ಮಡಿಕೇರಿ, ನ. ೧೪: ಪ್ರಸ್ತುತ ದೇಶದಲ್ಲಿನ ಪ್ರಮುಖ ಆನೆ ಶಿಬಿರಗಳಲ್ಲಿ ಒಂದಾಗಿದ್ದು, ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿರುವ ದುಬಾರೆ ಆನೆ ಶಿಬಿರಕ್ಕೆ ಕಾವೇರಿ ನದಿ ತಟದಲ್ಲಿನ ಪಾರ್ಕಿಂಗ್ ಸ್ಥಳದಿಂದ ತೂಗುಸೇತುವೆ ನಿರ್ಮಾಣ ಮಾಡುವ ಯೋಜನೆಯೊಂದು ಇದೀಗ ಕಾರ್ಯ ರೂಪಕ್ಕೆ ಬರುತ್ತಿದೆ. ಈ ಹಿಂದೆಯೇ ಇದರ ಪ್ರಸ್ತಾವನೆ ಇತ್ತಾದರೂ ಕೆಲವು ದೂರ ದೃಷ್ಟಿಯ ಚಿಂತನೆಯಿAದಾಗಿ ಈ ಯೋಜನೆಯ ಸಾಧಕ - ಭಾದಕದ ಕುರಿತ ಆಗಿನ ಅಧಿಕಾರಿಯೊಬ್ಬರ ನಿಲುವಿನಿಂದ ಇದು ಮುನ್ನಲೆಗೆ ಬಂದಿರಲಿಲ್ಲ. ಆದರೆ, ಇದೀಗ ಮತ್ತೆ ಈ ಉದ್ದೇಶಿತ ಯೋಜನೆ ಜಾರಿಗೆ ಬರಲು ಎಲ್ಲಾ ಸಿದ್ಧತೆಗಳು ನಡೆದಿವೆ.

ಕೆಲವು ತಿಂಗಳ ಹಿಂದೆಯೇ ರಾಜ್ಯ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ರೂ. ೬ ಕೋಟಿಯ ವೆಚ್ಚದ ತೂಗುಸೇತುವೆ ಮೂಲಕ ಪ್ರವಾಸಿಗರು ನದಿತೀರದಿಂದ ಆನೆ ಶಿಬಿರದ ಸ್ಥಳಕ್ಕೆ ತೆರಳಲು ಅವಕಾಶ ಮಾಡಲಾಗುವುದು. ಅಂದಾಜು ೧೨೦ ಮೀಟರ್ ಉದ್ದದ ತೂಗುಸೇತುವೆ ಇದಾಗಲಿದೆ. ಈಗಾಗಲೇ ಇದರ ಕ್ರಿಯಾಯೋಜನೆ ರೂಪುಗೊಂಡಿದ್ದು, ಸರಕಾರ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದಿಂದ ಅನುಮೋದನೆಯೂ ಆಗಿದೆ. ಇದೀಗ ಕೇವಲ ಆಡಳಿತಾತ್ಮಕ ಒಪ್ಪಿಗೆಯಷ್ಟೆ ಬಾಕಿ ಉಳಿದಿದೆ. ಆಡಳಿತಾತ್ಮಕ ಒಪ್ಪಿಗೆ ಬಳಿಕ ಟೆಂಡರ್ ಪ್ರಕ್ರಿಯೆಯೊಂದಿಗೆ ಕಾಮಗಾರಿ ಆರಂಭಗೊಳ್ಳಲಿದ್ದು, ಮುಂದಿನ ಮಳೆಗಾಲದ ಒಳಗೆ ತೂಗುಸೇತುವೆ ಸಿದ್ಧವಾಗಲಿದೆ ಎಂದು ತಿಳಿದು ಬಂದಿದೆ.

(ಮೊದಲ ಪುಟದಿಂದ) ಪ್ರಸ್ತುತ ದುಬಾರೆ ಆನೆ ಶಿಬಿರಕ್ಕೆ ಬೆಳಿಗ್ಗೆ ೯ ರಿಂದ ೧೧ ರತನಕ ಹಾಗೂ ಸಂಜೆ ೪ ರಿಂದ ೫.೩೦ ರತನಕ ಜನರನ್ನು ವೀಕ್ಷಣೆಗೆ ಬಿಡಲಾಗುತ್ತಿದೆ. ನದಿದಾಟಲು ೪ ಬೋಟ್‌ಗಳಿದ್ದು, ಇದೀಗ ೩ ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಶಿಬಿರಕ್ಕೆ ಈ ಬೋಟ್‌ಗಳ ಮೂಲಕ ದಿನವೊಂದಕ್ಕೆ ೬೦೦ ರಿಂದ ೭೦೦ ಜನರನ್ನಷ್ಟೆ ಕರೆದೊಯ್ಯಲು ಸಾಧ್ಯವಾಗುತ್ತಿದೆ.

ಆದರೆ ದುಬಾರೆಗೆ ಸುಮಾರು ೨ ಸಾವಿರದಷ್ಟು ಹಾಗೂ ರಜಾದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಸಾಕಷ್ಟು ಜನರು ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಹಿಂತಿರುಗುವ ಪರಿಸ್ಥಿತಿಯಿರುವುದರಿಂದ ತೂಗು ಸೇತುವೆ ನಿರ್ಮಾಣ ಮಾಡಿದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಸಾಧ್ಯವಾಗಲಿದೆ ಎಂಬ ಕಾರಣದಿಂದ ತೂಗು ಸೇತುವೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಡಿಎಫ್‌ಓ ಭಾಸ್ಕರ್ ಅವರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧೀನದಲ್ಲಿ ಬರುವ ಕೊಡಗು ಪ್ರತಿಷ್ಠಾನದ ಮೂಲಕ ಇದು ನಿರ್ಮಾಣವಾಗಲಿದೆ. ಈ ಪ್ರತಿಷ್ಠಾನಕ್ಕೆ ಅರಣ್ಯ ಸಚಿವರು ಅಧ್ಯಕ್ಷರಾಗಿದ್ದಾರೆ. ಶಾಸಕರು ಸಮಿತಿ ಸದಸ್ಯರಾಗಿರುತ್ತಾರೆ. ರಾಜ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ಜಿಲ್ಲೆಗಳಲ್ಲಿ ಇಂತಹ ಪ್ರತಿಷ್ಠಾನಗಳನ್ನು ರೂಪಿಸಲಾಗಿದೆ. ಕೊಡಗಿನಲ್ಲಿ ೨೦೧೯ರಲ್ಲಿ ಕೊಡಗು ಮಾನವ ವನ್ಯ ಪ್ರಾಣಿ ಸಂಘರ್ಷ ನಿವಾರಣಾ ಪ್ರತಿಷ್ಠಾನ ಆರಂಭಗೊAಡಿದೆ.

ಜಿಲ್ಲೆಯ ಎಲ್ಲಾ ಅರಣ್ಯ ಪ್ರವಾಸೋದ್ಯಮಕ್ಕೆ ಸಂಬAಧಿಸಿದAತೆ ಸಂಗ್ರಹವಾಗುವ ಟಿಕೆಟ್ ದರ, ಟ್ರಕ್ಕಿಂಗ್ ಶುಲ್ಕ, ಅತಿಥಿ ಗೃಹಗಳ ಆದಾಯ ಇತ್ಯಾದಿ ಹಣ ಈ ಪ್ರತಿಷ್ಠಾನಕ್ಕೆ ಕ್ರೋಢೀಕರಣವಾಗಲಿದೆ. ಈ ಮೊತ್ತ ವಿವಿಧ ವಿಚಾರಗಳ ನಿರ್ವಹಣೆ, ಪರಿಹಾರ ನೀಡಿಕೆ ಇತ್ಯಾದಿ ಅಗತ್ಯತೆಗೆ ಬಳಕೆಯಾಗಲಿದೆ. ಇದೀಗ ತೂಗು ಸೇತುವೆಯೂ ಪ್ರತಿಷ್ಠಾನದ ಅಧೀನದಲ್ಲಿ ನಿರ್ಮಾಣ, ನಿರ್ವಹಣೆಯಾಗಲಿದೆ ಎಂದು ಭಾಸ್ಕರ್ ಅವರು ವಿವರವಿತ್ತರು. ಈ ಉದ್ದೇಶದಿಂದಲೇ ಕಳೆದ ಆಗಸ್ಟ್ನಿಂದ ಪ್ರವೇಶ ಶುಲ್ಕವೂ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.ದರ ಏರಿಕೆ - ಇದೀಗ ಒಂದಷ್ಟು ಇಳಿಕೆ

ಜಿಲ್ಲೆಯಲ್ಲಿ ದುಬಾರೆ ಸಾಕಾನೆ ಶಿಬಿರ ಸೇರಿದಂತೆ ಅರಣ್ಯ ಇಲಾಖೆ ಅಧೀನದಲ್ಲಿ ಬರುವ ಪ್ರವಾಸೋದ್ಯಮ ಚಟುವಟಿಕೆ ಇರುವ ಸ್ಥಳಗಳಿಗೆ ತೆರಳಲು ನಿಗದಿಪಡಿಸಲಾಗಿದ್ದ ಶುಲ್ಕವನ್ನು ಅರಣ್ಯ ಇಲಾಖೆ ಆಗಸ್ಟ್ ೧ ರಿಂದ ಹೆಚ್ಚಳ ಮಾಡಿತ್ತು. ಪ್ರೇಕ್ಷಣೀಯ ಸ್ಥಳಗಳಾದ ದುಬಾರೆ ಆನೆಶಿಬಿರ, ಹಾರಂಗಿ ಆನೆಶಿಬಿರ, ಟ್ರೀ ಪಾರ್ಕ್, ಕಾವೇರಿ ನಿಸರ್ಗಧಾಮ ಸೇರಿದಂತೆ ಜಿಲ್ಲೆಯ ಇನ್ನಿತರ ಅರಣ್ಯ ಪ್ರವಾಸೋದ್ಯಮ ತಾಣಗಳಲ್ಲಿನ ಪ್ರವೇಶ ದರ, ಪಾರ್ಕಿಂಗ್ ಶುಲ್ಕ ದುಬಾರಿಯಾಗಿತ್ತು.

ಆದರೆ ಈ ಕ್ರಮಕ್ಕೆ ಸಾರ್ವಜನಿಕವಾಗಿ ಸಾಕಷ್ಟು ವಿರೋಧ ವ್ಯಕ್ತಗೊಂಡಿತ್ತು. ಮಡಿಕೇರಿ ವಿಭಾಗಕ್ಕೆ ದುಬಾರೆ, ಹಾರಂಗಿ, ನಿಸರ್ಗಧಾಮದಂತಹ ಪ್ರದೇಶಗಳು ಬರಲಿವೆ. ಅದರಲ್ಲೂ ದುಬಾರೆಯಲ್ಲಿ ಇದು ಹೆಚ್ಚಿನ ವಿರೋಧಕ್ಕೆ ಕಾರಣವಾಗಿತ್ತು. ಕ್ಷೇತ್ರದ ಶಾಸಕರೂ ಸ್ಥಳಕ್ಕೆ ಭೇಟಿ ನೀಡಿದ್ದರಲ್ಲದೆ ಜನರ ಅಹವಾಲು ಸ್ವೀಕರಿಸಿದ್ದರು.

ಇದೀಗ ಶಾಸಕರ ಸೂಚನೆಯಂತೆ ಹಾಗೂ ಜನವಿರೋಧದ ಹಿನ್ನೆಲೆ ಏರಿಕೆಯಾಗಿದ್ದ ದರವನ್ನು ಒಂದಷ್ಟು ಕಡಿಮೆ ಮಾಡಲಾಗಿದೆ. ನವಂಬರ್ ೧ ರಿಂದ ಮತ್ತೆ ಶುಲ್ಕ ಪರಿಷ್ಕರಣೆಯಾಗಿದೆ. ಆದರೂ ಈ ದರವೂ ಹೆಚ್ಚು ಎಂಬದು ಸಾರ್ವಜನಿಕ ವಲಯದಲ್ಲಿ ಇನ್ನೂ ಅಸಮಾಧಾನವಿದೆ. ಪರಿಷ್ಕರಣೆ ಕೇವಲ ಅಲ್ಪಪ್ರಮಾಣದ್ದಾಗಿದೆ.