ಕಣಿವೆ, ನ. ೧೩: ಗ್ರಾಮ ಪಂಚಾಯಿತಿಯ ಕಸ ತುಂಬಿಸಿ ಸಾಗಿಸುವ ವಾಹನಗಳಿಗೆ ಪೆಟ್ರೋಲ್ ಬಂಕ್ ನಿಂದ ಸಾಲ ಪಡೆದು ಹಾಕಿಸಿದ ಡೀಸೆಲ್‌ನ ಬಾಕಿ ಹಣ ನೀಡದಿದ್ದಕ್ಕೆ ಪಂಚಾಯಿತಿಯ ಗ್ರಾಮಸಭೆಗೆ ಬಂದು ಅಂಗಲಾಚಿ ಬೇಡಿದ ಪ್ರಸಂಗ ಕೂಡಿಗೆ ಗ್ರಾಮಸಭೆಯಲ್ಲಿ ಬುಧವಾರ ಕಂಡು ಬಂತು.
ಪAಚಾಯಿತಿ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಹಲಗಪ್ಪ ಅವರ ಮಗಳು ಡೀಸೆಲ್ ಹಾಕಿಸಿದ ಲೆಕ್ಕದ ಪುಸ್ತಕದೊಂದಿಗೆ ಸಭೆಗೆ ಬಂದು ಬಾಕಿ ಹಣ ಚುಕ್ತಾ ಮಾಡಬೇಕೆಂದು ಪರಿ ಪರಿಯಾಗಿ ಬೇಡಿದರು.
ಈ ಹಿಂದಿನ ಪಿಡಿಓ ಅವರು ಹಾಕಿಸಿದ ಡೀಸೆಲ್ ಬಾಕಿ ಹಣವನ್ನು ನಾನು ಪಾವತಿಸಲು ಬರಲ್ಲ ಎಂದು ಈಗಿನ ಪಿಡಿಒ ಸತಾಯಿಸುತ್ತಿರುವ ಬಗ್ಗೆಯೂ ಪೆಟ್ರೋಲ್ ಬಂಕ್ ಮಾಲೀಕರು ಅಳಲು ತೋಡಿಕೊಂಡರು.
ಈ ವೇಳೆ ಸಭೆಯಲ್ಲಿದ್ದ ಕೆಲ ಸಾರ್ವಜನಿಕರು ಡೀಸೆಲ್ ಅನ್ನು ಪಂಚಾಯಿತಿಯ ಕಸ ತುಂಬುವ ವಾಹನಗಳು ಅಲ್ಲದೇ ಪಂಚಾಯಿತಿ ಪಿಡಿಓ ಹಾಗೂ ಸಿಬ್ಬಂದಿಗಳೂ ಕೂಡ ಅವರ ಖಾಸಗಿ ವಾಹನಗಳಿಗೆ ಹಾಕಿಸಿಕೊಂಡು ಪಂಚಾಯಿತಿ ಲೆಕ್ಕಕ್ಕೆ ಬರೆಸಿದ್ದಾರೆ.
ಬಾಕಿ ಹಣವನ್ನು ಪಡೆಯಲು ಬೇಡುವ ಪರಿಸ್ಥಿತಿ ಬೇಕಾ? ಪಂಚಾಯಿತಿ ಆಡಳಿತ ಮಂಡಳಿಗೆ ಕಣ್ಣು ಕಿವಿ ಇಲ್ವಾ ಎಂದು ತರಾಟೆಗೆ ತೆಗೆದುಕೊಂಡ ಬಳಿಕ, ಸಭಾಧ್ಯಕ್ಷ ಗಿರೀಶ್ ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಪಾವತಿಸುವುದಾಗಿ ಹೇಳಿದರು.
ಇನ್ನು ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆಯಲ್ಲಿ ಮದ್ಯದ ಅಂಗಡಿಯೊAದನ್ನು ಹೊಸದಾಗಿ ತೆರೆಯಲು ಸಾರ್ವಜನಿಕರ ವಿರೋಧ ಇದ್ದರೂ ಕೂಡ ಯಾವುದನ್ನೂ ಲೆಕ್ಕಿಸದೇ ಪಿಡಿಓ ಪರವಾನಗಿ ಕೊಟ್ಟಿದ್ದಾರೆ.
ಇದರಿಂದ ಗ್ರಾಮದ ಸ್ವಾಸ್ಥö್ಯ ಕದಡುತ್ತಿದೆ ಕೂಡಲೇ ಪರವಾನಗಿ ರದ್ದುಪಡಿಸಿ ಎಂದು ಗ್ರಾಮಸ್ಥರು ಸಭೆಯ ನೋಡಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪAಚಾಯಿತಿ ವ್ಯಾಪ್ತಿಯ ಹಾರಂಗಿ ನದಿ ದಂಡೆ ಹಾಗೂ ಗಿರಿಜನ ವಾಸಿಗಳು ಹೆಚ್ಚಾಗಿ ಇರುವ ಬ್ಯಾಡಗೊಟ್ಟ ಪ್ರದೇಶದಲ್ಲಿರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಉಪಾಧ್ಯಕ್ಷೆ ಜಯಶ್ರೀ, ನೋಡಲ್ ಅಧಿಕಾರಿಯಾಗಿ ಪಶುವೈದ್ಯ ನಾಗರಾಜು ಕಾರ್ಯನಿರ್ವಹಿಸಿದರು.
ಪಂಚಾಯಿತಿ ಪಿಡಿಓ ಗ್ರಾಮದ ಜನಸಾಮಾನ್ಯರ ಬವಣೆಗಳನ್ನು ನೀಗಿಸಲು ಮುಂದಾಗದೇ ಆಡಳಿತ ಮಂಡಳಿಯ ಸದಸ್ಯರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೋರಾಟಗಾರ ಅಣ್ಣಯ್ಯ ಪಿಡಿಓ ವಿರುದ್ಧ ಆರೋಪಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯದ ಶುಚಿತ್ವದ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದರು.
ಪಂಚಾಯಿತಿ ಪಿಡಿಓ ಮಂಜುಳಾ, ಸದಸ್ಯರಾದ ಟಿ.ಪಿ.ಹಮೀದ್, ಅನಂತು, ಶಿವಕುಮಾರ್, ರವಿ, ಜಯಶೀಲಾ, ರತ್ನಮ್ಮ, ಮಂಗಳಾ ಇತರರಿದ್ದರು.