ಮಡಿಕೇರಿ, ನ. ೧೩: ವಕ್ಫ್ ಜಾಗದ ವಿಚಾರದಲ್ಲಿ ಏರ್ಪಟ್ಟಿರುವ ಗೊಂದಲವನ್ನು ಬಿಜೆಪಿ ರಾಜಕೀಯ ಅಸ್ತçವನ್ನಾಗಿ ಬಳಸಿಕೊಳ್ಳುತ್ತಿದೆ. ಕುಶಾಲನಗರದ ಮಹಿಳೆಯೊಬ್ಬರ ಜಾಗದ ವಿಚಾರದಲ್ಲೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಪ್ರಭಾವಿ ನಾಯಕರ ಕೈವಾಡ ಇರುವ ಶಂಕೆಯಿದ್ದು, ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಕೈಗೊಂಡು ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಬಹಿರಂಗಪಡಿಸಬೇಕೆAದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರವಾಗಿ ಈ ಹಿಂದಿನ ಬಿಜೆಪಿ ಸರಕಾರದಿಂದಲೂ ನೋಟಿಸ್ ನೀಡಲಾಗಿತ್ತು. ಅಧಿಕಾರಿಗಳು ಈ ಕ್ರಮ ವಹಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿರಲಿಲ್ಲ. ವಿಚಾರ ತಿಳಿದ ನಂತರ ನೋಟಿಸ್ ಅನ್ನು ಸರಕಾರ ಹಿಂಪಡೆದಿದೆ. ಬಿಜೆಪಿ ಈ ಗೊಂದಲವನ್ನು ಮುಂದಿಟ್ಟುಕೊAಡು ಧರ್ಮಗಳ ನಡುವೆ ಕಿಚ್ಚು ಹೊತ್ತಿಸುವ ಕೆಲಸಕ್ಕೆ ಕೈ ಹಾಕಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮುನ್ನ ೨೦೧೪ರಲ್ಲಿಯೇ ತಮ್ಮ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿಯನ್ನು ಉಳಿಸುವುದು, ಮುಸ್ಲಿಂ ಸಮುದಾಯಕ್ಕೆ ಸುರಕ್ಷಿತ ವಾತಾವರಣ ನಿರ್ಮಿಸುವುದು, ಉರ್ದು ಉತ್ತೇಜಿಸುವುದು, ವಕ್ಫ್ ಮಂಡಳಿಯ ಸಬಲೀಕರಣ ಹೀಗೆ ಅನೇಕ ವಿಷಯಗಳನ್ನು ಹೊರಡಿಸಿತ್ತು ಎಂದರು.

೨೦೧೮ ರಿಂದ ೨೦೨೩ರ ತನಕ ಬಿಜೆಪಿ ಸರಕಾರದ ಅವಧಿಯಲ್ಲಿಯೂ ರಾಜ್ಯದಲ್ಲಿ ೪೧೪ ಮಂದಿಗೆ ನೋಟಿಸ್ ನೀಡಿದೆ. ಇಂದು ಈ ವಿಷಯ ಮುನ್ನಲೆಗೆ ಬಂದ ಹಿನ್ನೆಲೆ ನೋಟಿಸ್ ಹಿಂಪಡೆದು ಪಹಣಿಯಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ಸರಕಾರ ಗಮನಹರಿಸಿದೆ. ಅಧಿಕಾರಿಗಳಿಂದ ಈ ತಪ್ಪಾಗಿದ್ದು, ಸರಕಾರಕ್ಕೆ ಈ ಬಗ್ಗೆ ಗೊತ್ತಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ಕುಶಾಲನಗರದ ಮಹಿಳೆಯೊಬ್ಬರ ಜಾಗವನ್ನು ವಕ್ಫ್ ಆಸ್ತಿ ಎಂದು ಬೆದರಿಕೆಯೊಡ್ಡಿದ್ದ ಪ್ರಕರಣ ಸಂಬAಧ ಅದು ವಕ್ಫ್ ಜಾಗವಲ್ಲ, ಮಹಿಳೆಯನ್ನು ಯಾರು ಸಂಪರ್ಕಿಸಿಲ್ಲ ಎಂದು ತನಿಖೆ ನಡೆಸಿ ಪೊಲೀಸ್ ಇಲಾಖೆ ಹೇಳಿದೆ. ಬಿಜೆಪಿಗರು ರಾಜಕೀಯ ದುರ್ಲಾಭಕ್ಕೆ ಮಹಿಳೆಯಿಂದ ದೂರು ಕೊಡಿಸಿದ್ದರು. ಇದರ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಪೊಲೀಸ್ ಇಲಾಖೆ ಇದರ ಹಿಂದಿನ ಕಾಣದ ಕೈಗಳನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ ಧರ್ಮಜ ಉತ್ತಪ್ಪ, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ನಿಯೋಗ ತೆರಳಿ ಗಮನಸೆಳೆಯಲಾಗುವುದು ಎಂದರು.

ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಕಾವೇರಿ ಮಾತೆಗೆ ಅವಹೇಳನ ಮಾಡಿದ ವಿಚಾರದಲ್ಲಿ ಅನ್ಯಧರ್ಮಿಯರನ್ನು ಆರೋಪಿಯನ್ನಾಗಿ ಮಾಡಿ ಬಿಜೆಪಿ ರಾಜಕೀಯ ಮಾಡಿತ್ತು. ಪೊಲೀಸ್ ತನಿಖೆ ನಂತರ ಅದನ್ನು ದಿವಿನ್ ಎಂಬಾತ ಮಾಡಿದ ವಿಚಾರ ಬಹಿರಂಗಗೊAಡಿತ್ತು. ಈ ರೀತಿ ಬಿಜೆಪಿ ಸಂಘರ್ಷ ಸೃಷ್ಟಿಸಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಶಾಸಕರ ಮೇಲಿನ ಆರೋಪಕ್ಕೆ ಖಂಡನೆ

ಪೊನ್ನAಪೇಟೆಯಲ್ಲಿ ಪ್ರತಾಪ್ ಸಿಂಹ ಪ್ರಚೋದÀನಕಾರಿ ಭಾಷಣದ ಮೂಲಕ ಕೋಮು ಸಂಘರ್ಷ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ೧೦ ವರ್ಷಗಳ ಕಾಲ ದೊರೆತ ಅಧಿಕಾರವಾಧಿಯಲ್ಲಿ ಏನೂ ಕೆಲಸ ಮಾಡದಿದ್ದ ಪ್ರತಾಪ್ ಸಿಂಹ ಭಾವನಾತ್ಮಕವಾಗಿ ಜನರನ್ನು ಕೆರಳಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಸ್ಥಳೀಯ ಶಾಸಕರುಗಳ ಮೇಲೆ ಇಲ್ಲಸಲ್ಲದ ಹೇಳಿಕೆ ನೀಡಿರುವುದು ಖಂಡನೀಯ. ಕಾಂಗ್ರೆಸ್ ಸರಕಾರ ಜವಾಬ್ದಾರಿಯುತವಾಗಿ ಅಧಿಕಾರ ನಡೆಸುತ್ತಿದೆ. ೧ ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕುಶಾಲನಗರದ ಮಹಿಳೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ರಾಜಕೀಯ ಮಾಡಿಕೊಳ್ಳುತ್ತಿದೆ. ಇದೀಗ ಆಕೆಯನ್ನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಹಿಂದೂತ್ವವನ್ನು ಬಿಜೆಪಿ ಮುಸ್ಲಿಂ ದ್ವೇಷದ ಮೂಲಕ ತೋರುತ್ತಿದೆ. ಇದರಿಂದ ದೇಶದ ವ್ಯವಸ್ಥೆ ಹಾಗೂ ಸುಸ್ಥಿರತೆಗೆ ಧಕ್ಕೆಯಾಗುತ್ತದೆ. ಕಾಂಗ್ರೆಸ್ ಅಧ್ಯಾತ್ಮ ಹಾಗೂ ಧಾರ್ಮಿಕ ಹಿಂದೂತ್ವವನ್ನು ಪ್ರತಿಪಾದಿಸುತ್ತದೆ. ರಾಜಕೀಯ ಹಿಂದುತ್ವವನ್ನಲ್ಲ; ಕುಶಾಲನಗರ ಪ್ರಕರಣದ ಹಿಂದೆ ಖಚಿತವಾಗಿ ಬಿಜೆಪಿಯವರು ಇದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಬಿಜೆಪಿಯಿಂದ ಘರ್ಷಣೆ ಸೃಷ್ಟಿಸುವ ಯತ್ನವಾಗುತ್ತಿದ್ದು, ಅದನ್ನು ಹತ್ತಿಕ್ಕುವ ಕೆಲಸವಾಗಬೇಕೆಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ವಕ್ತಾರ ತೆನ್ನಿರ ಮೈನಾ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಹಾಜರಿದ್ದರು.