ಕುಶಾಲನಗರ, ನ ೧೩: ಕುಶಾಲನಗರದಲ್ಲಿ ಡಿ.೧೩ ರಂದು ನಡೆಯಲಿರುವ ಹನುಮ ಜಯಂತಿ ಅಂಗವಾಗಿ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು.
ಹೆಚ್.ಆರ್.ಪಿ. ಕಾಲನಿಯಲ್ಲಿ ದಶಮಂಟಪಗಳ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹನುಮಜಯಂತಿ ಯಶಸ್ಸಿಗೆ ವಿವಿಧ ಮಂಟಪ ಸಮಿತಿಗಳ ಪದಾಧಿಕಾರಿಗಳ ಕೋರಿಕೆಗಳ ಬಗ್ಗೆ ಸಭೆಯಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಧ್ವನಿವರ್ಧಕ ಬಳಕೆ, ಸೀಮಿತ ಅವಧಿಯೊಳಗೆ ಮಂಟಪಗಳ ಪ್ರದರ್ಶನ, ರಸ್ತೆ ದುರಸ್ತಿ, ಲೈಟಿಂಗ್ಸ್ ಅಳವಡಿಕೆ, ಸ್ವಚ್ಚತೆ ಮತ್ತಿತರ ವಿಚಾರಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ಶಾಸಕರು ನೀಡಿದರು.
ಹನುಮ ಜಯಂತಿ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ. ಪ್ರತಿ ಮಂಟಪಗಳಿಗೆ ಲಕ್ಷಾಂತರ ರೂ ವೆಚ್ಚವಾಗುವ ಹಿನ್ನಲೆಯಲ್ಲಿ ಎಲ್ಲರಿಗೂ ಸಮಾಧಾನ ತರುವ ರೀತಿಯಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕಿದೆ. ಮಂಟಪಗಳು ಸಾಗುವ ಮಾರ್ಗದಲ್ಲಿ ಅಡ್ಡಿಯಾಗುವ ಮರದ ರೆಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕ್ರಮವಹಿಸಬೇಕಿದೆ. ಹದಗೆಟ್ಟಿರುವ ಹೆಚ್.ಆರ್.ಪಿ ಕಾಲನಿ ರಸ್ತೆಯನ್ನು ಕೂಡಲೆ ದುರಸ್ಥಿಗೊಳಿಸಲು ನೀರಾವರಿ ನಿಗಮ ಕ್ರಮವಹಿಸುವಂತೆ ಶಾಸಕರು ಸೂಚನೆ ನೀಡಿದರು.
ಪ್ರತಿ ಮಂಟಪದವರು ಸ್ವಚ್ಚತೆಗೆ ಆದ್ಯತೆ ನೀಡಬೇಕಿದೆ. ಪುರಸಭೆ ಕೂಡ ಸ್ವಚ್ಚತೆಗೆ ಕ್ರಮವಹಿಸಲಿದ್ದು, ಕಾರ್ಯಕ್ರಮ ಮುಗಿದ ನಂತರ ಪ್ರತಿಯೊಬ್ಬರು ಕೂಡ ಸ್ವಚ್ಚತಾ ಕಾರ್ಯಕ್ಕೆ ಕೈಜೋಡಿಸಬೇಕಿದೆ ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮ, ಸದಸ್ಯೆ ಜಯಲಕ್ಷö್ಮಮ್ಮ ನಂಜುAಡಸ್ವಾಮಿ, ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ತಹಶೀಲ್ದಾರ್ ಕಿರಣ್ ಗೌರಯ್ಯ, ವೃತ್ತ ನಿರೀಕ್ಷಕ ರಾಜೇಶ್, ಅರಣ್ಯವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಪುರಸಭೆ ಆರೋಗ್ಯ ನಿರೀಕ್ಷಕ ಉದಯಕುಮಾರ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಆಂಜನೇಯ ದೇವಾಲಯ ಸಮಿತಿಯ ಪುಂಡರೀಕಾಕ್ಷ, ರಾಜೀವ, ಕಸಾಪ ತಾಲೂಕು ಅಧ್ಯಕ್ಷ ನಾಗೇಶ್, ಮುಖಂಡರಾದ ಜೋಸೆಫ್ ವಿಕ್ಟರ್ ಸೋನ್ಸ್ ಸೇರಿದಂತೆ ವಿವಿಧ ಮಂಟಪ ಸಮಿತಿಯ ಮುಖಂಡರುಗಳಾದ ಡಿ.ಸಿ. ಮಂಜುನಾಥ್, ಗುರು ಪ್ರಸಾದ್, ಧರ್ಮ, ಅವಿನಾಶ್, ಕೆ.ಜಿ.ಮನು, ಸಚಿನ್, ಶಶಿಕುಮಾರ್, ರಾಮು, ಸುಮನ್, ಸುನಿಲ್, ಭಾಸ್ಕರ್ ನಾಯಕ್, ಮತ್ತಿತರರು ಇದ್ದರು.