ಮಡಿಕೇರಿ, ನ. ೧೪: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಕೊಡಗು ಪೊಲೀಸ್ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ವೀರಾಜಪೇಟೆ ಉಪ ವಿಭಾಗದ ವಿಎಸ್‌ಡಿ ವಿಕ್ಟರಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

೫ ಓವರ್‌ನ ಲೀಗ್ ಮಾದರಿಯ ಪಂದ್ಯಾಟದಲ್ಲಿ ಮಡಿಕೇರಿ ಉಪವಿಭಾಗದ ಎಂಎಸ್‌ಡಿ ಮಾಸ್ಟರ್ ಕಾಪ್ಸ್, ಸೋಮವಾರಪೇಟೆ ಉಪ ವಿಭಾಗದ ಎಸ್‌ಎಸ್‌ಡಿ ಸೂಪರ್ ಕಾಪ್ಸ್, ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಡಿಪಿಓ ಡೈನಾಮಿಕ್ ಕಾಪ್ಸ್, ವೀರಾಜಪೇಟೆ ಉಪ ವಿಭಾಗದ ವಿಎಸ್‌ಡಿ ವಿಕ್ಟರಿ ಕಾಪ್ಸ್, ಕೊಡಗು ಜಿಲ್ಲಾ ಸಶಸ್ತç ಮೀಸಲು ಪಡೆಯ ಡಿಎಆರ್ ಡೇರಿಂಗ್ ಕಾಪ್ಸ್ ತಂಡಗಳು ಸೆಣಸಾಟ ನಡೆಸಿದವು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತ ವಿಎಸ್‌ಡಿ ವಿಕ್ಟರಿ ಕಾಪ್ಸ್ ತಂಡ ನಿಗದಿತ ೬ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೮೪ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ್ದ ಡಿಪಿಓ ಡೈನಾಮಿಕ್ ಕಾಪ್ಸ್ ತಂಡ ೫ ವಿಕೆಟ್ ಕಳೆದುಕೊಂಡು ೫೯ ರನ್ ದಾಖಲಿಸಿ ೨೫ ರನ್‌ಗಳ ಅಂತರದಲ್ಲಿ ಸೋಲುಂಡಿತು.

ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಡಿಪಿಓ ಡೈನಾಮಿಕ್ ಕಾಪ್ಸ್ ತಂಡದ ರಾಜ ಪಡೆದುಕೊಂಡರು. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಮತ್ತು ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ವಿಎಸ್‌ಡಿ ವಿಕ್ಟರಿ ಕಾಪ್ಸ್ ತಂಡ ಅನೀಶ್ ಪಡೆದುಕೊಂಡರು. ಬೆಸ್ಟ್ ಬೌಲರ್ ಪ್ರಶಸ್ತಿ ಮತ್ತು ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಡಿಪಿಓ ಡೈನಾಮಿಕ್ ಕಾಪ್ಸ್ ತಂಡ ಪ್ರವೀಣ್ ಪಡೆದುಕೊಂಡರು.