ಕುಶಾಲನಗರ, ನ. ೧೩; ಕುಶಾಲನಗರ ಸೇರಿದಂತೆ ನೆರೆಯ ಗಡಿ ಜಿಲ್ಲೆಗಳ ಭಾಗಗಳಲ್ಲಿ ಕಲಬೆರಕೆ ಜೇನು ಮಾರಾಟ ಮಾಡುತ್ತಿದ್ದ ಅಂತರ ರಾಜ್ಯ ತಂಡದ ಜಾಲವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಈ ಸಂಬAಧ ಆಹಾರ ಇಲಾಖೆ ಅಧಿಕಾರಿಗಳು ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಹಲವು ವ್ಯಕ್ತಿಗಳನ್ನು ಮತ್ತು ಕೆಲವು ಆಟೋ ರಿಕ್ಷಾ ಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಜಿಲ್ಲೆಯ ಕುಶಾಲನಗರ, ತೊರೆನೂರು, ನೆರೆಯ ಗಡಿಭಾಗದ ಕೊಣನೂರು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡಲು ಬಳಸುತ್ತಿದ್ದ ಸುಮಾರು ೧೦೦ ಲೀಟರ್ಗಿಂತಲೂ ಅಧಿಕ ಜೇನು ತುಪ್ಪವನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಅನಿಲ್ ಧವನ್ ಮತ್ತು ಸಿಬ್ಬಂದಿಗಳು ಕುಶಾಲನಗರ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಕುಶಾಲನಗರ ಬೈಚನಹಳ್ಳಿ ಬಳಿ, ತೊರೆನೂರು ಮತ್ತು ನೆರೆಯ ಗಡಿಭಾಗದ ಹಾಸನ ಜಿಲ್ಲೆಯ ಕೊಣನೂರು ಬಳಿ ದಾಳಿ ಮಾಡಿದ್ದಾರೆ.
ಮೂಲತಃ ಬಿಹಾರ ರಾಜ್ಯದ ಹಲವು ಮಂದಿ ಬೆಂಗಳೂರಿನ ವಿಳಾಸದಲ್ಲಿ ನೆಲೆಸಿದ್ದು ಆಟೋಗಳ ಮೂಲಕ ಜಿಲ್ಲೆಗೆ ಆಗಮಿಸಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದು ರಸ್ತೆ ಬದಿಯಲ್ಲಿ ನಕಲಿ ಜೇನುತುಪ್ಪ ಮಾರಾಟ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ದುಪ್ಪಟ್ಟು ದರದಲ್ಲಿ ನಕಲಿ ಜೇನು ಮಾರಾಟ ಮಾಡಿ ನಂತರ ಜಾಗ ಖಾಲಿ ಮಾಡುವ ಜಾಲ ಇದಾಗಿದ್ದು ಈ ಜೇನು ಸೇವಿಸಿದ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಈ ಸಂಬAಧ ಕುಶಾಲನಗರ ಬೈಚನಹಳ್ಳಿ ಬಳಿ ಕಲಬೆರಕೆ ಜೇನು ಮಾರಾಟ ಮಾಡುತ್ತಿದ್ದ ತಂಡದ ನಾಲ್ಕು ಮಂದಿ ಹಾಗೂ ಎರಡು ಆಟೋಗಳನ್ನು ವಶಪಡಿಸಿಕೊಂಡು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಕೈಗೊಳ್ಳಲಾಗಿದೆ. ಹಾಸನ ಜಿಲ್ಲೆಯ ರಾಮನಾಥಪುರ ಬಳಿ ಈ ಜಾಲದ ಸದಸ್ಯರು ಠಿಕಾಣಿ ಹೂಡಿದ್ದು ಅಲ್ಲಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಲಬೆರಕೆ ಜೇನುತುಪ್ಪ ಮಾರಾಟ ದಂಧೆಯಲ್ಲಿ ತೊಡಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ದೊರೆತ ಭಾರೀ ಪ್ರಮಾಣದ ಜೇನುತುಪ್ಪ ಪಶಪಡಿಸಿಕೊಂಡ ಪೊಲೀಸರು ಗುಣಮಟ್ಟ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಉಳಿದಂತೆ ಹೆಚ್ಚುವರಿ ದೊರೆತ ನೂರಾರು ಲೀಟರ್ ಪ್ರಮಾಣದ ಜೇನುತುಪ್ಪವನ್ನು ನಾಶಪಡಿಸಲಾಯಿತು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭ ತೊರೆನೂರು ಬಳಿ ಎರಡು ಆಟೋರಿಕ್ಷಾಗಳಲ್ಲಿ ಡ್ರಮ್ಗಳಲ್ಲಿ ತುಂಬಿ ಕೆಲವು ವ್ಯಕ್ತಿಗಳು ಸಾಗುತ್ತಿರುವ ವೇಳೆಗೆ ಅಧಿಕಾರಿ ಅನಿಲ್ ಧವನ್ ಅವರ ತಂಡ ಸದಸ್ಯರು ವಶಕ್ಕೆ ತೆಗೆದುಕೊಂಡು ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು ನೋಂದಣಿ ಸಂಖ್ಯೆ ಹೊಂದಿರುವ ಆಟೋರಿಕ್ಷಾವನ್ನು (ಕೆಎ೦೩ ಎನ್ಟಿ೬೪೦೧) ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು ವಿಚಾರಣೆ ಕೈಗೊಂಡಿದ್ದಾರೆ. ಉಳಿದಂತೆ ಆರೋಪಿಗಳ ಸಂಪೂರ್ಣ ಮಾಹಿತಿ ಕಲೆಹಾಕಿದ್ದು ಈ ವ್ಯಕ್ತಿಗಳು ಬಿಹಾರ ರಾಜ್ಯಕ್ಕೆ ಸೇರಿದವರಾಗಿದ್ದು ಬೆಂಗಳೂರಿನ ವಿಳಾಸದಲ್ಲಿ ಆಧಾರ್ ಕಾರ್ಡ್ ಹೊಂದಿರುವುದಾಗಿ ಮಾಹಿತಿ ಲಭಿಸಿದೆ.
ತೊರೆನೂರು ಬಳಿ ಆಟೋ ಒಂದರಲ್ಲಿ (ಕೆಎ೦೩ ಎನ್ಎಸ್೬೯೩೨) ೧೦೦ ಲೀಟರ್ ಗಿಂತ ಅಧಿಕ ಪ್ರಮಾಣದ ನಕಲಿ ಜೇನು ತುಪ್ಪ ಪತ್ತೆಯಾಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಾಹನಗಳನ್ನು ಹಸ್ತಾಂತರಿಸಲಾಗಿದೆ ಎಂದು ಅನಿಲ್ ಧವನ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಇದೊಂದು ಅಂತರರಾಜ್ಯ ಮಟ್ಟದ ನಕಲಿ ಜೇನು ಮಾರಾಟ ಜಾಲವಾಗಿರುವ ಸಾಧ್ಯತೆ ಇದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಇಂತಹ ನಕಲಿ ಜೇನುತುಪ್ಪ ಖರೀದಿಸುವ ಸಂದರ್ಭ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೇನುತುಪ್ಪದ ಗುಣಮಟ್ಟ ಪರಿಶೀಲನೆಗೆ ಸಂಬAಧಿಸಿದ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದು , ಕೆಲವೇ ದಿನಗಳಲ್ಲಿ ವರದಿ ಲಭಿಸಲಿದೆ ಎಂದು ಹೇಳಿದ್ದಾರೆ. ಇಂತಹ ಜಾಲದ ತಂಡದ ಸದಸ್ಯರನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದು ಧವನ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವಿಭಾಗದ ಅಧಿಕಾರಿ ಮಂಜುನಾಥ್, ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ಕುಶಾಲನಗರ ಅಪರಾಧ ಪತ್ತೆ ವಿಭಾಗದ ಠಾಣಾಧಿಕಾರಿ ಹೆಚ್.ಟಿ. ಗೀತಾ, ಸಹಾಯಕ ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
-ಚAದ್ರಮೋಹನ್