ಸಿದ್ದಾಪುರ, ನ. ೧೧: ಗೆಳೆಯರೊಂದಿಗೆ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಹುಂಡಿ ಗ್ರಾಮದಲ್ಲಿ ನಡೆದಿದೆ.

ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಹುಂಡಿ ಗ್ರಾಮದ ಹನಿಫಾಮ್ ಎಸ್ಟೇಟ್ ನ ತೋಟದ ಮನೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ವಾಸವಿದ್ದಾರೆ. ಇಂದು ಲೈನ್‌ಮನೆಯ ಮಕ್ಕಳು ಒಟ್ಟಾಗಿ ಸಮೀಪದ ಕೆರೆಯ ಬಳಿ ಆಟವಾಡುತ್ತಿರುವ ಸಂದರ್ಭದಲ್ಲಿ ಕಾರ್ಮಿಕ ಅಝರತ್ ಅಲಿ ಎಂಬುವವರ ಮೂರೂವರೆ ವರ್ಷ ಪ್ರಾಯದ ಗಂಡು ಮಗು ಬಿಲಾಲ್ ಅಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿದೆ. ಜೊತೆಯಲ್ಲಿದ್ದ ಮಕ್ಕಳ ಕಿರುಚಾಟ ಕೇಳಿ ಸ್ಥಳೀಯ ಕಾರ್ಮಿಕರು ಕೆರೆಯಲ್ಲಿ ಬಿದ್ದ ಮಗುವನ್ನು ರಕ್ಷಿಸಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದೆ. ಘಟನೆಯ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.