ಮರಗೋಡು, ನ. ೧೩ : ಕಾವೇರಿ ರಿವರ್ ರ‍್ಯಾಫ್ಟಿಂಗ್ ನೌಕರರ ಸಂಘದ ವತಿಯಿಂದ ೨ನೇ ವರ್ಷದ ಜಲಕ್ರೀಡೆ ಇತ್ತೀಚೆಗೆ ದುಬಾರೆಯಲ್ಲಿ ನಡೆಯಿತು. ವಿವಿಧ ಕ್ರೀಡೆಗಳು ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿತು. ನದಿಯ ನೀರಿನಲ್ಲಿ ನಡೆದ ಟ್ರಿಪ್ಲಿಂಗ್ ಸ್ಪರ್ಧೆ ರೋಚಕವಾಗಿತ್ತು. ದೋಣಿಯನ್ನು ನೀರಿನಲ್ಲಿ ಚಲಾಯಿಸಿ ನೀರಿನೊಳಕ್ಕೆ ಧುಮುಕಿ ಮತ್ತೆ ಮೇಲೇರಿ ಗುರಿ ತಲುಪುವ ಈ ಕ್ರೀಡೆ ಸಾಹಸಭರಿತವಾಗಿತ್ತು.

ಈಜು ಸ್ಪರ್ಧೆಯಲ್ಲಿ ೨೦ ಕ್ಕೂ ಹೆಚ್ಚು ಈಜುಗಾರರು ಭಾಗವಹಿಸಿದ್ದರು. ಪುನೀತ್ , ಸತೀಶ್ ಹಾಗೂ ಪ್ರತಾಪ್ ಕ್ರಮವಾಗಿ ಪ್ರಥಮ ೩ ಸ್ಥಾನಗಳನ್ನು ಪಡೆದುಕೊಂಡರು. ಮಹಿಳೆಯರ ಪಾಸಿಂಗ್ ದಿ ಬಾಲ್ ಕಾರ್ಯಕ್ರಮದಲ್ಲಿ ಬಿಂದು ನಂಜರಾಯಪಟ್ಟಣ ಪ್ರಥಮ ಹಾಗೂ ಪ್ರತಿಭಾ ನಂಜರಾಯಪಟ್ಟಣ ದ್ವಿತೀಯ ಸ್ಥಾನ ಗಳಿಸಿದರು. ನದಿ ನೀರಿನಲ್ಲಿ ನಡೆದ ಪುರುಷರ ಹಗ್ಗಜಗ್ಗಾಟದಲ್ಲಿ ೧೬ ತಂಡಗಳು ಭಾಗವಹಿಸಿದ್ದವು. ಕಾರ್ಗಿಲ್ ಬಾಯ್ಸ್ ಪ್ರಥಮ ಸ್ಥಾನ ಪಡೆದರೆ, ವೈಲ್ಡ್ ಕ್ಯಾಟ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳಾ ವಿಭಾಗದ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಬಲಮುರಿ ಗ್ರಾಮದ ಮಹದೇವ ಸ್ಪೋಟ್ಸ್ ತಂಡ ಪಡೆದುಕೊಂಡಿತು. ಜಿಲ್ಲೆಯಾದ್ಯಂತ ಹಾಗೂ ಹೊರಜಿಲ್ಲೆಯಿಂದಲೂ ಕ್ರೀಡಾಪಟುಗಳು ಭಾಗವಹಿಸಿದ್ದರು.

ಕ್ರೀಡಾಕೂಟಕ್ಕೆ ನಂಜರಾಯಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ರ‍್ಯಾಫ್ಟಿಂಗ್ ಮಾಲೀಕರ ಸಂಘದ ಅಧ್ಯಕ್ಷ ವಿಜು ಚಂಗಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ, ಪಾಲ್ಘುಣಿ ಗ್ರೂಪ್ಸ್ ಮಾಲೀಕರಾದ ಐಮಂಡ ಪುಷ್ಪಾವತಿ ಹಾಗೂ ಪ್ರಶಸ್ತಿ ದಾನಿಗಳಾದ ಐಮಂಡ ಸಿ. ಲವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿ.ಎಲ್. ವಿಶ್ವ ಅವರು, ಜಲಕ್ರೀಡೋತ್ಸವ ಉತ್ತಮ ಪ್ರಯೋಗವಾಗಿದ್ದು, ಇನ್ನು ಹೆಚ್ಚಿನ ಪ್ರಾಮುಖ್ಯತೆ ಪಡೆಯಲು ಕ್ರೀಡಾಭಿಮಾನಗಳ ಸಹಕಾರದಿಂದ ಪ್ರಯತ್ನಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ದುಬಾರೆ ವನಪಾಲಕ ರಂಜನ್, ಪಂಚಾಯಿತಿ ಸದಸ್ಯೆ ಗಿರಿಜಮ್ಮ, ಶಿಕ್ಷಕ ನಾಗರಾಜು ಎಸ್., ಕಾಫಿ ಬೆಳೆಗಾರ ಮೋಹನ್ ಕುಮಾರ್, ದುಬಾರೆ ಇನ್ ಮಾಲೀಕ ರತೀಶ್ ಹಾಗೂ ಇತರರು ಪಾಲ್ಗೊಂಡಿದ್ದರು