ಮಡಿಕೇರಿ, ನ. ೧೩: ಅಕ್ಷರ ದಾಸೋಹ ನೌಕರರ ಮಡಿಕೇರಿ ತಾಲೂಕು ಮಟ್ಟದ ಸಮಾವೇಶ ನಗರದ ಚೇಂಬರ್ ಆಫ್ ಕಾಮರ್ಸ್ನ ಸಭಾಂಗಣದಲ್ಲಿ ನಡೆಯಿತು.

ಅಕ್ಷರ ದಾಸೋಹ ಮಡಿಕೇರಿ ತಾಲೂಕು ಅಧ್ಯಕ್ಷೆ ಸಿ.ಕೆ.ಲಲಿತ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ನೌಕರರ ರಾಜ್ಯ ಖಜಾಂಚಿ ಮಹದೇವಮ್ಮ ಮಾತನಾಡಿ, ಅಕ್ಷರ ದಾಸೋಹ ನೌಕರರು ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರ ಕಾರ್ಮಿಕರ ಮೇಲೆ ತೋರುತ್ತಿರುವ ನಿರ್ಲಕ್ಷö್ಯತೆ, ವೇತನದ ಸಮಸ್ಯೆ, ಹೆಚ್ಚಿನ ಒತ್ತಡ ಕೆಲಸಗಳು, ಕನಿಷ್ಠ ವೇತನದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಅಕ್ಷರ ದಾಸೋಹ ನೌಕರರನ್ನು ಅತ್ಯಂತ ಕಡಿಮೆ ವೇತನದಲ್ಲಿ ದುಡಿಸುತ್ತಿರುವುದು, ಇಂದಿನ ಬೆಲೆ ಏರಿಕೆಯಿಂದ ಕಾರ್ಮಿಕರ ಬದುಕು ಅತ್ಯಂತ ಕಷ್ಟಕರವಾಗಿರುವ ದಿನಗಳಲ್ಲಿ ಕಡಿಮೆ ವೇತನ ಪಡೆದುಕೊಂಡು ಅತೀ ಹೆಚ್ಚು ಕೆಲಸ ಮಾಡಿಸಿಕೊಂಡು ಅಕ್ಷರ ದಾಸೋಹ ನೌಕರರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು. ಸರ್ಕಾರದ ನೀತಿಗಳು, ಹೊಸ ಕಾರ್ಮಿಕ ನೀತಿಯಿಂದಾಗಿ ಇಂದು ಕಾರ್ಮಿಕರು ತತ್ತರಿಸುತ್ತಿದ್ದಾರೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮುಖಾಂತರ ಕಾರ್ಮಿಕರಿಗೆ ದೊಡ್ಡ ಮಟ್ಟದ ಅನ್ಯಾಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಕೂಡ ಅಸಂಘಟಿತ ರಂಗದ ಬಗ್ಗೆ ಯಾವುದೇ ರೀತಿಯ ಚಿಂತನೆಯಿಲ್ಲದೆ ಆಡಳಿತ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಿಐಟಿ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಮಡಿಕೇರಿ ತಾಲೂಕು ಕಾರ್ಯದರ್ಶಿ ಹೆಚ್.ಟಿ. ಇಂದಿರಾ, ಖಜಾಂಚಿ ಹೆಚ್.ಎಸ್. ಪ್ರವೀಣ ಹಾಜರಿದ್ದರು.

ನೂತನ ಸಮಿತಿ ರಚನೆ : ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ನೌಕರರ ನೂತನ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಸಿ.ಕೆ. ಲಲಿತಾ, ಕಾರ್ಯದರ್ಶಿಯಾಗಿ ಹೆಚ್.ಡಿ. ಇಂದಿರಾ, ಖಜಾಂಚಿಯಾಗಿ ಹೆಚ್.ಎಸ್. ಪ್ರಮಿಳಾ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ನಗೀನ, ಕವಿತ, ಉಪಾಧ್ಯಕ್ಷರಾಗಿ ಲೀಲಾವತಿ, ಭವಾನಿ ಸೇರಿದಂತೆ ೨೧ ಮಂದಿಯ ಸಮಿತಿಯನ್ನು ರಚನೆ ಮಾಡಲಾಯಿತು. ಡಿ.೩ರ ದೆಹಲಿ ಚಲೋ ಕಾರ್ಯಕ್ರಮಕ್ಕೆ ಮಡಿಕೇರಿ ತಾಲೂಕಿನಿಂದ ಭಾಗವಹಿಸುವ ತೀರ್ಮಾನ ಕೈಗೊಳ್ಳಲಾಯಿತು. ಸಮಾವೇಶದಲ್ಲಿ ಮಾಜಿ ಅಧ್ಯಕ್ಷೆ ಅನಿತಾ ಅವರಿಗೆ ಬೀಳ್ಕೊಡುಗೆ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು.