ಕೂಡಿಗೆ, ನ. ೧೧: ಬಾಣಾವರ ಸಮೀಪದ ಬೂವಂಗಾಲ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಹಗಲು ವೇಳೆ ಕಾಡಾನೆಗಳು ಪ್ರತ್ಯೇಕ್ಷಗೊಳುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಗ್ರಾಮಸ್ಥರು, ರೈತರು ಭಯಾಭೀತರಾಗಿರುತ್ತಾರೆ.
ಬಾಣಾವರ ಮೀಸಲು ಅರಣ್ಯ ವ್ಯಾಪ್ತಿಯ ಕಡೆಯಿಂದ ಬರುವ ಕಾಡಾನೆಗಳು ಮುಖ್ಯ ರಸ್ತೆಯಲ್ಲಿ ಹಗಲು ೮ ಗಂಟೆಯ ಸಮಯದಲ್ಲಿ ಕಂಡುಬರುತ್ತಿವೆ, ಅಲ್ಲದೆ ಈ ವ್ಯಾಪ್ತಿಯ ರೈತರು ಬೆಳಿಗ್ಗೆ ೭ ಗಂಟೆಗೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕಲು ಪಕ್ಕದ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆಯ ಮಧ್ಯದಲ್ಲಿ ಕಾಡಾನೆಗಳ ಪ್ರತ್ಯಕ್ಷದಿಂದಾಗಿ ಭಯಾಭೀತರಾಗುವುದರ ಜೊತೆಯಲ್ಲಿ ತಿರುಗಾಡುವುದೆ ಕಷ್ಟವಾಗಿದೆ ಎಂದು ಈ ವ್ಯಾಪ್ತಿಯ ವಿವೇಕ, ಈರಪ್ಪ, ಮೋಹನ್ ತಿಳಿಸಿದ್ದಾರೆ.
ಅಲ್ಲದೆ ಈಗಾಗಲೇ ಕಟಾವುಗೆ ಬಂದ ಭತ್ತದ ಬೆಳೆ, ಬಾಳೆ ಗೆಣಸು ಸೇರಿದಂತೆ ಇತರ ಬೆಳೆಗಳನ್ನು ತಿಂದು ತುಳಿದು ನಷ್ಟಪಡಿಸುತ್ತಿವೆ ಎಂದು ಬೂವಂಗಾಲ ವ್ಯಾಪ್ತಿಯ ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಅರಣ್ಯ ಇಲಾಖೆಯವರು ತುರ್ತಾಗಿ ಸ್ಪಂದಿಸುವAತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.