ವೀರಾಜಪೇಟೆ, ನ. ೧೨: ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ರಾತ್ರಿಯಾಗುತ್ತಲೇ ಪಟ್ಟಣದಾದ್ಯಂತ ನಾಯಿಗಳ ದಂಡೇ ಕಂಡುಬರುತ್ತವೆ. ಆದರೆ ಅವುಗಳನ್ನು ನಿಯಂತ್ರಣ ಮಾಡುವ ಕುರಿತು ಯಾವುದೇ ಸ್ಥಳೀಯಾಡಳಿತ, ಪಶು ಸಂಗೋಪನಾ ಇಲಾಖೆ ಬಳಿ ಯಾವುದೇ ಕಾರ್ಯಕ್ರಮಗಳಿಲ್ಲ.!
ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಬೀದಿನಾಯಿಗಳು ರಸ್ತೆಗಿಳಿಯುತ್ತಿದ್ದು, ಪರಸ್ಪರ ಕಚ್ಚಾಡುತ್ತಾ ರಾದ್ಧಾಂತ ಸೃಷ್ಟಿಸುತ್ತಿರುತ್ತವೆ. ಅವುಗಳ ಜೊತೆಗೆ ನಾಯಿ ಮರಿಗಳು ಕೂಡ ಕಾಣಿಸಿಕೊಳ್ಳುತ್ತಿದ್ದು, ರಾತ್ರಿಯಿಡೀ ರಸ್ತೆಯುದ್ದಕ್ಕೂ ಓಡಾಡುತ್ತಿರುತ್ತವೆ. ನಾಯಿಗಳ ರಾಶಿಯನ್ನು ಕಂಡು ಜನರು ನಡೆದಾಡುವುದಕ್ಕೆ ಆತಂಕ ಪಡುವ ಸ್ಥಿತಿ ಇದೆ.
ಸಂತಾನಹರಣ ಚಿಕಿತ್ಸೆ
ಸಾಮಾನ್ಯವಾಗಿ ಬೀದಿನಾಯಿಗಳನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಅವುಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನೀಡಿ ಮತ್ತೆ ಅದೇ ಸ್ಥಳಕ್ಕೆ ತಂದು ಬಿಡಲಾಗುತ್ತದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೋನಿ ನಿವಾಸಿಗಳ ನಿದ್ದೆಗೆಡಿಸುತ್ತಿರುತ್ತದೆ.
ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಪುರಸಭೆಗೆ ಸ್ಥಳೀಯರು ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ಪುರಸಭೆಗೆ, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದೊಳಗೆ ಹೊಟೇಲ್, ಮಾಂಸ ಮಾರುಕಟ್ಟೆ, ಮಾರ್ಗದ ರಸ್ತೆಗಳಲ್ಲಿ ಮಾಂಸದAಗಡಿಗಳು ಇವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ಕಾಣಿಸುತ್ತವೆ. ಅಂಗಡಿದಾರರು ಸಾರ್ವಜನಿಕ ಸ್ಥಳ, ಕಸದ ತೊಟ್ಟಿಯಲ್ಲಿ ಮಾಂಸದ ತ್ಯಾಜ್ಯ ಹಾಕುವುದರಿಂದ ನಾಯಿಗಳು ಚೆಲ್ಲಾಟ ಹೆಚ್ಚಾಗಿದೆ.
ಸಂತಾನ ತಡೆ ಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ಪುರಸಭೆ ಮುಂದಾಗುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪುರಸಭೆ ಇವುಗಳ ನಿಯಂತ್ರಣ ಮಾಡುವುದಕ್ಕೆ ನಿರ್ಲಕ್ಷ÷್ಯ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರತಿಭಟನೆ ಎಚ್ಚರಿಕೆ
ಬೀದಿನಾಯಿಗಳಿಗೆ ಕಡಿವಾಣ ಹಾಕಲು ಹದಿನೈದು ದಿನಗಳ ಗಡುವು ನೀಡುತ್ತಿದ್ದೇವೆ. ಇಲ್ಲದ್ದಿದ್ದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ವೀರಾಜಪೇಟೆ ಸಾರ್ವಜನಿಕರ ಪರವಾಗಿ ಸಾಮಾಜಿಕ ಕಾರ್ಯ ಕರ್ತ ಎಂ.ಬಿ. ಮುಕ್ತಾರ್ ಪ್ರತಿಕ್ರಿ ಯಿಸಿದ್ದಾರೆ. ದಿನದಿಂದ ದಿನಕ್ಕೆ ಬೀದಿ ನಾಯಿಗಳ ಅವಾಂತರ ಜಾಸ್ತಿಯಾಗಿದೆ.
ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ, ವ್ಯಾಪ್ತಿ ಕೂಡ ದೊಡ್ಡದಾಗಿದೆ, ಮುಖ್ಯಾಧಿಕಾರಿಗಳು ಹಾಗೂ ಸದಸ್ಯರು ಕೇವಲ ಕಚೇರಿಯಲ್ಲಿ ಕುಳಿತು ಸಮಯವನ್ನು ವ್ಯರ್ಥ ಮಾಡದೆ ಕನಿಷ್ಟ ಸಮಾಜ ಮುಖಿ ಕಾರ್ಯಗಳನ್ನು ನಿರ್ವಹಿಸಬೇಕಿದೆ ಎಂದು ಮುಕ್ತಾರ್ ಹೇಳಿದರು.