ಪ್ರತಿವರ್ಷ ನವೆಂಬರ್ ೧೪ರಂದು ಭಾರತದ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಮಕ್ಕಳ ಸಂತೋಷ, ಮುಗ್ಧತೆ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುವ ದಿನವಿದು. ಹೆಚ್ಚಿನ ಶಾಲೆಗಳಲ್ಲಿ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಚಾಚಾ ನೆಹರು ಎಂದರೆ ಮಕ್ಕಳಿಗೆ ಪಂಚಪ್ರಾಣ. ಅವರು ೧೮೮೯ನೇ ಇಸವಿ ನವೆಂಬರ್ ೧೪ರಂದು ಮೋತಿಲಾಲ್ ನೆಹರು ಹಾಗೂ ಸ್ವರೂಪ ರಾಣಿಯ ಮಗನಾಗಿ ಅಲಹಾಬಾದ್‌ನಲ್ಲಿ ಜನ್ಮ ತಾಳಿದರು. ಬಾಲ್ಯದಲ್ಲಿ ಕುದುರೆಸವಾರಿ, ಪುರಾಣಕತೆ, ರಾಮಾಯಣ, ಮಹಾಭಾರತದ ಕಥೆ ಆಲಿಸುವುದು ತುಂಬಾ ಇಷ್ಟಪಡುತ್ತಿದ್ದರಂತೆ. ಫರ್ಡಿನೆಂಡ್ ಬ್ರುಕ್ಸ್ ಎಂಬ ಉಪಾಧ್ಯಾಯರ ಪ್ರಭಾವದಿಂದ ವಿಜ್ಞಾನ ಹಾಗೂ ವಿಭಿನ್ನ ಧರ್ಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದಿದ್ದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿನ ಹ್ಯಾರೊ ಶಾಲೆ ಹಾಗೂ ನ್ಯಾಯಶಾಸ್ತçವನ್ನು ೨ ವರ್ಷ ಓದಿ ‘ಬಾರ್ ಆ್ಯಟ್‌ಲಾ ಎಂದರೆ ವಕೀಲನಾಗುವ ಅರ್ಹತೆಯನ್ನು ಪಡೆದುಕೊಂಡರು. ೧೯೧೨ರಲ್ಲಿ ಭಾರತಕ್ಕೆ ಬಂದು ಗಾಂಧೀಜಿಯವರ ಜೊತೆ ಸ್ವಾತಂತ್ರö್ಯ ಸತ್ಯಾಗ್ರಹದ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹಲವಾರು ಬಾರಿ ಜೈಲಿನಲ್ಲಿಯೂ ಬಂದಿಯಾದರು. ‘ಆ್ಯನಿಮಲ್ಸ್ ಇನ್ ಪ್ರಿಸನ್’, ‘ಡಿಸ್ಕವರಿ ಆಫ್ ಇಂಡಿಯಾ’ ಹೀಗೆ ಹಲವಾರು ಒಳ್ಳೆಯ ಪುಸ್ತಕಗಳನ್ನು ಬರೆದರು. ಮಗಳಾದ ಇಂದಿರಾಳಿಗೆ ಪತ್ರ ಬರೆಯುವ ಅಭ್ಯಾಸ ಅವರಿಗಿತ್ತು. ಹೀಗೆ ದೇಶಕ್ಕಾಗಿ ಹೋರಾಡಿ ಕೊನೆಗೂ ಸ್ವಾತಂತ್ರö್ಯ ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸತತ ೧೭ ವರ್ಷಗಳ ಕಾಲ ದೇಶವನ್ನು ಮುನ್ನಡೆಸಿಕೊಂಡು, ಜನರ ಸೇವೆ ಮಾಡಿ ಸೈ ಎನಿಸಿಕೊಂಡರು. ಹಲವಾರು ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದರು. ಮಕ್ಕಳೆಂದರೆ ನೆಹರುರವರಿಗೆ ಅಚ್ಚುಮೆಚ್ಚು. ಗುಲಾಬಿ ಹೂ ಅವರಿಗೆ ತುಂಬಾ ಇಷ್ಟ. ತನ್ನ ನಿಲುವಂಗಿಯಲ್ಲಿ ಯಾವಾಗಲೂ ಗುಲಾಬಿ ಸಿಕ್ಕಿಸಿಕೊಳ್ಳುತ್ತಿದ್ದರು. ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯವಾಗಿತ್ತು. ‘ನಾಳೆ ನಿಮ್ಮದು’ ಎಂದು ಮಕ್ಕಳನ್ನು ಹುರಿದುಂಬಿಸುತ್ತಿದ್ದರು. ‘ಇಂದಿನ ಮಕ್ಕಳೆ ನಾಳೆಯ ಭವಿಷ್ಯ’ ಎಂಬ ವಾಕ್ಯದಲ್ಲಿ ನಂಬಿಕೆ ಇಟ್ಟಿದ್ದರು. ದೇಶಕ್ಕಾಗಿ ತನ್ನ ವೈಭವಯುತ ಜೀವನವನ್ನೇ ತ್ಯಾಗ ಮಾಡಿ, ಜೀವನದ ಅರ್ಧಭಾಗವನ್ನು ಜೈಲಿನಲ್ಲಿ ಕಳೆದು ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಇಂತಹ ದೇಶಭಕ್ತನನ್ನು ನಾವು ಯಾವಾಗಲೂ ಸ್ಮರಿಸಬೇಕು. ಅವರ ಒಳ್ಳೆಯ ಗುಣಗಳನ್ನು ನಮ್ಮಲ್ಲಿ ರೂಢಿಸಿಕೊಂಡು ನಾವು ದೇಶಕ್ಕಾಗಿ ನಮ್ಮ ಕೈಲಾದ ಸೇವೆಯನ್ನು ಮಾಡುವ ಪಣತೊಡೋಣ. ಸರ್ಕಾರ ಇಂದು ದೇಶದ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣ, ಬಿಸಿ ಊಟ ಹಾಗೂ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ದಾರಿಯಲ್ಲಿ ಹೆಜ್ಜೆಯನ್ನು ಹಾಕಬೇಕು ಹಾಗೂ ದೇಶದ ಏಳಿಗೆಗೆ ದುಡಿಯಬೇಕೆಂಬುದೇ ಎಲ್ಲರ ಆಶಯ. ದೇಶದ ಅಭಿವೃದ್ಧಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಅಲ್ಲವೇ...?

-ಸಣ್ಣುವಂಡ ಅಕ್ಕಮ್ಮ ಸನ್ನಿ,

ಹಳ್ಳಿಗಟ್ಟು ಗ್ರಾಮ, ಪೊನ್ನಂಪೇಟೆ.