ಮಡಿಕೇರಿ, ನ. ೧೨: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ನಿಹಾರಿಕ ಅಲಿಯಾಸ್ ನಿಕ್ಕಿ ಮನೆ ಒಳಪ್ರವೇಶಿಸಿದ ಚಂದ್ರಶೇಖರ್ ನೇತೃತ್ವದ ಪೊಲೀಸ್ ತಂಡಕ್ಕೆ ಅಚ್ಚರಿ ಕಾದಿತ್ತು, ಮನೆಯ ಮುಂಬದಿ ಕೋಣೆಯಲ್ಲಿಯೇ ನೂರಾರು ಡಾಕ್ಯೂಮೆಂಟ್ಗಳನ್ನು ಹರಡಿಕೊಂಡು ಕುಳಿತಿದ್ದ ನಿಹಾರಿಕ, ಪೊಲೀಸರನ್ನು ನೋಡಿ ವಿಚಲಿತಳಾದಳು. ನಾಯಿಗಳನ್ನೂ ಸಲಹುವ ಬೋರ್ಡಿಂಗ್ ವಹಿವಾಟು ನಡೆಸುತ್ತಿದ್ದ ನಿಹಾರಿಕ ಪೊಲೀಸರ ಪ್ರಶ್ನೆಗೆ ಪ್ರಾರಂಭಿಕವಾಗಿ ಸಾಕಷ್ಟು ಸುಳ್ಳು ಉತ್ತರಗಳನ್ನೇ ನೀಡತೊಡಗಿದಳಾದರೂ ತಮ್ಮಲ್ಲಿನ ಖಚಿತ ಮಾಹಿತಿಗಳನ್ನು ಅವಳ ಮುಂದಿರಿಸಿದಾಗ ನಿಧಾನವಾಗಿ ಘಟನೆ ಬಗ್ಗೆ ಹೇಳತೊಡಗಿದಳು.
ನಿಹಾರಿಕ ಅಲಿಯಾಸ್ ನಿಕ್ಕಿ ಐಷಾರಾಮಿ ಜೀವನ ಶೈಲಿಗೆ ಮಾರು ಹೋಗಿದ್ದಳು. ಹೀಗಾಗಿ ಶ್ರೀಮಂತರನ್ನು ಪಟಾಯಿಸಿ ಅವರಲ್ಲಿದ್ದ ಹಣದಲ್ಲಿ ಶ್ರೀಮಂತಿಕೆಯ ಜೀವನ ಶೈಲಿ ರೂಪಿಸಿಕೊಂಡಿದ್ದಳು. ಹೈದರಾಬಾದ್ನಲ್ಲಿರುವ ರಮೇಶ್ ಕುಮಾರ್ ಎಂಬಾತ ನಿಕ್ಕಿಗೆ ಮೆಟ್ರಿಮೋನಿಯಲ್ಲಿ ಸಿಕ್ಕ ಹೊಸ ಮಿಕವಾಗಿದ್ದ, ರಮೇಶ್ ಕುಮಾರ್ ಅದಾಗಲೇ ಅರ್ಚನಾ ಎಂಬಾಕೆಯನ್ನು ವಿವಾಹವಾಗಿ ಮಗಳನ್ನೂ ಹೊಂದಿದ್ದ, ಆದರೆ ರಮೇಶ್ ಕುಮಾರ್ನಲ್ಲಿದ್ದ ಕೋಟ್ಯಂತರ ಆಸ್ತಿಯ ಆಸೆಗೆ ನಿಕ್ಕಿ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡು ಅವನನ್ನು ಮದುವೆಯಾದಳು. ಅರ್ಚನಾ ಈ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಬೆಂಗಳೂರಿನಲ್ಲಿದ್ದ ನಿಹಾರಿಕಾ ಅರ್ಚನಾಳನ್ನೇ ಬೆದರಿಸಿ ಬಾಯಿ ಮುಚ್ಚಿಸಿದ್ದಳು.
ರಮೇಶ್ ಕುಮಾರ್ ಮೂಲತ ಲ್ಯಾಂಡ್ ಡೆವಲಪರ್ ಮತ್ತು ರೈಲ್ವೇ ಇಲಾಖೆಯಲ್ಲಿ ಗುತ್ತಿಗೆದಾರ ಆಗಿದ್ದ. ಈತನಿಂದ ೮ ಕೋಟಿ ರೂಪಾಯಿ ಲಪಟಾಯಿಸಲು ನಿಹಾರಿಕ ಮುಂದಾಗಿದ್ದಳು. ಆದರೆ ಆರ್ಥಿಕ ಸಮಸ್ಯೆ ಎದುರಿಸಿದ್ದ ರಮೇಶ್ ಕುಮಾರ್ ಕೋಟಿಗಟ್ಟಲೆ ಹಣವನ್ನು ನಿಹಾರಿಕಳಿಗೆ ನೀಡಲು ಒಪ್ಪಿರಲಿಲ್ಲ ಹೀಗಾಗಿ ಆಕ್ರೋಶಗೊಂಡ ನಿಹಾರಿಕ ತನ್ನ ಪತಿಯಾಗಿದ್ದ ರಮೇಶ್ನನ್ನೇ ಕೊಲೆ ಮಾಡಲು ಸಂಚು ರೂಪಿಸತೊಡಗಿದಳು.
ನಿಹಾರಿಕ ಎಂತಹ ಚಾಲಾಕಿ ಎಂದರೆ ಒಂದೆಡೆ ರಮೇಶ್ ಕುಮಾರ್ನನ್ನು ವಿವಾಹವಾಗಿದ್ದರೆ ಮತ್ತೊಂದೆಡೆ ಪಶುವೈದ್ಯ ಡಾ. ನಿಖಿಲ್ ರೆಡ್ಡಿ ಎಂಬಾತನ ಜತೆ ಲೀವ್ ಇನ್ ರಿಲೇಷನ್ ಶಿಪ್ ಜೀವನ ನಡೆಸುತ್ತಿದ್ದಳು, ಡಾ. ನಿಖಿಲ್ ಬಳಿ ಕೂಡ ರಮೇಶ್ನನ್ನು ಮುಗಿಸಿಬಿಡುವ ಮಾತನಾಡಿದ್ದಳು. ಆದರೆ ನಿಖಿಲ್ ಕೊಲೆ ಕೃತ್ಯ ತನ್ನಿಂದ ಸಾಧ್ಯವಿಲ್ಲ ಎಂದು ಬಿಟ್ಟ.
ಕೊಲೆ ಯೋಚನೆ ಬಂದಾಗ ನಿಹಾರಿಕಳಿಗೆ ನೆನಪಾದವನೇ ತನ್ನನ್ನು ದೀದಿ ಎಂದು ಕರೆಯುತ್ತಿರುವ ಹರ್ಯಾಣದ ಅಂಕುರ್ ರಾಣ ಅಲಿಯಾಸ್ ರಜಪೂತ್ ರಾಣ.
ಉತ್ತರ ಭಾರತದಲ್ಲಿರುವ ಅಂಕುರ್ ರಾಣನಿಗೂ ನಿಹಾರಿಕಳಿಗೂ ಹೇಗೆ ಪರಿಚಯ ಎಂಬುದು ಕುತೂಹಲಕಾರಿ.
ಹರ್ಯಾಣ ಮೂಲದ ಕುಲ್ದೀಪ್ ಕುಮಾರ್ ಸೈನಿ ಎಂಬಾತ ನಿಹಾರಿಕಳ ಮೊದಲ ಗಂಡ. ಇವರೀರ್ವರೂ ವಿಚ್ಛೇದನ ಪಡೆದಿದ್ದರೂ ದೀಪ್ ವಂಚನೆ ಪ್ರಕರಣದಲ್ಲಿ ನಿಹಾರಿಕಾಳ ಮೇಲೆ ಕೇಸ್ ದಾಖಲಿಸಿ ಆಕೆಯನ್ನು ಹರ್ಯಾಣದಲ್ಲಿ ಜೈಲಿಗೆ ತಳ್ಳಿದ್ದ. ಇದೇ ಜೈಲಿನಲ್ಲಿ ನಿಹಾರಿಕಳಿಗೆ ಮಹಿಳಾ ಖೈದಿಯಾಗಿದ್ದ ಸಂತೋಷಿ ಎಂಬಾಕೆಯ ಪರಿಚಯವಾಗಿತ್ತು. ಈ ಮಹಿಳೆ ಅಟ್ರಾಸಿಟಿ ಕೇಸ್ನಲ್ಲಿ ಜೈಲು ಪಾಲಾಗಿದ್ದಳು. ಸಂತೋಷಿಯನ್ನು ನೋಡಲು ಆಗಾಗ ಜೈಲಿಗೆ ಆಕೆಯ ಮಗ ಬರುತ್ತಿದ್ದ. ಆತ ನಿಹಾರಿಕಳಿಗೂ ನಿಕಟನಾದ, ಆ ಮಗನ ಹೆಸರೇ ಅಂಕುರ್ ರಾಣ.
ಜೈಲಿನಿಂದ ಬಿಡುಗಡೆಯಾಗಿ ನಿಹಾರಿಕಾ ಬೆಂಗಳೂರಿಗೆ ಬಂದ ನಂತರ ರಾಣಾನಿಗೆ ಎರಡು ತಿಂಗಳು ಬೆಂಗಳೂರಿನಲ್ಲಿ ಬಾಡಿಗೆ ಕಾರ್ ಓಡಿಸುವ ಉದ್ಯೋಗವನ್ನೂ ನಿಹಾರಿಕ ನೀಡಿದ್ದಳು. ನಂತರ ರಾಣ ಮರಳಿ ಹರ್ಯಾಣಕ್ಕೆ ತೆರಳಿದ್ದ. ಅಂತೆಯೇ ಹರ್ಯಾಣದಲ್ಲಿನ ಕೇಸ್ ಸಂಬAಧಿತ ನಿಹಾರಿಕ ಅಲ್ಲಿಗೆ ತೆರಳಿದಾಗಲೆಲ್ಲಾ ರಾಣನ ಬಾಡಿಗೆ ಕಾರ್ನಲ್ಲಿಯೇ ಓಡಾಡುತ್ತಿದ್ದಳು. ಹೀಗಾಗಿ ರಾಣ ಮತ್ತು ನಿಹಾರಿಕಳ ಆತ್ಮೀಯತೆ ಮುಂದುವರೆದಿತ್ತು.
ರಮೇಶ್ ಕುಮಾರ್ ಕೊಲೆಗೆ ಅಂಕುರ್ ರಾಣನೇ ಸೂಕ್ತ ವ್ಯಕ್ತಿಯೆಂದು ನಿಹಾರಿಕ ಆತನನ್ನು ಹೈದರಾಬಾದ್ಗೆ ಬರುವಂತೆ ಹೇಳಿ ವಿಮಾನ ಟಿಕೆಟ್ನ್ನೂ ತಾನೇ ಬುಕ್ ಮಾಡಿದ್ದಳು.
ರಾಣಾನನ್ನು ಮೊದಲೇ ಹೈದರಾಬಾದ್ಗೆ ಬರಹೇಳಿದ ಪ್ರಕಾರವೇ ೧.೧೦.೨೪ ರಂದು ಹೈದರಾಬಾದ್ಗೆ ಬಂದಿಳಿದು ಸಿಂಗಾಪುರ್ ಸಿಟಿಯಲ್ಲಿರುವ ಡಿಎಂ ರೆಸಿಡೆನ್ಸಿ ರೂಮ್ ನಂಬರ್ ೧೦೬ ರಲ್ಲಿ ತಂಗಿದ್ದ. ನಿಹಾರಿಕಾ, ಹೊಟೇಲ್ನಲ್ಲಿದ್ದ ರಾಣನಿಗೆ ರಮೇಶ ಕುಮಾರನ ಓಡಾಟವನ್ನು ತಿಳಿದುಕೊಂಡು ಮಾಹಿತಿ ನೀಡುತ್ತಿರು ಎಂದು ಸೂಚಿಸಿದ್ದಳು.
ಅದರಂತೆ ಆತ ರಮೇಶ್ ಚಲನಲನವನ್ನು ಸೂಕ್ಷö್ಯವಾಗಿ ಗಮನಿಸಿ ನಿಕ್ಕಿಗೆ ತಿಳಿಸುತ್ತಲೇ ಇದ್ದ, ಆಕೆ ನೀಡಿದ ಹಣದಲ್ಲಿ ರಮೇಶ ಕುಮಾರ್ನನ್ನು ಮುಗಿಸಲು ಅಗತ್ಯವಾಗಿದ್ದ ಪೆಪ್ಪರ್ ಸ್ಪೆçÃ, ಮಾಸ್ಕ್, ಕ್ಯಾಪ್, ಒಂದು ಬೈಕ್ ಕ್ಲಚ್ವೈರ್ ಖರೀದಿ ಮಾಡಿದ್ದ, ನಿಹಾರಿಕ ೩.೧೦.೨೪ ರಂದು ಸಹೋದರನ ವಿವಾಹ ನಿಶ್ಚಿತಾರ್ಥಕ್ಕೆಂದು ಹೈದರಾಬಾದ್ಗೆ ಬೆಂಗಳೂರಿನಿAದ ತೆರಳುತ್ತಾಳೆ.
ನಿಶ್ಚಿತಾರ್ಥ ಮುಗಿದ ಕೂಡಲೇ ಪೂರ್ವನಿರ್ಧರಿತ ಯೋಜನೆಯಂತೆ ಉಪ್ಪಳ ಮೆಟ್ರೋವರೆಗೆ ಕ್ಯಾಬ್ನಲ್ಲಿ ಬಂದಿಳಿದು ರಾಣನನ್ನೂ ಅಲ್ಲಿಗೆ ಕೂಡಲೇ ಬರಲು ತಿಳಿಸುತ್ತಾಳೆ. ಅಂತೆಯೇ ರಮೇಶ್ ಕುಮಾರ್ಗೆ ಕೂಡ ಕರೆ ಮಾಡಿ ಅದೇ ಸ್ಥಳಕ್ಕೆ ಕರೆಸಿಕೊಳ್ಳುತ್ತಾಳೆ. ಪತ್ನಿ ಕರೆದಳೆಂದು ಕೂಡಲೇ ತನ್ನ ಮಾರುತಿ ಕಾರ್ನಲ್ಲಿ ಟೀಶರ್ಟ್, ಬರ್ಮುಡಾದಲ್ಲಿಯೇ ಬರುವ ರಮೇಶ್ ಕುಮಾರ್ಗೆ ಸ್ಥಳಕ್ಕೆ ಬಂದ ನಿಹಾರಿಕಾ ಅಲ್ಲಿಯೇ ರಾಣನನ್ನು ಗೆಳೆಯನೆಂದು ಪರಿಚಯಿಸಿದಳಲ್ಲದೇ ಇಬ್ಬರನ್ನೂ ಮಾರುತಿ ಕಾರ್ನಲ್ಲಿ ಕರೆದುಕೊಂಡು ಹೊರಟಳು. ದಾರಿ ಮಧ್ಯೆ ನಿರ್ಜನ ಪ್ರದೇಶ ಕಾಣುತ್ತಿದ್ದಂತೆಯೇ ತನಗೆ ನೈಸರ್ಗಿಕ ಕರೆಗೆ ಹೋಗಬೇಕು, ಕಾರ್ ನಿಲ್ಲಿಸುವಂತೆ ರಮೇಶ್ಗೆ ಸೂಚಿಸಿದಳು. ಪೆಟ್ರೋಲ್ ಬಂಕ್ ಮುಂದೆ ಇದೆ ಅಲ್ಲಿಯೇ ಹೋಗು ಎಂದು ರಮೇಶ್ ಹೇಳಿದಾಗ ಇಲ್ಲಾ ನನಗೆ ತುರ್ತು ಇದೆ, ಕೂಡಲೇ ಕಾರ್ ನಿಲ್ಲಿಸುವಂತೆ ಕೋರಿದಾಗ ಕಾರ್ ನಿಲ್ಲಿಸಿದ ರಮೇಶ್ ಕುತ್ತಿಗೆಗೆ ಹಿಂಬದಿ ಸೀಟ್ನಲ್ಲಿದ್ದ ರಾಣ ತನ್ನಲ್ಲಿದ್ದ ವೈರ್ನಿಂದ ಬಲವಾಗಿ ಬಿಗಿಯುತ್ತಾನೆ. ಸಾಕಷ್ಟು ಕೊಸರಾಡಿದ ರಮೇಶ್ನನ್ನು ಇಬ್ಬರೂ ಕಾರ್ನಿಂದ ಕೆಳಕ್ಕಿಳಿಸಿ ನೆಲದಲ್ಲಿ ಬೀಳಿಸಿ ಅವನ ಎದೆ ಮೇಲೆ ಕುಳಿತು ಕೊರಳಿಗೆ ಮತ್ತಷ್ಟು ಬಿಗಿಯಾಗಿ ವೈರ್ ಸುತ್ತಿದ ಪರಿಣಾಮ ರಮೇಶ್ ಕುಮಾರ್ ಸ್ಥಳದಲ್ಲಿಯೇ ಕೊನೆ ಉಸಿರೆಳೆಯುತ್ತಾನೆ. ಈ ರೀತಿ ಸಾವನ್ನಪ್ಪಿದ ರಮೇಶ್ ಮೃತದೇಹವನ್ನು ಕತ್ತಲಲ್ಲಿಯೇ ದಾರಿ ಬದಿಯ ಚರಂಡಿಯಲ್ಲಿ ಇರಿಸಿದ ಈರ್ವರೂ ಹಂತಕರು ಮಾರುತಿ ಕಾರ್ನಲ್ಲಿ ರಮೇಶ್ ಮೊಬೈಲ್ ಸಹಿತ ಆತ ಇದ್ದ ಕೋಣೆಗೆ ಬರುತ್ತಾರೆ.
ಅಲ್ಲಿ ನಿಹಾರಿಕ ತನಗೆ ಬೇಕಾಗಿದ್ದ ಡಾಕ್ಯೂಮೆಂಟ್ಗಳು, ಲ್ಯಾಪ್ಟಾಪ್, ಬ್ಯಾಗ್ ತೆಗೆದುಕೊಂಡರೆ ರಾಣ ಮನೆಯಲ್ಲಿದ್ದ ೨೯ ಸಾವಿರ ನಗದನ್ನು ಜೇಬಿಗಿಳಿಸಿಕೊಳ್ಳುತ್ತಾನೆ.
ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಮಾರುತಿ ಕಾರನ್ನು ಅಲ್ಲಿಯೇ ಇರಿಸಿ, ರಮೇಶ್ ಕುಮಾರ್ ತನ್ನೊಂದಿಗೆ ಇರಿಸಿಕೊಂಡಿದ್ದ ಆತನ ಗೆಳೆಯ ಶ್ರೀಹರಿಗೆ ಸೇರಿದ್ದ ಬೆನ್ಜ್ ಕಾರ್ನಲ್ಲಿ ಈರ್ವರು ಕೊಲೆಗಾರರು ಅಲ್ಲಿಂದ ಹೊರಬೀಳುತ್ತಾರೆ. ರಮೇಶ್ ಕುಮಾರ್ನ ಮೃತದೇಹ ಬಿಸಾಡಿದ್ದ ನಿರ್ಜನ ಪ್ರದೇಶಕ್ಕೆ ತಲುಪಿದ ಈರ್ವರೂ ಬೆನ್ಜ್ ಕಾರ್ನಲ್ಲಿ ಮೃತದೇಹವನ್ನು ಹಾಕಿಕೊಂಡು ಬೆಂಗಳೂರಿನ ಡಾ. ನಿಖಿಲ್ ರೆಡ್ಡಿ ಮನೆಗೆ ಮರಳುತ್ತಾರೆ.
ಇವರು ಬರುವ ಸಂದರ್ಭ ಸಂಶಯ ಬರದಂತೆ ನಿಖಿಲ್ ರೆಡ್ಡಿ ಮನೆಯ ಮುಂಬದಿಯ ಸಿಸಿ ಕ್ಯಾಮರಗಳನ್ನು ಆಫ್ ಮಾಡುತ್ತಾನೆ. ಮಾರುತಿ ಕಾರ್ ನಿಲ್ಲಿಸಲು ವಾಹನ ನಿಲುಗಡೆ ಪ್ರದೇಶದಲ್ಲಿದ್ದ ತನ್ನ ದ್ವಿಚಕ್ರವಾಹನಗಳನ್ನೂ ತೆರವುಗೊಳಿಸಿ ಸಹಕರಿಸುತ್ತಾನೆ.
ನಿಖಿಲ್ ರೆಡ್ಡಿ ಮನೆಯಲ್ಲಿ ಕುಳಿತ ಮೂವರೂ ಮುಂದೇನು ಎಂದು ಪ್ರಶ್ನಿಸಿಕೊಳ್ಳುತ್ತಾರೆ, ದೇಹವನ್ನು ಇಲ್ಲಿಯೇ ಬಿಟ್ಟರೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ, ಬಹು ದೂರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಸುಟ್ಟು ಹಾಕುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಮೂವರು ಬರುತ್ತಾರೆ. ಇದಕ್ಕೆ ತಯಾರಿಯಾಗಿ ಡಾ. ನಿಖಿಲ್ ಪೆಟ್ರೋಲ್ ಬಂಕ್ಗೆ ತೆರಳಿ ತನ್ನ ಬೈಕ್ನ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳುತ್ತಾನೆ, ಮನೆಗೆ ಮರಳಿ ಮನೆಯಲ್ಲಿದ್ದ ವಾಟರ್ ಕ್ಯಾನ್ನಲ್ಲಿದ್ದ ನೀರು ಚೆಲ್ಲಿ ಪೆಟ್ರೋಲ್ ಭರ್ತಿ ಮಾಡಿಕೊಂಡು ಪೂರ್ವಸಿದ್ಧತೆ ಕೈಗೊಳ್ಳುತ್ತಾರೆ, ಅಂಗಡಿಗೆ ಹೋಗಿ ಕೈಗವಚ, ಮಾಸ್ಕ್, ಮಂಕಿ ಕ್ಯಾಪ್ ಖರೀದಿ ಮಾಡಿಕೊಂಡ ನಿಖಿಲ್ ಮನೆಗೆ ಮರಳಿದೊಡನೆ ಎಲ್ಲಿಗೆ ಹೋಗಿ ದೇಹ ಸುಟ್ಟುಹಾಕುವುದು ಎಂಬ ಚರ್ಚೆ ಪ್ರಾರಂಭಿಸುತ್ತಾರೆ.
ಯಾರಿಗೂ ಗೊತ್ತಾಗದ,,, ಕಾಡು ಪ್ರದೇಶವಿರುವ ಜಾಗ ತನಗೆ ತಿಳಿದಿದೆ ಎಂದು ನಿಖಿಲ್ ಹೇಳುತ್ತಾನೆ, ಆತ ಹೇಳಿದ ನಾಡಿಗೆ ಈ ಮೊದಲು ನಿಹಾರಿಕಾ ಕೂಡ ಹೋಗಿರುತ್ತಾಳೆ. ಹೀಗಾಗಿ ಈ ಇಬ್ಬರೂ ರಮೇಶ್ ಮೃತದೇಹ ಸುಡಲು ಸೂಕ್ತ ಎಂದು ತೀರ್ಮಾನಿಸಿದ್ದ ಕಾಡು ಪ್ರದೇಶದ ಆ ಜಿಲ್ಲೆಗೆ ತೆರಳಲು ಆ ರಾತ್ರಿಯಲ್ಲಿ ಹಂತಕರು ಮುಂದಾಗುತ್ತಾರೆ.
ನಿಹಾರಿಕಾ ಎಷ್ಟು ಚಾಲಕಿ ಎಂದರೆ ತನ್ನ ಜತೆಗೇ ಇದ್ದ ರಮೇಶ್ ಕುಮಾರ್ ಮೊಬೈಲ್ಗೇ ತನ್ನ ಮೊಬೈಲ್ನಿಂದಲೇ ನಾನು ಮಗಳನ್ನು ನೋಡಲು ಬೆಂಗಳೂರಿಗೆ ವಾಪಸ್ ಹೊರಟಿದ್ದೇನೆ ಎಂದು ಸಂದೇಶ ರವಾನಿಸುತ್ತಾಳೆ. ಅಂದರೆ ರಮೇಶ್ನಿಂದ ತಾನು ದೂರದಲ್ಲಿದ್ದೇನೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸುವ ತಂತ್ರ ಬಳಸುತ್ತಾಳೆ.
ಅಂದು ೫.೧೦.೨೪ ರಾತ್ರಿ ೧೦ ಗಂಟೆ ಸುಮಾರಿಗೆ ಬೆನ್ಜ್ ಕಾರ್ನ ಡಿಕ್ಕಿಯಲ್ಲಿ ಮೃತದೇಹ ಮಲಗಿಸಿ ಅದರ ಮೇಲೆ ಬ್ಯಾಗ್ಗಳನ್ನಿಟ್ಟು ಮೂವರೂ ಮೈಸೂರು ದಾಟಿಕೊಂಡು ಮೃತದೇಹ ಸುಟ್ಟು ಹಾಕಲು ಪ್ರವೇಶಿಸಿದ ಜಿಲ್ಲೆಯೇ ಕೊಡಗು.
ಕಾಫಿ ತೋಟ, ಕಾಡು ಪ್ರದೇಶದಲ್ಲಿ ರಮೇಶ್ ಕುಮಾರ್ ಮೃತದೇಹ ಸುಟ್ಟು ಹಾಕಿದರೆ ಯಾರಿಗೂ ಗೊತ್ತಾಗುವುದಿಲ್ಲ, ಗೊತ್ತಾದರೂ ಯಾವುದೇ ಸುಳಿವಿಲ್ಲದೇ ತಮ್ಮನ್ನು ಹಿಡಿಯಲು ಅಸಾಧ್ಯ ಎಂದೇ ನಂಬಿದ್ದ ಹಂತಕರಿಗೆ ತಿಳಿಯದೇ ಇದ್ದದ್ದು ಒಂದೇ - ಕಾಫಿ ತೋಟ, ಕಾಡು ಪ್ರದೇಶಗಳ ಈ ಸ್ಥಳದಲ್ಲಿದ್ದಾರೆ- ಕೊಡಗು ಪೊಲೀಸ್!
- ಅನಿಲ್ ಎಚ್.ಟಿ.
(ನಾಳಿನ ಸಂಚಿಕೆಯಲ್ಲಿ - ಸಾಕೋಡಿಯ ಶಿವ ಡಾಬಾದಲ್ಲಿ ರಾಣಾ ಇನ್ನೇನು ಟೀ ಚಪ್ಪರಿಸಬೇಕು ಎಂಬಷ್ಟರಲ್ಲಿ ಎದುರಿಗೆ ಬಂದು ನಿಂತವರು,, ಕೊಡಗು ಖಾಕಿ ಟೀಮ್ )