ಮಡಿಕೇರಿ, ನ. ೧೨: ಕಟ್ಟಡ ನಿರ್ಮಾಣ ಸಂದರ್ಭ ಬರೆಯಿಂದ ಮಣ್ಣು ಕೊರೆದ ಪರಿಣಾಮ ನಗರದ ರಾಜಾಸೀಟ್ ಉದ್ಯಾನವನ ಎದುರಿನ ರಸ್ತೆಗೆ ಹಾನಿ ಸಂಭವಿಸಿದ್ದು, ಅಪಾಯದ ಮುನ್ಸೂಚನೆ ಕಂಡುಬರುತ್ತಿದೆ. ಈ ಹಿನ್ನೆಲೆ ನಗರಸಭಾ ಪೌರಾಯುಕ್ತ ರಮೇಶ್ ಸ್ಥಳ ಪರಿಶೀಲನೆ ನಡೆಸಿದರು.
ಇಲ್ಲಿನ ರಾಜಾಸೀಟ್ ಬಳಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಬರೆಯ ಮಣ್ಣನ್ನು ಕೊರೆದ ಪರಿಣಾಮ ಮಣ್ಣು ಜಾರಿ ರಸ್ತೆಗೂ ಹಾನಿಯಾಗಿದೆ. ಇದರಿಂದ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಸಲಾಗಿದೆ.
ಈ ಕುರಿತು ನಗರಸಭೆಗೆ ದೂರು ಬಂದ ಹಿನ್ನೆಲೆ ತಾ. ೧೧ ರಂದು ಅನಧಿಕೃತವಾಗಿ ಮಣ್ಣನ್ನು ಕೊರೆದ ಕುರಿತು ನೋಟಿಸ್ ಜಾರಿಗೊಳಿಸಿದೆ. ನಗರಸಭೆಯ ಪೂರ್ವಾನುಮತಿ ಪಡೆಯದೆ ಅನಧಿಕೃತ ಮಣ್ಣನ್ನು ಕೊರೆದಿರುವುದರಿಂದ ರಸ್ತೆಗೆ ಹಾನಿ ಸಂಭವಿಸಿದ್ದು, ಈ ಕೂಡಲೇ ಸ್ವಂತ ಖರ್ಚಿನಿಂದ ತಡೆಗೋಡೆ ನಿರ್ಮಿಸಿ ಲಿಖಿತ ವರದಿ ಸಲ್ಲಿಸಲು ನೋಟಿಸ್‌ನಲ್ಲಿ ಪೌರಾಯುಕ್ತ ರಮೇಶ್ ತಿಳಿಸಿದ್ದರು. ಆದರೂ ಕೆಲಸ ಮುಂದುವರೆಸಿರುವ ಕುರಿತು ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲಸಕ್ಕೆ ಬಳಸುತ್ತಿದ್ದ ಕೆಲವೊಂದು ಪರಿಕರಗಳನ್ನು ವಶಕ್ಕೆ ಪಡೆದುಕೊಂಡು ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಅವರು, ಕಟ್ಟಡ ನಿರ್ಮಾಣಕ್ಕೆ ಬರೆಯನ್ನು ಕೊರೆಯಲಾಗಿದೆ. ಇದರಿಂದ ಮಣ್ಣು ಜಾರಿ ರಸ್ತೆಗೆ ಹಾನಿಯುಂಟಾಗಿದೆ. ಈ ರಸ್ತೆಯಲ್ಲಿ ಹೆಚ್ಚಿನ ಜನ-ವಾಹನ ಸಂಚಾರ ಇರುವ ಹಿನ್ನೆಲೆ ಮುಂಜಾಗ್ರತೆ ವಹಿಸಲಾಗಿದೆ. ತಡೆಗೋಡೆ ನಿರ್ಮಿಸಿ, ರಸ್ತೆ ಸರಿಯಾದ ನಂತರ ಕಾಮಗಾರಿ ಮುಂದುವರೆಸಲು ಅವಕಾಶ ನೀಡಲಾಗುವುದು. ರಸ್ತೆಗೆ ನಿಗದಿಪಡಿಸಿರುವ ಜಾಗವನ್ನು ಬಿಟ್ಟು ಕೆಲಸವನ್ನು ಮಾಡಬೇಕು ಎಂದು ತಾಕೀತು ಮಾಡಿದರು. ಈ ಸಂದರ್ಭ ನಗರಸಭಾ ಕಂದಾಯಾಧಿಕಾರಿ ತಾಹೀರ್ ಸೇರಿದಂತೆ ಇನ್ನಿತರರು ಹಾಜರಿದ್ದರು.