟೇಟ್‌ನಲ್ಲಿ ಕರಿಮೆಣಸು ಬೆಳೆಗೆ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದ ಪ್ರೇಮ ಎಂಬ ಕಾರ್ಮಿಕ ಮಹಿಳೆಗೆ ಕಾಫಿ ಗಿಡಗಳ ನಡುವಿನ ಚರಂಡಿಯಲ್ಲಿ ಅರ್ಧ ಬೆಂದ ಸ್ಥಿತಿಯಲ್ಲಿದ್ದ ಶವ ಗೋಚರಿಸಿತ್ತು, ಕಿಟಾರನೆ ಕಿರುಚಿಕೊಂಡ ಪ್ರೇಮ ಕೂಡಲೇ ಈ ವಿಚಾರವನ್ನು ತೋಟದ ಮೇಸ್ತಿç ಸುಂದರ ಅವರಿಗೆ ತಿಳಿಸಿದರು, ಸ್ಥಳಕ್ಕೆ ಬಂದ ಸುಂದರ ಶವ ನೋಡಿ ಗಾಬರಿಯಾಗಿ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದರು, ಸುಂಟಿಕೊಪ್ಪ ಪೊಲೀಸರು ನೀಡಿದ ಮಾಹಿತಿಯನ್ವಯ ಕೆಲವೇ ನಿಮಿಷಗಳಲ್ಲಿ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಕೂಡ ಪೊಲೀಸರೊಂದಿಗೆ ಸ್ಥಳದಲ್ಲಿದ್ದರು.

ಸುಳಿವೇ ಇಲ್ಲದ ಪ್ರಕರಣವಾಗಿ ಮುಚ್ಚಿಹೋಗುತ್ತಿದ್ದ ಕೊಲೆ ಕೇಸ್‌ಗೆ ಜೀವ ನೀಡುವಂತೆ ಈ ಪೊಲೀಸ್ ಅಧಿಕಾರಿಗಳು ಸುಳಿವು ಸಿಕ್ಕಿಯೇ ಸಿಗುತ್ತದೆ, ಬಿಡಬೇಡಿ ಹುಡುಕಿ ಎಂದು ನೀಡಿದ ಧೈರ್ಯದ ಹಿನ್ನಲೆಯಲ್ಲಿ ಸುಂಟಿಕೊಪ್ಪ ಪೊಲೀಸರು ಅತ್ತಿತ್ತ ಅರಸಿದಾಗ ಅವರಿಗೆ ಸಿಕ್ಕಿದ್ದು, ನೀಮ್ಯಾನ್ಸ್ ಕಂಪೆನಿಯ ೮ನೇ ನಂಬರ್‌ನ ಶೂಸ್, ಈ ಶೂಸನ್ನೇ ಸುಳಿವಾಗಿ ಪಡೆದುಕೊಂಡ ಪೊಲೀಸರು ಕುಶಾಲನಗರ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಕೇಸ್ ಪತ್ತೆಗೆ ಮುಂದಾದರು, ತಮ್ಮದೇ ಆದ ಯುವ ಪೋಲೀಸರ ತಂಡವನ್ನು ರೂಪಿಸಿಕೊಂಡರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ರೂಪುಗೊಂಡ ಟೀಮ್‌ನಲ್ಲಿ ಕುಶಾಲನಗರ ನಗರ ಠಾಣೆಯ ರಂಜಿತ್, ಸೋಮವಾರಪೇಟೆಯ ಸುಧೀಶ್, ಶನಿವಾರಸಂತೆಯ ಉದಯ್, ಸುಂಟಿಕೊಪ್ಪದ ಪ್ರವೀಣ್, ನಿಶಾಂತ್, ಸಹಾಯಕ ಉಪನಿರೀಕ್ಷಕರುಗಳಾದ ತೀರ್ಥಕುಮಾರ್, ಸುರೇಶ, ಕುಶಾಲನಗರ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾದ ಮೋಹನರಾಜ್, ಸಹಾಯಕ ಉಪನಿರೀಕ್ಷಕ ವೆಂಕಟೇಶ್, ಟ್ರಾಫಿಕ್ ಠಾಣೆಯ ರಮೇಶ, ಸಿಪಿಐ ಕಚೇರಿಯ ಸಂದೇಶ, ಮಹೇಂದ್ರ , ತಂಡದ ಸದಸ್ಯರಾಗಿ ಸೇರ್ಪಡೆಯಾದರು.

ಪ್ರಾರಂಭಿಕ ಹಂತದಲ್ಲಿ ಈ ತಂಡ ಹುಡುಕಲಾರಂಭಿಸಿದ್ದ ಶವದ ಅನತಿ ದೂರದಲ್ಲಿ ದೊರಕಿದ ಶೂ ಯಾರದ್ದು ಎಂದು, ಇದಕ್ಕಾಗಿ ನೀ ಮ್ಯಾನ್ಸ್ ಸಂಸ್ಥೆಯ ಅನೇಕ ಕಛೇರಿಗಳಿಗೆ ಕರೆ ಮಾಡಿದರೂ ಸೂಕ್ತ ಸುಳಿವು ಸಿಗಲಿಲ್ಲ, ಸೋಮವಾರಪೇಟೆ, ಮಡಿಕೇರಿ ತಾಲೂಕುಗಳ ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ಯಾರಾದರೂ ಪೆಟ್ರೋಲನ್ನು ಕ್ಯಾನ್‌ನಲ್ಲಿ ಖರೀದಿಸಿದ್ದಾರೆಯೇ ಎಂದು ಪತ್ತೆ ಹಚ್ಚುವ ಕಾರ್ಯಕ್ಕೂ ಈ ತಂಡ ಮುಂದಾಯಿತು, ಹೀಗಿದ್ದರೂ ಯಾವುದೇ ನಿಖರ ಸುಳಿವು ಸಿಗಲಿಲ್ಲ.

ನಿರಾಶೆಗೊಳಗಾಗದೆ ಈ ತಂಡ ಸಿಸಿ ಕ್ಯಾಮರ ಪತ್ತೆಗೆ ಮುಂದಾಯಿತು, ಪನ್ಯ ಎಸ್ಟೇಟ್ ಬಳಿಯಲ್ಲಿರುವ ಕಾಫಿ ಪಲ್ಪಿಂಗ್ ಯಾರ್ಡ್ನ ಸಿಸಿ ಕ್ಯಾಮರ ಹುಡುಕಿದಾಗ ಅಸ್ಪಷ್ಟವಾಗಿ ಕಾರ್ ಒಂದು ರಾತ್ರಿಯಲ್ಲಿ ನಿಂತ ಸುಳಿವು ಲಭಿಸಿತು, ಘಟನಾ ಸ್ಥಳದಿಂದ ಮುಂದಕ್ಕೆ ಆ ಕಾರ್ ತೆರಳದೇ ಇರುವುದು ಕೂಡ ಸಂಶಯಕ್ಕೆ ಕಾರಣವಾಯಿತು. ಹೀಗಾಗಿ ಇದೇ ಕಾರನ್ನೇ ಗುರಿಯಾಗಿಸಿಕೊಂಡು ಪ್ರಾರಂಭಿಕ ತನಿಖೆಗೆ ಪೊಲೀಸರು ಮುಂದಾದರು, ಸುಂಟಿಕೊಪ್ಪ, ಕೊಡಗರಹಳ್ಳಿ, ಗುಡ್ಡೆಹೊಸೂರು, ಕುಶಾಲನಗರದ ಸಿಸಿ ಕ್ಯಾಮರದಲ್ಲಿ ಕಾರಿನ ಅಸ್ಪಷ್ಟ ಚಿತ್ರ ಕಂಡುಬAತು, ಕುಶಾಲನಗರದಿಂದ ಕೊಪ್ಪಕ್ಕೆ ಸಾಗದ ಕಾರ್ ಶಿರಂಗಾಲಕ್ಕಾಗಿ ತೆರಳಿರುವ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಯಿತು, ಅಲ್ಲಿಂದ ಮುಂದೆ ಪರಿಶೀಲಿಸಿದಾಗ ಬೆಳ್ಳೂರು ಕ್ರಾಸ್ ಬಳಿ ಇದೇ ಕಾರ್ ಬೆಳಿಗ್ಗೆ ೫.೪೫ ಗಂಟೆಗೆ ತೆರಳಿರುವುದು ಗೊತ್ತಾಯಿತು, ಅಂತೆಯೇ ಕಾರ್ ನಂಬರ್ ಟಿಎಸ್ ಸೊನ್ನೆ ೭, ಎಫ್ ಎಸ್ ೫೬೭೯ ಹಾಗೂ ಇದು ಬಿಎಂಡಬ್ಲೂö್ಯ ಕಾರ್ ಎಂಬುದೂ ತಿಳಿದುಬಂತು.

ತನಿಖಾಧಿಕಾರಿ ಚಂದ್ರಶೇಖರ್, ಬೆನ್ಸ್ ಕಂಪೆನಿಯ ಕಾಲ್ ಸೆಂಟರ್‌ಗೆ ಕರೆ ಮಾಡಿ ಮಾಹಿತಿ ಬಯಸಿದಾಗ ಅಲ್ಲಿಂದ ಕಂಪೆನಿಯ ಮಾರುಕಟ್ಟೆ ಅಧಿಕಾರಿಯ ಸಂಖ್ಯೆ ದೊರಕಿತು, ಅದೃಷ್ಟವಶಾತ್ ಆ ಅಧಿಕಾರಿ ಅಶೋಕ್ ಪಾಲಿಬೆಟ್ಟದವರೇ ಆಗಿದ್ದರು, ಕೊಡಗಿನಲ್ಲಿ ನಡೆದ ಹತ್ಯೆ ಪ್ರಕರಣದ ತನಿಖೆಗೆ ಸಹಕಾರ ನೀಡಿದ ಈ ಅಧಿಕಾರಿ ಬೆನ್ಸ್ ಕಾರ್‌ನ ಮಾಲೀಕರ ಹೆಸರು ನೀಡಿದರು. ಅದರಲ್ಲಿ ಕಚಟ್ಟಿ ಶ್ರೀಹರಿ, ಹೈದರಬಾದ್ ಎಂದಷ್ಟೇ ಮಾಹಿತಿ ಇತ್ತು, ಚಂದ್ರಶೇಖರ್ ಸುಮ್ಮನಿರಲಿಲ್ಲ, ಹೈದರಾಬಾದ್ ನ ಬೆನ್ಸ್ ಸರ್ವೀಸ್ ಸೆಂಟರ್‌ಗೆ ಕರೆ ಮಾಡಿ ಈ ಕಾರ್ ಸರ್ವೀಸ್ ಮಾಡಿಸಿಕೊಂಡ ದಿನಾಂಕದ ಆಧಾರದ ಮೇಲೆ ಮಾಲೀಕನ ಹೆಸರು ಪತ್ತೆ ಹಚ್ಚಿದರು, ಆಗ ಗೊತ್ತಾದ ಮೊಬೈಲ್ ಸಂಖ್ಯೆ ೦೯೯ ರಮೇಶ್ ಕುಮಾರ್ ಅವರದ್ದಾಗಿತ್ತು.

ರಮೇಶ್ ಕುಮಾರ್ ಹೈದರಾಬಾದ್‌ನ ಸಿಂಗಾಪುರ ಸಿಟಿಯ ನಿವಾಸಿ ಎಂದು ಮಾಹಿತಿ ಲಭಿಸಿದ ಆಧಾರದಲ್ಲಿ ಅವರ ಮೊಬೈಲ್ ಸಂಖ್ಯೆ ಪ್ರಸ್ತುತ ಕುಣಿಗಲ್ ಬಳಿಯಿರುವುದು ತನಿಖೆ ಸಂದರ್ಭ ತಿಳಿದುಬಂತು, ಕೂಡಲೇ ತನಿಖಾ ತಂಡ ರಾತೋರಾತ್ರಿ ಕುಣಿಗಲ್‌ಗೆ ಧಾವಿಸಿ ಮೊಬೈಲ್ ಇರುವ ಸ್ಥಳ ಪತ್ತೆಗೆ ಮುಂದಾಯಿತಾದರೂ ಅನೇಕ ಗಂಟೆಗಳ ಹುಡುಕಾಟದ ಬಳಿಕವೂ ಮೊಬೈಲ್ ಪತ್ತೆಯಾಗಲೇ ಇಲ್ಲ, ವಿಚಿತ್ರ ಎಂಬAತೆ, ಈ ಮೊಬೈಲನ್ನು ಆಕಸ್ಮಿಕವಾಗಿ ತನ್ನ ಬಳಿ ಇರಿಸಿಕೊಂಡಿದ್ದ ಕುಣಿಗಲ್‌ನ ಪೊಲೀಸನನ್ನೇ ತನಿಖಾ ತಂಡ ರಾತ್ರಿ ತಾವು ಮೊಬೈಲ್ ಒಂದನ್ನು ಹುಡುಕುತ್ತಿದ್ದೇವೆ ಎಂದು ಈ ಬಗ್ಗೆ ವಿಚಾರಿಸಿತ್ತಾದರೂ ಪ್ರಕರಣದ ಗಂಭೀರತೆ ಅರಿಯದೇ ಕುಣಿಗಲ್‌ನ ಆ ಪೊಲೀಸ್ ಮೊಬೈಲ್ ತನ್ನಲ್ಲಿರುವ ವಿಚಾರವನ್ನೇ ತಿಳಿಸಲಿಲ್ಲ. ಇದರಿಂದ ತನಿಖೆ ವಿಳಂಬವಾಗಲು ಕಾರಣವಾಯಿತು.

ತನಿಖೆಯ ಮತ್ತೊಂದು ಅಂಗವಾಗಿ ರಮೇಶ್ ಕುಮಾರ್ ಎಂಬಾತನ ಮೊಬೈಲ್ ಸಂಪರ್ಕದಲ್ಲಿದ್ದ ಸಂಖ್ಯೆಗಳನ್ನು ಸೂಕ್ಷö್ಮವಾಗಿ ಪರಿಶೀಲಿಸಿದಾಗ ಅನೇಕ ಬಾರಿ ಸಂಪರ್ಕ ಹೊಂದಿದ್ದ ಸಂಖ್ಯೆಯೊAದು ಪತ್ತೆಯಾಯಿತು. ಆ ಸಂಖ್ಯೆಯ ವ್ಯಕ್ತಿಯ ಹೆಸರೇ ಪಂತಲು ನಿಹಾರಿಕ ಅಲಿಯಾಸ್ ನಿಕ್ಕಿ, ತಡಮಾಡದೇ ನಿಹಾರಿಕಾಳ ಪತ್ತೆಗೆ ಆಕೆಯಿದ್ದ ಬೆಂಗಳೂರಿಗೆ ತನಿಖಾ ತಂಡ ತೆರಳಿತು, ನಿಹಾರಿಕಾಳಿದ್ದ ವಿಳಾಸ ಸಂಪಾದಿಸಿದ ತನಿಖಾ ತಂಡ ದಿಢೀರನೆ ಆಕೆಯ ಮನೆ ಮೇಳೆ ಧಾಳಿ ಮಾಡದೇ ಸಮಗ್ರ ಮಾಹಿತಿ ಕಲೆ ಹಾಕಲು ಆಕೆಯ ಮನೆ ಬಳಿಯೇ ಠಿಕಾಣಿ ಹೂಡಿತ್ತು, ಪನ್ಯದಲ್ಲಿ ಶವ ದೊರಕಿದ ದಿನಾಂಕ ಮತ್ತು ಆ ದಿನಾಂಕದ ಆಸುಪಾಸಿನ ತಾರೀಖುಗಳಲ್ಲಿ ನಿಹಾರಿಕಳ ಮೊಬೈಲ್‌ನಿಂದ ಯಾರಿಗೆಲ್ಲಾ ಕರೆ ಮಾಡಿದ್ದಳು ಎಂಬುದನ್ನು ಮೊದಲು ಪತ್ತೆ ಮಾಡಲಾಯಿತು. ಈ ಸಂದರ್ಭ ಪತ್ತೆಯಾದ ಹೆಸರೇ ಡಾ ನಿಖಿಲ್ ಅಲಿಯಾಸ್ ಮೈ ರೆಡ್ಡಿ ನಿಖಿಲ್ ಎಂಬಾತನದ್ದಾಗಿತ್ತು, ಅಂತೆಯೇ ಮನೆಯಿಂದ ಅನೇಕ ದಿನಗಳಿಂದ ಹೊರಬಾರದ ನಿಹಾರಿಕ ಮನೆಗೇ ಆನ್‌ಲೈನ್ ಮೂಲಕ ಊಟ, ತಿಂಡಿ ತರಿಸು ತ್ತಿದ್ದದ್ದನ್ನು ಪೊಲೀಸ್ ಅಧಿಕಾರಿ ಚಂದ್ರಶೇಖರ್ ಸ್ವಿಗ್ಗಿ ಸಂಸ್ಥೆಯ ವ್ಯವಸ್ಥಾಪಕ ದೀಪಕ್ ಮೂಲಕ ಹಾಗೂ ತಾವೇ ನೇಮಿಸಿಕೊಂಡ ಮಾಹಿತಿದಾರನ ಮೂಲಕ ಖಚಿತಪಡಿಸಿಕೊಂಡರು. ಪೊಲೀಸ್ ಮಾಹಿತಿದಾರ ನಿಹಾರಿಕಾಳ ಮನೆಗೆ ಬಿಬಿಎಂಪಿ ಸಮೀಕ್ಷೆ ಸಿಬ್ಬಂದಿ ನೆಪದಲ್ಲಿ ತೆರಳಿ ಸೂಕ್ಷö್ಮವಾಗಿ ಆಕೆಯ ಮನೆಯನ್ನು ಪರಿಶೀಲಿಸಿದ್ದಲ್ಲದೇ ನಿಹಾರಿಕಾ ಮನೆಯೊಳಗೆ ಇರುವುದನ್ನು ಖಚಿತಪಡಿಸಿಕೊಂಡು ವಾಪಸಾಗಿದ್ದ ಪನ್ಯದಲ್ಲಿ ಶವ ಸಿಕ್ಕ ಕೇಸ್ ಗೂ ನಿಹಾರಿಕಾಳಿಗೂ ಸಂಬAಧವಿದೆ ಎಂದು ಸ್ಪಷ್ಟವಾದೊಡನೇ ತನಿಖಾ ತಂಡ ಆಕೆಯ ಮನೆಗೆ ತೆರಳಿ ವಶಕ್ಕೆ ಪಡೆಯಲು ಮುಂದಾಯಿತು, ಹಾಗೇ ನಿಹಾರಿಕಾ ಮನೆಗೆ ಧಾಳಿ ನಡೆಸಿದ ತನಿಖಾ ತಂಡಕ್ಕೆ ಅಚ್ಚರಿಯೂ ಕಾದಿತ್ತು.!