ಸೋಮವಾರಪೇಟೆ, ನ. ೧೩: ತಾಲೂಕಿನ ಮಾದಾಪುರದಲ್ಲಿ ಮನೆಯ ಮುಂದೆ ಬೈಕ್ ನಿಲ್ಲಿಸಿದ್ದಕ್ಕೆ ಸಿಟ್ಟುಗೊಂಡ ಯುವಕನೋರ್ವ ಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿಕೃತ ಘಟನೆ ನಡೆದಿದೆ.

ಮಾದಾಪುರ ವಲಯ ಕಾಂಗ್ರೆಸ್ ವತಿಯಿಂದ ಶಾಸಕ ಡಾ. ಮಂತರ್ ಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಮಾದಾಪುರದ ಶಾದಿ ಮಹಲ್‌ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತ ಬಿ.ಎಸ್. ಜಯಾನಂದ ಎಂಬವರು, ಮಾದಾಪುರ ನಿವಾಸಿ ಪೃಥ್ವಿ ಎಂಬವರ ಮನೆಯ ಮುಂಭಾಗದ ಗೇಟ್ ಬದಿಯಲ್ಲಿ ತಮ್ಮ ಜುಪಿಟರ್ ಬೈಕ್ ಅನ್ನು ನಿಲ್ಲಿಸಿದ್ದರು.

ಇದರಿಂದ ಕೋಪಗೊಂಡ ಪೃಥ್ವಿ, ಮನೆಯೊಳಗಿನಿಂದ ಪೆಟ್ರೋಲ್ ತಂದು ಬೈಕ್‌ಗೆ ಸುರಿದು ಏಕಾಏಕಿ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಬೈಕ್‌ನ ಸೀಟ್, ಮುಂಭಾಗ ಸೇರಿದಂತೆ ಭಾಗಶಃ ಸುಟ್ಟುಹೋಗಿದೆ. ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಕೆಲ ಮಂದಿ ತಕ್ಷಣ ನೀರು ಸುರಿದು ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಬೈಕ್‌ಗೆ ತೀವ್ರ ತರದ ಹಾನಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪೃಥ್ವಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.

ಕಣ್ಣೆದುರೇ ಉರಿದ ಹೊಸ ಬೈಕ್: ಕೂಲಿ ಕೆಲಸ ಮಾಡಿಕೊಂಡಿರುವ ಜಯಾನಂದ ಅವರು ತಮ್ಮ ಹಳೆಯ ಬೈಕ್ ಅನ್ನು ಕೊಟ್ಟು ಹೊಸದಾಗಿ ರೂ. ೫೦ ಸಾವಿರ ನೀಡಿ ಕಳೆದ ೩ ತಿಂಗಳ ಹಿಂದೆಯಷ್ಟೇ ಖರೀದಿಸಿದ್ದರು. ಬೈಕ್ ಮೇಲೆ ೮೦ ಸಾವಿರ ಸಾಲವನ್ನು ಮಾಡಿದ್ದು, ಪ್ರತಿ ತಿಂಗಳು ೫ ಸಾವಿರ ಕಂತು ಪಾವತಿಸಬೇಕಿದೆ. ಈವರೆಗೆ ಮೂರು ಕಂತುಗಳನ್ನಷ್ಟೇ ಪಾವತಿಸಿದ್ದು, ಇನ್ನೂ ೬೫ ಸಾವಿರ ಸಾಲವಿದೆ.

ಈ ನಡುವೆ ಮೂರು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಬೂತ್ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಇಂದು ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಲೆಂದು ಬಂದಿದ್ದರು. ಈ ಸಂದರ್ಭ ಶಾದಿ ಮಹಲ್ ಎದುರಿಗಿರುವ ಪೃಥ್ವಿ ಅವರ ಮನೆಯ ಗೇಟ್ ಬಳಿಯಲ್ಲಿ ಬೈಕ್ ನಿಲ್ಲಿಸಿದ್ದರು. ಮನೆಗೆ ಪ್ರವೇಶಿಸುವ ಗೇಟ್ ಬಳಿಯಲ್ಲಿ ಬೈಕ್ ನಿಲ್ಲಿಸಿದ್ದರಿಂದ ಕೋಪಗೊಂಡ ಪೃಥ್ವಿ, ಬೈಕ್‌ಗೆ ಬೆಂಕಿ ಹಚ್ಚಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಇನ್ಸ್ಪೆಕ್ಟರ್ ಮುದ್ದು ಮಹಾದೇವ ಅವರು ತನಿಖೆ ಕೈಗೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.