ಮಡಿಕೇರಿ, ನ. ೧೧ : ಕೊಡಗು- ಕೇರಳ ಗಡಿಭಾಗದಲ್ಲಿರುವ ಕರಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ನೂತನ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಕಾರ್ಯಾರಂಭಗೊAಡಿಲ್ಲ. ಇದರಿಂದ ನೆಟ್‌ವರ್ಕ್ ಸಮಸ್ಯೆ ಎದುರಾಗಿದ್ದು, ಈ ಕುರಿತು ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್. ಬಾಲಚಂದ್ರನ್ ನಾಯರ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಕರಿಕೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು, ವಿದ್ಯಾರ್ಥಿಗಳು, ಖಾಸಗಿ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಸರ್ಕಾರಿ ಕಚೇರಿ ಸಿಬ್ಬಂದಿಗಳು ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡುವುದಕ್ಕೂ ನೆಟ್‌ವರ್ಕ್ ಸಿಗುತ್ತಿಲ್ಲ. ಗ್ರಾ.ಪಂ ಕೆಲಸ ಕಾರ್ಯಗಳು ಕುಂಠಿತಗೊಳ್ಳುತ್ತಿದೆ.

ನೆಟ್ ವರ್ಕ್ ಸಮಸ್ಯೆ ತೀವ್ರ ಸ್ವರೂಪವನ್ನು ಪಡೆದುಕೊಂಡ ಸಂದರ್ಭ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಕರಿಕೆ ಚೆತ್ತುಕಾಯದಲ್ಲಿ ನೂತನ ಬಿಎಸ್‌ಎನ್‌ಎಲ್ ಟವರ್‌ನ್ನು ನಿರ್ಮಿಸಲಾಯಿತು. ಆದರೆ ಟವರ್ ನಿರ್ಮಾಣಗೊಂಡಿತೇ ಹೊರತು ಇಲ್ಲಿಯವರೆಗೆ ಕಾರ್ಯಾರಂಭ ಮಾಡಿಲ್ಲ. ಕರಿಕೆ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್ ಟವರ್ ಹೊರತುಪಡಿಸಿದರೆ ಬೇರೆ ಯಾವುದೇ ನೆಟ್‌ವರ್ಕ್ ಅಥವಾ ಟವರ್‌ಗಳಿಲ್ಲ. ನೂತನ ಟವರ್ ನಿರ್ಮಾಣಗೊಂಡಾಗ ನೆಟ್ ವರ್ಕ್ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎನ್ನುವ ಆಶಾಭಾವನೆ ಗ್ರಾಮಸ್ಥರಲ್ಲಿತ್ತು. ಆದರೆ ಭರವಸೆ ಹುಸಿಯಾಗಿದ್ದು, ಜಿಲ್ಲಾಧಿಕಾರಿಗಳು ಸ್ವಯಂ ಆಸಕ್ತಿ ವಹಿಸಿ ಗಡಿ ಗ್ರಾಮದ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ಹಾಡಬೇಕೆಂದು ಬಾಲಚಂದ್ರನ್ ನಾಯರ್ ಮನವಿ ಮಾಡಿದರು.