ಲೋಕಾಯುಕ್ತ ದಾಳಿಗೆ ಹೆದರಿ ಹಣವನ್ನು ಎಸೆದ ಇಂಜಿನಿಯರ್!
ಹಾವೇರಿ, ನ. ೧೨: ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಹೆದರಿದ ಹಾವೇರಿ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪವಿಭಾಗದ ಸಹಾಯಕ ಇಂಜಿನಿಯರ್ ಕಾಶಿನಾಥ್ ಭಜಂತ್ರಿ ರೂ. ೯ ಲಕ್ಷ ನಗದನ್ನು ಗಂಟು ಕಟ್ಟಿ ಹೊರಗೆಸೆದಿದ್ದಾರೆ. ಇಂದು ಬೆಳಿಗ್ಗೆ ಲೋಕಾಯುಕ್ತ ಎಸ್.ಪಿ. ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ಬಸವೇಶನಗರದ ೧ನೇ ಕ್ರಾಸ್‌ನಲ್ಲಿರುವ ಭಜಂತ್ರಿ ನಿವಾಸದ ಮೇಲೆ ದಾಳಿ ನಡೆಸಿತ್ತು. ಆಗ ಈ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಮನೆಯ ಮುಂದೆ ಬಂದು ಬಾಗಿಲು ಬಡಿದಾಗ ಭಜಂತ್ರಿ ಗಾಬರಿಗೊಂಡಿದ್ದು ಕೂಡಲೇ ಕೋಣೆಗೆ ತೆರಳಿ ರೂ. ೯ ಲಕ್ಷ ನಗದು ಗಂಟು ಕಟ್ಟಿ ಶೌಚಾಲಯದ ಕಿಟಕಿ ಮೂಲಕ ಹೊರಗೆಸೆದಿದ್ದಾರೆ. ಇದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಆ ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಜಂತ್ರಿ ೨ ಲಕ್ಷ ರೂಪಾಯಿ ನಗದನ್ನು ಹಾಸಿಗೆಯಲ್ಲಿ ಸುತ್ತಿ ಇಟ್ಟಿದ್ದರು. ಮನೆಯಲ್ಲಿದ್ದ ೧೪ ಲಕ್ಷ ರೂಪಾಯಿ ನಗದು ಹಣವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕೌಲಾಪುರೆ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್ ಮನೆ ಮೇಲೆ ದಾಳಿ ವೇಳೆಯಲ್ಲಿ ರೂ. ೧ ಲಕ್ಷ ನಗದು, ಇನ್ನೋವಾ ಕಾರು ಹಾಗೂ ಆಸ್ತಿಯ ದಾಖಲೆ ಪತ್ತೆಯಾಗಿವೆ. ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದ ಕಮಲ್ ರಾಜ್ ಹಲವು ಬಡ್ತಿ ಪಡೆದು ಸಹಾಯಕ ನಿರ್ದೇಶಕರಾಗಿದ್ದರು. ಚಿತ್ರದುರ್ಗ ಹಾಗೂ ದಾವಣೆಗೆರೆಯಲ್ಲಿ ಮನೆ, ಮೂರು ನಿವೇಶನ ಸೇರಿ ಇತರ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಧಾರವಾಡದ ಕೆಐಎಡಿಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಭಜಂತ್ರಿ ಅವರ ಸಂಬAಧಿಕರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ವೆಂಕಟೇಶ್ ಎಂಬುವರ ಬೆಳಗಾವಿ ನಿವಾಸದ ಮೇಲೂ ದಾಳಿ ನಡೆದಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ವೆಂಕಟೇಶ್ ಅವರು ಈ ಹಿಂದೆ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದರು. ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರ ರೊಟ್ಟಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ. ಬೀದರ್, ಬೆಂಗಳೂರು ನಿವಾಸ, ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ದಾಖಲೆ ಹಾಗೂ ಇನ್ನಿತರ ಮಾಹಿತಿ ಕಲೆಹಾಕಲಾಗಿದೆ.
ಬಿ. ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ: ಸಿಎಂ ಸುಳಿವು
ಮೈಸೂರು, ನ. ೧೨: ವಾಲ್ಮೀಕಿ ಮಂಡಳಿ ಹಗರಣದ ವಿವಾದಗಳಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲುಪಾಲಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಶಾಸಕ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಯಲ್ಲಿ ಇಂದು ೪೪೩.೬೪ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ನೆರೆದಿದ್ದ ಬೆಂಬಲಿಗರು ಮತ್ತು ನಾಯಕ ಸಮುದಾಯದವರಿಗೆ ಭರವಸೆ ನೀಡಿ ಮಾತನಾಡಿದ ಅವರು, ನಾಗೇಂದ್ರ ಅವರಿಗೆ ಶೀಘ್ರದಲ್ಲೇ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು. ಹೆಚ್.ಡಿ. ಕೋಟೆ ಶಾಸಕ ಸಿ. ಅನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ನಾಯಕ ಸಮುದಾಯದವರ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ಈ ಮಾತುಗಳನ್ನಾಡಿದ್ದಾರೆ. ಅನಿಲ್ ಬೆಂಬಲಿಗರು ಹಾಗೂ ರಾಜನಹಳ್ಳಿ ಮಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನಾಗೇಂದ್ರ ಅವರಿಗೆ ಸ್ಥಾನ ನೀಡಲಾಗುವುದು, ನಾನು ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ ಎಂದು ಒತ್ತಿ ಹೇಳಿದರು.
೫ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!
ಬೆಂಗಳೂರು, ನ. ೧೨: ರಾಜ್ಯದಲ್ಲಿ ಮತ್ತೆ ಮಳೆಯ ಅವಾಂತರ ಸೃಷ್ಟಿಯಾಗಬಹುದು. ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ತಾ. ೧೪ ರಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಹಾವೇರಿ, ಧಾರವಾಡ, ಮಂಡ್ಯ, ಹಾಸನ, ಚಿತ್ರದುರ್ಗ, ಬೀದರ್, ಕೊಪ್ಪಳ, ವಿಜಯಪುರ, ದಾವಣಗೆರೆ, ತುಮಕೂರು, ರಾಮನಗರ, ಕೋಲಾರ, ಗದಗ, ಬೆಳಗಾವಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗಿದೆ.
ರಸ್ತೆ ಬದಿ ಜಗಳವಾಡುತ್ತಿದ್ದವರಿಗೆ ಬಸ್ ಡಿಕ್ಕಿ: ಇಬ್ಬರ ದುರ್ಮರಣ
ಬೆಂಗಳೂರು, ನ. ೧೨: ರಸ್ತೆ ಬದಿ ನಿಂತು ಜಗಳವಾಡುತ್ತಿದ್ದವರಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಯಲಹಂಕ ಮೇಲ್ಸೇತುವೆಯಲ್ಲಿ ಮಂಗಳವಾರ ನಡೆದಿದೆ. ಯಲಹಂಕ ಮೇಲ್ಸೇತುವೆ ಮೇಲೆ ಇನೋವಾ ಕಾರಿಗೆ ಮೊದಲು ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಮೇಲ್ಸೇತುವೆ ಮೇಲೆ ಇಬ್ಬರು ಬಲಭಾಗದಲ್ಲಿ ನಿಂತು ಜಗಳವಾಡುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಬಿಎಂಟಿಸಿ ವೋಲ್ವೊ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್ ಚಾಲಕ ಕುಲದೀಪ್ ಕುಮಾರ್ (೪೨) ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರು ಚಾಲಕ ಜಗದೀಶ್ (೪೦) ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್ ಚಾಲಕ ಪುಟ್ಟಸ್ವಾಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಏಕೈಕ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯಲಹಂಕ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಯೋಗ ಗುರು ಶರತ್ ಜೋಯಿಸ್ ನಿಧನ
ವರ್ಜೀನಿಯಾ, ನ. ೧೨: ಅಮೇರಿಕಾದ ವರ್ಜೀನಿಯಾದಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದ ಮೈಸೂರಿನ ಖ್ಯಾತ ಯೋಗ ಗುರು ಶರತ್ ಜೋಯಿಸ್ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ಶರತ್ ಜೋಯಿಸ್ ಅವರಿಗೆ ೫೩ ವರ್ಷ ವಯಸ್ಸಾಗಿತ್ತು, ಅವರು ಮಡೋನಾ, ಗ್ವಿನೆತ್ ಪಾಲ್ಟೊçà ಮತ್ತು ಸ್ಟಿಂಗ್ ಸೇರಿದಂತೆ ಹಲವಾರು ಜಾಗತಿಕ ಪ್ರಸಿದ್ಧ ವ್ಯಕ್ತಿಗಳಿಗೆ ಅಷ್ಟಾಂಗ ಯೋಗವನ್ನು ಕಲಿಸಿದ್ದಾರೆ. ಮೈಸೂರಿನ ಕೆ. ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರು ಅಮೆರಿಕಾದ ವರ್ಜೀನಿಯಾದಲ್ಲಿ ಯೋಗ ಗುರುವಾಗಿ ನೆಲೆಸಿದ್ದರು. ಶರತ್ ಜೋಯಿಸ್ ಅವರು ತಮ್ಮ ಅಜ್ಜ ಕೆ. ಪಟ್ಟಾಭಿ ಜೋಯಿಸ್ ಅವರಂತೆ ಯೋಗ ಶಾಲೆ ನಡೆಸುತ್ತಿದ್ದರು. ಮೈಸೂರಿನಲ್ಲಿ ಇವರದ್ದೇ ಆದ ಯೋಗ ಕೇಂದ್ರವಿದೆ. ಶರತ್ ಜೋಯಿಸ್ ಅವರು ಸೆಪ್ಟೆಂಬರ್ ೨೯, ೧೯೭೧ ರಂದು ಮೈಸೂರಿನಲ್ಲಿ ಸರಸ್ವತಿ (ಪಟ್ಟಾಭಿ ಜೋಯಿಸ್ ಅವರ ಪುತ್ರಿ) ಮತ್ತು ರಂಗಸ್ವಾಮಿ ದಂಪತಿಯ ಮಗನಾಗಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಯೋಗದಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು.