ಮಡಿಕೇರಿ, ನ. ೧೩: ಪ್ರತಿಭಟನೆ ನೆಪದಲ್ಲಿ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ತೆಕ್ಕಡೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರಾದ ತೆಕ್ಕಡೆ ಸುಗು ಗಣಪತಿ ಹಾಗೂ ದಂಬೆಕೋಡಿ ಸುಬ್ರಮಣಿ, ಕುಂಬಳದಾಳು ಗ್ರಾಮದ ತೆಕ್ಕಡೆ ಸೋಮಣ್ಣ ಎಂಬವರ ಜಾಗ ಹಾಗೂ ತೆಕ್ಕಡೆ ಕುಟುಂಬಕ್ಕೆ ಸೇರಿದ ಜಾಗದಲ್ಲಿ ಹೊದ್ದೂರು ಗ್ರಾ.ಪಂ. ಸದಸ್ಯ ಮೊಣ್ಣಪ್ಪ ಅವರ ನೇತೃತ್ವದಲ್ಲಿ ಬಹುಜನ ಕಾರ್ಮಿಕ ಸಂಘಟನೆ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಪ್ರತಿಭಟನೆ ನಡೆಸುತ್ತಿರುವ ಜಾಗ ಸೋಮಣ್ಣ ಹಾಗೂ ತೆಕ್ಕಡೆ ಕುಟುಂಬಕ್ಕಾಗಿ ಸೇರಿದೆ. ೧೯೯೪-೯೫ರಲ್ಲಿ ರಸ್ತೆ ನಿರ್ಮಾಣಕ್ಕಾಗಿ ಸೋಮಣ್ಣ ಅವರು ಕೃಷಿ ಮಾಡುತ್ತಿದ್ದ ಸರ್ವೆ ನಂಬರ್ ೪೮/೧ರಲ್ಲಿದ್ದ ೧.೧೦ ಎಕರೆ ಜಾಗ ನೀಡಿದ್ದರು. ಇದಕ್ಕೆ ಪರ್ಯಾಯವಾಗಿ ಸರ್ವೆ ನಂಬರ್ ೪೯/೩ರಲ್ಲಿ ೨.೬೮ ಎಕರೆ ಜಾಗವನ್ನು ನೀಡಲಾಗಿತ್ತು. ತಾಂತ್ರಿಕ ಕಾರಣದಿಂದ ಇದುವರೆಗೂ ಇದರ ಆರ್.ಟಿ.ಸಿ. ಲಭ್ಯವಾಗಿರುವುದಿಲ್ಲ. ರಸ್ತೆಗೆ ನೀಡಿದ್ದ ಜಾಗದಲ್ಲಿ ಇದೀಗ ರಸ್ತೆ ನಿರ್ಮಾಣವಾಗಿ ಸಂಚಾರ ಸುಲಭವಾಗಿದೆ. ಗ್ರಾಮಸ್ಥರು ಹಾಗೂ ಅಧಿಕಾರಿಗಳ ಒಪ್ಪಿಗೆ ಮೇಲೆ ಪರ್ಯಾಯವಾಗಿ ದೊರೆತ ಜಾಗದಲ್ಲಿ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಸೋಮಣ್ಣ ಅವರ ಜಾಗ ಸೇರಿದಂತೆ ತೆಕ್ಕಡೆ ಕುಟುಂಬಕ್ಕೆ ಸೇರಿದ ಜಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಒತ್ತಾಯಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅಪರಿಚಿತರು ಇರುವುದರಿಂದ ಜಾಗಕ್ಕೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ನೈಸರ್ಗಿಕವಾಗಿ ಬೆಳೆದ ಕಾಡು, ಮರ ಕಡಿದು ನಷ್ಟ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಸೋಮಣ್ಣ ಅವರಿಗೆ ನ್ಯಾಯಕೊಡಿಸಬೇಕೆಂದು ಆಗ್ರಹಿಸಿದರು. ತೆಕ್ಕಡೆ ಮಹೇಶ್ ಸೋಮಣ್ಣ, ತೆಕ್ಕಡೆ ಸೋಮಣ್ಣ ಮಾತನಾಡಿ, ಈ ಜಾಗದ ಆರ್.ಟಿ.ಸಿ. ಪಡೆಯಲು ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಸಹಾಯವಾಗಲಿ ಎಂದು ನಾವು ಜಾಗ ನೀಡಿದ್ದೆವು. ಆದರೆ, ಇದೀಗ ಅದು ನಮಗೆ ತಿರುಗುಬಾಣವಾಗಿ ಚುಚ್ಚುತ್ತಿದೆ ಎಂದು ನೋವು ತೋಡಿಕೊಂಡ ಅವರು, ಏಕಾಏಕಿ ಪ್ರತಿಭಟನೆ ಮಾಡಿರುವುದು ನಮ್ಮ ಕುಟುಂಬಕ್ಕೆ ಆಘಾತ ತಂದಿದೆ. ಈ ಸಂಬAಧ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್‌ಗೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ನಿವಾಸಿಗಳಾದ ದಂಬೆಕೋಡಿ ರಾಜೇಶ್, ಕುಲ್ಲಚನ ದಿನೇಶ್ ಹಾಜರಿದ್ದರು.