ಹೆಚ್.ಜೆ. ರಾಕೇಶ್
ಮಡಿಕೇರಿ, ನ. ೧೩: ಬೆಳಕಿನ ಚಿತ್ತಾರದ ವೈಭವ, ನವರಾತ್ರಿ ಸಾಂಸ್ಕೃತಿಕ ಕಲರವ, ದಶಮಂಟಪ ಶೋಭಾಯಾತ್ರೆ.. ಹೀಗೆ ಹತ್ತುಹಲವು ಕಾರ್ಯಕ್ರಮದ ಮೂಲಕ ಜನರಿಗೆ ರಸದೌತಣ ನೀಡಿದ್ದ ದಸರಾ ಆಚರಣೆ ನಡೆದು ಒಂದು ತಿಂಗಳು ಕಳೆದರು ಇದುವರೆಗೂ ಅನುದಾನ ಜಿಲ್ಲಾಡಳಿತದ ಕೈ ಸೇರಿಲ್ಲ. ಪರಿಣಾಮ ಕಲಾವಿದರುಗಳು ಸಾಂಸ್ಕೃತಿಕ ಸಮಿತಿಯ ದುಂಬಾಲು ಬಿದ್ದಿದ್ದಾರೆ. ಉಪಸಮಿತಿಗಳು ಪೇಚಿಗೆ ಸಿಲುಕಿವೆ. ಮಂಟಪ ಸಮಿತಿಗಳು ಅನುದಾನಕ್ಕಾಗಿ ಎದುರು ನೋಡುತ್ತಿವೆ.
ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನಡೆದ ದಸರಾ ಉತ್ಸವ ಜನಮನಸೂರೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಎರಡು ಕಡೆಗಳಲ್ಲಿಯೂ ನಡೆದ ಉತ್ತಮ ಕಾರ್ಯಕ್ರಮಗಳು ಕಲಾರಸಿಕರಿಗೆ ಮುದ ನೀಡಿವೆ. ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಈ ಬಾರಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಡಿಕೇರಿ ದಸರಾ ಸಮಿತಿಯ ಮೂಲಕ, ಗೋಣಿಕೊಪ್ಪ ದಸರಾ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆದಿದ್ದು, ಅನುದಾನ ಖಾತೆಗೆ ಬಾರದೆ ಲೆಕ್ಕಾಚಾರಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ಅನುದಾನ ಬಿಡುಗಡೆಗೆ ಆದೇಶ
ಮಡಿಕೇರಿ ದಸರಾಕ್ಕೆ ರೂ. ೧.೫೦ ಕೋಟಿ, ಗೋಣಿಕೊಪ್ಪ ದಸರಾ ಆಚರಣೆಗೆ ರೂ. ೭೫ ಲಕ್ಷ ಅನುದಾನ ಬಿಡುಗಡೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಗೀತಾಬಾಯಿ ಆದೇಶ ಹೊರಡಿಸಿ ಹಲವು ದಿನಗಳು ಕಳೆದರೂ ಇದುವರೆಗೂ ಪ್ರಕ್ರಿಯೆಗಳು ತಾಂತ್ರಿಕ ಕಾರಣದಿಂದ ಯಶಸ್ವಿಯಾಗಿಲ್ಲ.
ಮಡಿಕೇರಿ ದಸರಾ ಉತ್ಸವಕ್ಕೆ ರೂ. ೧.೫೦ ಕೋಟಿ, ಗೋಣಿಕೊಪ್ಪ ದಸರಾಕ್ಕೆ ರೂ. ೭೫ ಲಕ್ಷ ಅನುದಾನ ಈ ಹಿಂದೆ ಘೋಷಣೆಯಾಗಿತ್ತು. ಆದರೆ, ಇದುವರೆಗೂ ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆಗೊಂಡಿಲ್ಲ. ಮೈಸೂರು ದಸರಾ ಮತ್ತು ರಾಜ್ಯೋತ್ಸವ ಪ್ರಶಸ್ತಿಯಡಿಯಲ್ಲಿ ಲಭ್ಯವಿದ್ದ ರೂ ೫.೮೯ ಕೋಟಿ ಹಾಗೂ ಹೆಚ್ಚುವರಿಯಾಗಿ ಒದಗಿಸಿದ್ದ ರೂ. ೧೯.೧೧ ಕೋಟಿ ಸೇರಿದಂತೆ ಒಟ್ಟು ರೂ. ೨೫ ಕೋಟಿ ಹಣವನ್ನು ಮೈಸೂರು ದಸರಾ ಆಚರಣೆ ವೆಚ್ಚಗಳಿಗಾಗಿ ಮೈಸೂರು ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಿರುವ ಅನುದಾನ ಮಿತಿಯಲ್ಲಿಯೇ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ನಿಗದಿಗೊಂಡಿದ್ದ ಅನುದಾನವನ್ನು ಮೈಸೂರು ಜಿಲ್ಲಾಧಿಕಾರಿಯಿಂದ ಕೊಡಗು ಜಿಲ್ಲಾಧಿಕಾರಿಗೆ ವರ್ಗಾಯಿಸಲು ಸರಕಾರ ಮಂಜೂರಾತಿ ನೀಡಿದೆ ಎಂದು ಆದೇಶದಲ್ಲಿ ಗೀತಾಬಾಯಿ ತಿಳಿಸಿದ್ದರು. ಆದರೆ, ತಾಂತ್ರಿಕ ಕಾರಣದಿಂದ ಇದು ಸಾಧ್ಯವಾಗದ ಹಿನ್ನೆಲೆ ಇದುವರೆಗೂ ಖಾತೆಗೆ ಹಣ ಬಂದಿಲ್ಲ ಎಂದು ತಿಳಿದು ಬಂದಿದೆ.
ಪೇಚಿಗೆ ಸಿಲುಕಿರುವ ಉಪಸಮಿತಿಗಳು
ಮಡಿಕೇರಿ ದಸರಾ ಈ ಬಾರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆದಿದೆ.
(ಮೊದಲ ಪುಟದಿಂದ) ಹತ್ತಾರು ಹೊಸ ಕಾರ್ಯಕ್ರಮಗಳು ಆಯೋಜಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ, ಅನುದಾನ ಬಾರದೆ ಉಪಸಮಿತಿಗಳು ಪೇಚಿಗೆ ಸಿಲುಕಿವೆ.
ಮಹಿಳಾ ದಸರಾ, ಯುವ ದಸರಾ, ಕ್ರೀಡಾ, ಕವಿಗೋಷ್ಠಿ ಸೇರಿದಂತೆ ಇನ್ನಿತರ ಸಮಿತಿಗಳು ಮಾಡಿದ ಖರ್ಚು, ಕೊಡಬೇಕಾದ ಹಣಗಳನ್ನು ನೀಡಲಾಗದೆ ಪರದಾಡುತ್ತಿವೆೆ. ಉಪಸಮಿತಿಗಳು ಸಮಿತಿ ಪ್ರಮುಖರನ್ನು ಈ ಬಗ್ಗೆ ಕೋರಿಕೊಳ್ಳುತ್ತಿದ್ದಾರೆ. ಮಹಿಳಾ ದಸರಾ ಸಮಿತಿ ಪ್ರಮುಖರು ದಸರಾ ಸಮಿತಿ ಕಾರ್ಯದರ್ಶಿಯೂ ಆಗಿರುವ ಪೌರಾಯುಕ್ತ ರಮೇಶ್ ಅವರ ಬಳಿ ತೆರಳಿ ಅನುದಾನದ ಬಗ್ಗೆ ಚರ್ಚಿಸಿದ್ದಾರೆ.
ಮಡಿಕೇರಿ ದಸರಾದ ಅಂಗವಾಗಿ ಉಪಸಮಿತಿಗಳು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮೂಲಕವೇ ಟ್ರೋಫಿ, ಪ್ರಶಸ್ತಿ ಪತ್ರ, ಊಟದ ವ್ಯವಸ್ಥೆ ಆಗಿದ್ದ ಹಿನ್ನೆಲೆ ಆರ್ಥಿಕ ಭಾರ ಕೊಂಚ ಕಡಿಮೆಯಾಗಿದೆ. ಉಳಿದಂತೆ ಇನ್ನಿತರ ಕೆಲ ಖರ್ಚುಗಳು ಸಂದಾಯಕ್ಕೆ ಬಾಕಿ ಉಳಿದುಕೊಂಡಿದೆ.
ಕಲಾವಿದರ ದುಂಬಾಲು
ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನಡೆದ ೯ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ಕಲಾವಿದರು ತಮ್ಮ ಸಂಭಾವನೆಗಾಗಿ ಸಾಂಸ್ಕೃತಿಕ ಸಮಿತಿಯ ದುಂಬಾಲು ಬಿದಿದ್ದಾರೆ. ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ಸಾಧು ಕೋಕಿಲರಂತಹ ಹೆಸರಾಂತ ಕಲಾವಿದರಿಗೂ ಇನ್ನೂ ಸಂಭಾವನೆ ನೀಡಿಲ್ಲ. ಅವರುಗಳಿಂದಲೂ ಒತ್ತಡ ಬರುತ್ತಿದೆ.
ದಸರಾ ಕಾರ್ಯಕ್ರಮ ನೀಡಿ ಹಲವು ದಿನ ಕಳೆದರೂ ಇನ್ನೂ ಹಣ ನೀಡದ ಬಗ್ಗೆ ಕಲಾವಿದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಮಿತಿಗೆ ನಿತ್ಯ ಕರೆಗಳನ್ನು ಮಾಡಿ ವಿಚಾರಿಸುತ್ತಿದ್ದಾರೆ. ಅಸಹಾಯಕರಾಗಿರುವ ಸಮಿತಿ ಸದಸ್ಯರು ಜಿಲ್ಲಾಧಿಕಾರಿಯತ್ತ ಬೊಟ್ಟು ಮಾಡಿ ಅನುದಾನ ಬಂದಿಲ್ಲ ಎಂದು ಮಾಹಿತಿ ನೀಡುತ್ತಿದ್ದಾರೆ.
ಅನುದಾನ ಬಿಡುಗಡೆಗೆ ಆದೇಶವಾಗಿದೆ. ತಾಂತ್ರಿಕ ಕಾರಣದಿಂದ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಸದ್ಯದಲ್ಲಿ ಹಣ ವರ್ಗಾವಣೆಯಾಗಲಿದೆ. ದೊರೆತ ಅನುದಾನದಲ್ಲಿ ಖರ್ಚುಗಳನ್ನು ಸರಿದೂಗಿ ಸಲಾಗುವುದು. ಸೇರಬೇಕಾದವರಿಗೆ ಹಣ ನೀಡಲಾಗುತ್ತದೆ.
- ವೆಂಕಟ್ ರಾಜಾ, ಜಿಲ್ಲಾಧಿಕಾರಿ,
ಅಧ್ಯಕ್ಷ, ಮಡಿಕೇರಿ ದಸರಾ ಸಮಿತಿ
ಅನುದಾನದ ಬಗ್ಗೆ ಶಾಸಕರ ಗಮನ ಸೆಳೆದಿದ್ದೇನೆ. ಕೆಲವೇ ದಿನದಲ್ಲಿ ಬೆಂಗಳೂರಿಗೆ ತೆರಳಿ ಅನುದಾನ ಬಿಡುಗಡೆಗೆ ಕ್ರಮವಹಿಸುವ ಭರವಸೆ ನೀಡಿದ್ದಾರೆ. ಸದ್ಯದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ಯಾರಿಗೂ ಹಣ ನೀಡದೆ ಇರುವುದಿಲ್ಲ. ಮಂಟಪ ಸಮಿತಿಗಳು ಭಯಪಡಬೇಕಾಗಿಲ್ಲ.
- ರಾಜೇಶ್ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ,
ಮಡಿಕೇರಿ ದಸರಾ ಸಮಿತಿ
ಗೋಣಿಕೊಪ್ಪ ದಸರಾ ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಮ್ಮ ಕಡೆಯಿಂದ ಬಿಲ್‌ಗಳನ್ನು ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ನೀಡುತ್ತೇವೆ. ಮುಂದಿನ ಪ್ರಕ್ರಿಯೆಗಳು ನಡೆದ ನಂತರ ಅನುದಾನ ಬಿಡುಗಡೆಯಾಗಬೇಕಾಗಿದೆ. ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಸರಕಾರ ಮಟ್ಟದಲ್ಲಿ ಅನುದಾನ ವರ್ಗಾವಣೆಗೆ ಪ್ರಯತ್ನ ಮಾಡುತ್ತಾರೆ. ಬೇಗ ಅನುದಾನ ಬಿಡುಗಡೆಯಾಗಿ ಕೈ ಸೇರಿದ್ದಲ್ಲಿ ಉತ್ತಮ.
- ಕುಲ್ಲಚಂಡ ಪ್ರಮೋದ್ ಗಣಪತಿ,
ಅಧ್ಯಕ್ಷರು, ಕಾವೇರಿ ದಸರಾ ಸಮಿತಿ, ಗೋಣಿಕೊಪ್ಪಲು