ಗೋಣಿಕೊಪ್ಪಲು, ನ. ೧೨: ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರು, ಪೊದಕೋಟೆ ಸುತ್ತಮುತ್ತಲಿನ ಅರಣ್ಯ ಪ್ರದೇಶ ಹಾಗೂ ರೈತರ ಕಾಫಿ ತೋಟದಲ್ಲಿ ಹುಲಿಯ ಸಂಚಾರ ಇರುವುದನ್ನು ಗಮನಿಸಿದ ಗ್ರಾಮಸ್ಥರು ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರಿಗೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿ ಮೇರೆ ಮುಂಜಾನೆ ವೇಳೆ ವೀರಾಜಪೇಟೆ ಡಿಎಫ್ಓ ಜಗನ್ನಾಥ್ ಹಾಗೂ ಆರ್ಎಫ್ಓ ಶಿವರಾಮ್ ಹಾಗೂ ಇಲಾಖೆಯ ಸಿಬ್ಬಂದಿಗಳೊAದಿಗೆ ಚೆಂಬೆಬೆಳ್ಳೂರಿಗೆ ತೆರಳಿದ ಸಂಕೇತ್ ಪೂವಯ್ಯ ಸ್ಥಳೀಯ ಭದ್ರಕಾಳಿ ದೇವಾಲಯದ ಹೊರಾಂಗಣದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಹುಲಿ ಹಾಗೂ ಕಾಡಾನೆ ಹಾವಳಿ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಹುಲಿಯ ಕಾರ್ಯಾಚರಣೆಗೆ ಇಲಾಖೆಯು ತಕ್ಷಣದಿಂದ ಕಾರ್ಯ ಪ್ರವೃತ್ತರಾಗಲಿದ್ದು ಗ್ರಾಮಸ್ಥರು ಇಲಾಖೆಯ ಸಿಬ್ಬಂದಿಗಳೊAದಿಗೆ ಸಹಕರಿಸಬೇಕು. ೧೦೦ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಗತ್ಯವಿದ್ದಲ್ಲಿ ಇನ್ನಷ್ಟು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸ್ಥಳದಲ್ಲಿದ್ದ ವೀರಾಜಪೇಟೆ ಡಿಸಿಎಫ್ ಜಗನ್ನಾಥ್ ಅವರಿಗೆ ನಿರ್ದೇಶನ ನೀಡಿದರು. ಸ್ಥಳೀಯರಾದ ಮಂಡೇಪAಡ ಜಾಲಿ ಗಣಪತಿ ಭತ್ತದ ಗದ್ದೆಯಲ್ಲಿ ಹುಲಿಯ ಹೆಜ್ಜೆ ಗುರುತು ಆಧರಿಸಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುವಂತೆ ಡಿಎಫ್ಓ ಜಗನ್ನಾಥ್ ಸಿಬ್ಬಂದಿಗಳಿಗೆ ಹೇಳಿದರು.
ಡಿಸಿಎಫ್ ಜಗನ್ನಾಥ್ ಮಾತನಾಡಿ, ಹುಲಿಯನ್ನು ಕಾರ್ಯಾಚರಣೆ ನಡೆಸಿ ನಾಡಿನಿಂದ ಕಾಡಿಗೆ ಅಟ್ಟುವ ಪ್ರಯತ್ನಕ್ಕೆ ಮುಂದಾಗಲಿದ್ದೇವೆ. ೭ ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ. ಕಾಡಾನೆ ದಾಳಿಯಿಂದ ಫಸಲು ನಷ್ಟಗೊಂಡ ರೈತರಿಗೆ ಸಕಾಲದಲ್ಲಿ ಪರಿಹಾರ ಒದಗಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಅಗತ್ಯವಿದ್ದಲ್ಲಿ ಭತ್ತ ಬೆಳೆಯುವ ಭಾಗದಲ್ಲಿ ಸಿಬ್ಬಂದಿಗಳು ಕಾಡಾನೆಯು ಭತ್ತದ ಗದ್ದೆಗೆ ನುಸುಳದಂತೆ ಎಚ್ಚರವಹಿಸುತ್ತಾರೆ ಎಂಬ ಮಾಹಿತಿಯನ್ನು ಗ್ರಾಮಸ್ಥರಿಗೆ ಒದಗಿಸಿದರು. ಈಗಾಗಲೇ ಬೆಳೆ ನಷ್ಟ ಪರಿಹಾರವನ್ನು ಇಲಾಖೆ ವತಿಯಿಂದ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.
ಭತ್ತ ಬೆಳೆಯುವ ರೈತರು ತಮ್ಮ ಗದ್ದೆಗಳಿಗೆ ಸಾಮೂಹಿಕವಾಗಿ ಸೋಲಾರ್ ಬೇಲಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಾಡಾನೆಯ ಉಪಟಳವನ್ನು ತಪ್ಪಿಸಬಹುದಾಗಿದೆ. ಅರಣ್ಯ ಇಲಾಖೆಯು ಈ ನಿಟ್ಟಿನಲ್ಲಿ ರೈತರಿಗೆ ಸಹಾಯವಾಗಿ ಶೇ. ೫೦ ರಷ್ಟು ಅನುದಾನವನ್ನು ಸಬ್ಸಿಡಿ ರೂಪದಲ್ಲಿ ನೀಡಲಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ರೈತರು ತಮ್ಮ ಭತ್ತದ ಗದ್ದೆಗಳನ್ನು ಪಾಳುಬಿಡದೆ ಭತ್ತವನ್ನು ಬೆಳೆಯುವಂತಾಗಬೇಕು. ಇಲಾಖೆಯು ತಮಗೆ ಸಹಾಯಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಕಳೆದ ೨೦ ವರ್ಷಗಳಿಂದ ಹುಲಿ ಹಾಗೂ ಕಾಡಾನೆಯ ಉಪಟಳದಿಂದ ಈ ಭಾಗದ ರೈತರು ಸಾಕಷ್ಟು ನೊಂದಿದ್ದಾರೆ. ಒಂದು ಭಾಗದಿಂದ ಕಾಡಾನೆಗಳನ್ನು ಓಡಿಸಿ ಮತ್ತೊಂದು ಭಾಗಕ್ಕೆ ಬಿಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಮ್ಮತ್ತಿ ವಲಯ ಹಾಗೂ ವೀರಾಜಪೇಟೆ ವಲಯ ಒಟ್ಟಾಗಿ ಸೇರಿ ಕಾರ್ಯಾಚರಣೆ ಕೈಗೆತ್ತಿಕೊಳ್ಳಬೇಕು. ಇದರಿಂದ ಒಂದೇ ದಿನದಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸವಾಗಲಿದೆ. ಆ ನಿಟ್ಟಿನಲ್ಲಿ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಪ್ರತಿಕ್ರಯಿಸಿ ಪೊನ್ನಣ್ಣ ಶಾಸಕರಾದ ಬಳಿಕ ಕಾಡಾನೆ ಹಾವಳಿ ನಿಯಂತ್ರಣ ಸಂಬAಧ ಹೆಚ್ಚಿನ ನಿಗಾವಹಿಸಲಾಗಿದೆ. ಈಗಾಗಲೇ ದಕ್ಷಿಣ ಕೊಡಗಿನಲ್ಲಿ ಹುಲಿಕಾರ್ಯಾಚರಣೆಯನ್ನು ಇಲಾಖೆಯು ಅತ್ಯಂತ ಯಶಸ್ವಿಯಾಗಿ ಕೈಗೆತ್ತಿಕೊಳ್ಳುವ ಮೂಲಕ ಹುಲಿಯನ್ನು ಅರಣ್ಯ ಪ್ರದೇಶಕ್ಕೆ ಓಡಿಸಲಾಗಿದೆ. ಇಲ್ಲಿಯೂ ಕೂಡ ಹುಲಿಯನ್ನು ಪತ್ತೆಹಚ್ಚಿ ಕಾಡಿಗೆ ಅಟ್ಟುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಉಪಟಳ ಅಧಿಕವಿದ್ದಲ್ಲಿ ಹುಲಿಯನ್ನು ಸೆರೆ ಹಿಡಿಯಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಹುಲಿಯ ಚಲನ ವಲನದ ಬಗ್ಗೆ ನಿಗಾವಹಿಸಲು ಆಯಾಕಟ್ಟಿನ ಹುಲಿ ಸಂಚಾರದ ಪ್ರದೇಶದಲ್ಲಿ ಕ್ಯಾಮರಾಗಳನ್ನು ಅಳವಡಿಸಿ ಪತ್ತೆ ಹಚ್ಚಲಾಗುವುದು. ಅಗತ್ಯವಿದ್ದಲ್ಲಿ ಹುಲಿಯ ಸೆರೆಗೂ ಕ್ರಮ ಕೈಗೊಳ್ಳುತ್ತೇವೆ. ಗ್ರಾಮಸ್ಥರ ಸಹಕಾರ ಅಗತ್ಯವಿದೆ ಎಂದರು.
ಡಿಎಫ್ಓ ಜಗನ್ನಾಥ್ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ವಿವಿಧ ತಂಡಗಳೊAದಿಗೆ ಅರಣ್ಯ ಪ್ರದೇಶಕ್ಕೆ ತೆರಳಿ ಹುಲಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಈ ವೇಳೆ ಅರಣ್ಯ ಪ್ರದೇಶದ ಒಳ ಪ್ರವೇಶಿಸುವ ದಾರಿಯಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಯಿತು. ಇವುಗಳ ಆಧಾರದ ಮೇಲೆ ಹುಲಿ ಇದೇ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಕಾರ್ಯಾಚರಣೆ ತಂಡವು ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕಿತು. ಮುಂಜಾನೆಯಿAದ ಸಂಜೆಯವರೆಗೂ ಕಾರ್ಯಾಚರಣೆ ಮುಂದುವರೆಯಿತು.
ಸಭೆಯಲ್ಲಿ ಚೆಂಬೆಬೆಳ್ಳೂರು ಗ್ರಾಮದ ಗ್ರಾಮಸ್ಥರಾದ ಕೋಳೆರ ರನ್ನು, ಚಾರಿಮಂಡ ಪ್ರಕಾಶ್, ಕೊಳುವಂಡ ಹರೀಶ್, ಉಳ್ಳಿಯಡ ಜೀವನ್, ಮಂಡೇಪAಡ ಮುತ್ತಪ್ಪ, ವೀರಾಜಪೇಟೆ ಪುರಸಭೆ ಸದಸ್ಯರಾದ ಶಭರೀಶ್, ಅರಣ್ಯ ಇಲಾಖೆಯ ವೀರಾಜಪೇಟೆ ಆರ್ಎಫ್ಓ ಶಿವರಾಮ್, ಡಿಆರ್ಎಫ್ಓ ದೇವಯ್ಯ, ಪ್ರಶಾಂತ್ ಕುಮಾರ್, ವಿವಿಧ ಅಧಿಕಾರಿಗಳಾದ ಸಂಜು ಸೋಮಯ್ಯ, ನಾಗರಾಜ್, ಮೋನಿಷ, ಅರುಣ, ಚಂದ್ರು, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಸಭೆಯ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳೊAದಿಗೆ ಅನೇಕ ಗ್ರಾಮಸ್ಥರು ಹುಲಿಯ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಕಾರ್ಯಾಚರಣೆಗೂ ಮುನ್ನ ಸ್ಥಳೀಯ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
-ಚಿತ್ರ, ವರದಿ : ಹೆಚ್.ಕೆ. ಜಗದೀಶ್