ಸೋಮವಾರಪೇಟೆ/ಶನಿವಾರಸಂತೆ, ನ.೧೩: ಕೃಷಿ ಸಂಬAಧಿತ ಸಾಲ ಬಾಧೆಯಿಂದ ಮನನೊಂದು ಹೊಸಗುತ್ತಿ ಗ್ರಾಮದ ರೈತರೋರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಹೊಸಗುತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕೃಷಿಕ ಮಜೀದ್ (೪೫) ಎಂಬವರು ತಮ್ಮ ಮನೆಯ ಕೊಠಡಿಯಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಿಗ್ಗೆ ೭.೨೦ರ ಸುಮಾರಿಗೆ ತಾಯಿ, ಪತ್ನಿ, ಮಗ ಹಾಗೂ ಮಗಳು ಮನೆಯೊಳಗೆ ಇದ್ದ ಸಂದರ್ಭವೇ ಕೊಠಡಿಗೆ ತೆರಳಿ ಒಳಭಾಗದಿಂದ ಬಾಗಿಲು ಭದ್ರಪಡಿಸಿಕೊಂಡ ಮಜೀದ್ ಅವರು, ತಮಗೆ ಸೇರಿದ ಡಬಲ್ ಬ್ಯಾರಲ್ ಬಂದೂಕಿನಿAದ ಎದೆ ಭಾಗಕ್ಕೆ ಗುರಿಯಿಟ್ಟುಕೊಂಡು ಗುಂಡು ಹಾರಿಸಿದ್ದಾರೆ. ಪರಿಣಾಮ ಎದೆ ಹಾಗೂ ತೋಳಿಗೆ ಗುಂಡು ತಗುಲಿದೆ.

ಕೊಠಡಿಯೊಳಗೆ ಗುಂಡಿನ ಶಬ್ದ ಕೇಳಿಬಂದ ತಕ್ಷಣ ಗಾಬರಿಗೊಂಡ ಮನೆ ಮಂದಿ ಜೋರಾಗಿ ಬೊಬ್ಬೆ ಹೊಡೆದಿದ್ದು, ಪಕ್ಕದ ಮನೆಯಲ್ಲಿದ್ದ ಸಹೋದರ ಅಬ್ಬಾಸ್ ಅವರು ತಕ್ಷಣ ಓಡಿಬಂದು ಕೊಠಡಿಯ ಬಾಗಿಲು ಒಡೆದಿದ್ದಾರೆ. ಅಷ್ಟರಲ್ಲೇ ರಕ್ತದ ಮಡುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮಜೀದ್ ಅವರನ್ನು ತಕ್ಷಣ ಕಾರಿನಲ್ಲಿ ಅರಕಲಗೂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.