ರಮೇಶ್ ಕುಮಾರ್‌ನನ್ನು ಕೊಲೆ ಮಾಡಲಾದ ಸ್ಥಳದ ಮಹಜರಿಗಾಗಿ ತನಿಖಾ ತಂಡದ ಪೊಲೀಸರಾದ ಮುದ್ದುಮಹದೇವಪ್ಪ ಮತ್ತು ಸಿಬ್ಬಂದಿ ಹೈದರಾಬಾದ್‌ಗೆ ರಾಣನನ್ನು ಕರೆದೊಯ್ಯುತ್ತಾರೆ. ಅಲ್ಲಿ ರಮೇಶ್ ಕುಮಾರ್ ಹತ್ಯೆ ಮಾಡಿದ ಸ್ಥಳದ ಮಹಜರನ್ನು ಸಿಂಗಾಪುರ ಸಿಟಿ ಬಳಿ ನಡೆಸಿದ ಬಳಿಕ ಸುಸ್ತಾಗಿದ್ದ ಪೊಲೀಸ್ ತಂಡ ಹತ್ತಿರದಲ್ಲಿನ ಲಾಡ್ಜ್ನಲ್ಲಿ ರಾತ್ರಿ ಆಶ್ರಯ ಪಡೆಯುತ್ತದೆ.

ಅಂಕುರ್ ರಾಣ ಪದೇ ಪದೇ ಸಿಗರೇಟ್ ಸೇದಬೇಕೆಂದು ಒತ್ತಡ ಹಾಕುತ್ತಲೇ ಇದ್ದರೂ ಇವನ ಒತ್ತಾಯಕ್ಕೆ ಮಣಿಯದ ಪೊಲೀಸರು ಕೈಗೆ ಕೋಳ ಹಾಕಿ ಮಂಚಕ್ಕೆ ಲೀಡಿಂಗ್ ಡೈನ್ ಹಾಕಿ ಕಟ್ಟಿರುತ್ತಾರೆ. ಪೊಲೀಸರು ಗಾಡ ನಿದ್ದೆಯಲ್ಲಿರುವುದನ್ನು ಮನವರಿಕೆ ಮಾಡಿಕೊಂಡ ರಾಣ, ಕೈಕೋಳ ಸಡಿಲ ಮಾಡಿಕೊಂಡವನೇ ಮೆಲ್ಲನೆ ಕೋಣೆಯಿಂದ ಹೊರಕ್ಕೋಡಿಬಿಡುತ್ತಾನೆ.

ಅಂದು ಅಕ್ಟೋಬರ್ ೩೧, ಬೆಳಗ್ಗಿನ ಜಾವ ೩.೩೦ ರಿಂದ ೪ ಗಂಟೆಯ ಸುಮಾರಿಗೆ ರಾಣ ಮೇಲೆದ್ದವನೇ ಕೋಣೆಯಿಂದ ಹೊರಕ್ಕೋಡಿಬಿಡುತ್ತಾನೆ. ಹೀಗೆ ಪಲಾಯನ ಮಾಡುವಾಗ ಪಕ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿ ಅಸ್ವಕ್ ಎಂಬುವವರ ಮೊಬೈಲ್ ಕೂಡ ಕದ್ದು ತರುತ್ತಾನೆ.

ಇತ್ತ ಸುಂಟಿಕೊಪ್ಪದಲ್ಲಿದ್ದ ಪೊಲೀಸ್ ಠಾಣಾಧಿಕಾರಿ ಮತ್ತು ರಮೇಶ್ ಕುಮಾರ್ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿರುವ ಚಂದ್ರಶೇಖರ್ ಅವರಿಗೆ ಮುಂಜಾನೆ ೪.೩೬ ಗಂಟೆಗೆ ಮೊಬೈಲ್ ಕರೆ ಬರುತ್ತದೆ. ಕರೆ ಸ್ವೀಕರಿಸಿದಾಗ ಅತ್ತಲಿಂದ ರಾಣನ ಅಮ್ಮ ಸಂತೋಷಿ ಮಾತನಾಡುತ್ತಾರೆ.

ನಿಮ್ಮ ವಶದಿಂದ ನನ್ನ ಮಗ ರಾಣ ಓಡಿಹೋಗಿದ್ದಾನೆ. ಇದು ನಿಜವಾ? ಸಂತೋಷಿಯ ಈ ಪ್ರಶ್ನೆಗೆ ಚಂದ್ರಶೇಖರ್ ಕಕ್ಕಾಬಿಕ್ಕಿಯಾಗುತ್ತಾರೆ. ಕೂಡಲೇ ಹೈದರಾಬಾದ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಅಸ್ವಕ್‌ಗೆ ಕರೆ ಮಾಡಿದಾಗ ಆ ಮೊಬೈಲ್ ಸ್ವಿಚ್‌ಆಫ್ ಆಗಿರುತ್ತದೆ. ಮತ್ತಷ್ಟು ಗಾಭರಿಯಾದ ಚಂದ್ರಶೇಖರ್, ಪೊಲೀಸ್ ಸಿಬ್ಬಂದಿ ಹರೀಶ್‌ಗೆ ಕರೆ ಮಾಡಿ, ಏನಾಗುತ್ತಿದೆ ಅಲ್ಲಿ ಎಂದಾಗ, ಹೌದು ಸರ್, ರಾಣ ನಾಪತ್ತೆಯಾಗಿದ್ದಾನೆ. ಹುಡುಕುತ್ತಿದ್ದೇವೆ ಎಂದು ಉತ್ತರ ಬರುತ್ತದೆ, ಚಂದ್ರಶೇಖರ್‌ಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಗುತ್ತದೆ. ತನಿಖಾಧಿಕಾರಿಯಾಗಿ ತೆರಳಿದ್ದ ಮುದ್ದುಮಹದೇವ ಅವರನ್ನು ಅಲರ್ಟ್ ಮಾಡಿದ ಚಂದ್ರಶೇಖರ್, ಕೂಡಲೇ ಸುತ್ತಮುತ್ತಲ ಪ್ರದೇಶಗಳಲ್ಲಿ ರಾಣನನ್ನು ಪತ್ತೆ ಮಾಡುವಂತೆ ಸೂಚಿಸುತ್ತಾರೆ.

ಹೈದರಾಬಾದ್‌ನಲ್ಲಿರುವ ಪೊಲೀಸ್ ತಂಡ ರಾಣನಿಗಾಗಿ ಸತತ ಹುಡುಕಾಟ ನಡೆಸುತ್ತದೆ. ಆದರೆ ಎಲ್ಲಿಯೂ ಸುಳಿವೇ ಸಿಕ್ಕುವುದಿಲ್ಲ. ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರನ್ನೂ ದಾಖಲಿಸಲಾಗುತ್ತದೆ.

ಈ ನಡುವೇ ತಂಡದ ಪೊಲೀಸರೋರ್ವರು ಅಂಜನ ಪ್ರಶ್ನೆ ಹಾಕಿ ರಾಣ ಎಲ್ಲಿರಬಹುದು ಎಂದೂ ಕೇಳಿಸುತ್ತಾರೆ. ಆಗ, ಹತ್ತಿರದಲ್ಲಿಯೇ ಇದ್ದಾನೆ, ಜಲಮೂಲದಲ್ಲಿ ಹುಡುಕಿ ಎಂಬ ಉತ್ತರ ಬರುತ್ತದೆ. ತಡಮಾಡದೇ ಪಕ್ಕದಲ್ಲಿನ ಕೆರೆಕೊಳ ಹುಡುಕುತ್ತಿರುವಾಗಲೇ ಕೊಳದಲ್ಲಿ ಶವವೊಂದನ್ನು ಸ್ಥಳೀಯ ಪೊಲೀಸರು ಮೇಲೆತ್ತುತ್ತಿರುವುದು ಕಾಣುತ್ತದೆ. ಈ ಪೊಲೀಸರ ಜಂಘಾಬಲವೇ ಉಡುಗಿಹೋಗುತ್ತದೆ. ರಾಣ ಸತ್ತ ಎಂದಾದಲ್ಲಿ ಅದು ಕಸ್ಟಡಿಯಲ್ಲಿನ ಸಾವಿಗೆ ಸಮಾನ, ಖಂಡಿತಾ ಇಲಾಖೆಯ ತೀವ್ರ ವಿಚಾರಣೆಯೊಂದಿಗೆ ತಮ್ಮ ಅಮಾನತ್ತು ಗ್ಯಾರಂಟಿ ಎಂದು ಪೊಲೀಸರು ಗಾಭರಿಯಾಗುತ್ತಾರೆ. ಆದರೆ ಇವರ ಅದೃಷ್ಟಕ್ಕೆ ಅದು ಬೇರಾರದ್ದೋ ಶವವಾಗಿರುತ್ತದೆ. ಕಾಕತಾಳೀಯ ಎಂಬAತೆ ಅದೇ ಕೆರೆಯಲ್ಲಿ ಶವ ಕಂಡು ಪೊಲೀಸರು ಅದು ರಾಣನದ್ದೇ ಎಂದು ಭಾವಿಸಿ ಗಾಬರಿಯಾಗಿದ್ದರು.

ಓರ್ವ ಪೊಲೀಸನಂತೂ ತನಿಖಾಧಿಕಾರಿ ಚಂದ್ರಶೇಖರ್‌ಗೆ ಕರೆ ಮಾಡಿ, ರಾಣ ಕಸ್ಟಡಿಯಿಂದ ನಾಪತ್ತೆಯಾದ ಘಟನೆಯ ನೈತಿಕ ಹೊಣೆ ಹೊತ್ತು ತಾನೂ ಸಾವಿಗೆ ಶರಣಾಗುತ್ತಿರುವುದಾಗಿ ಹೇಳಿದಾಗ ಚಂದ್ರಶೇಖರ್ ಮಾನಸಿಕವಾಗಿ ಆತನಿಗೆ ಧೈರ್ಯ ಹೇಳುವ ಕಾರ್ಯಕ್ಕೆ ಮುಂದಾಗುತ್ತಾರೆ. ಅಂತಹ ಚಿಂತನೆ ಬೇಡ, ನಾಪತ್ತೆಯಾಗಿರುವ ರಾಣನನ್ನು ಮೊದಲು ಹುಡುಕೋಣ, ನಿಮ್ಮ ಕುಟುಂಬವನ್ನು ಯೋಚಿಸಿ, ನೀವು ಸಾವಿನ ಬಗ್ಗೆ ಯೋಚಿಸಿದಲ್ಲಿ ನಾವು ಖಂಡಿತಾ ರಾಣನನ್ನು ಹುಡುಕಲಾಗುವುದಿಲ್ಲ. ನಾನಿದ್ದೇನೆ. ಯಾವುದೇ ಕಾರಣಕ್ಕೂ ಗಾಭರಿಯಾಗಬೇಡಿ, ಎಂದು ಹೇಳಿದಾಗ ನಮ್ಮನ್ನು ರಕ್ಷಿಸಿ ಸಾರ್, ತಪ್ಪಾಗಿದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ. ಮತ್ತೆ ಅವರಿಗೆ ಧೈರ್ಯ ಹೇಳಿದ ಚಂದ್ರಶೇಖರ್. ಸರಿ, ನಾನಿದ್ದೇನೆ ನೋಡೋಣ ಎಲ್ಲರೂ ಸೇರಿ ರಾಣನನ್ನು ಹಿಡಿಯೋಣ ಬೇರೆ ಯೋಚನೆ ಮಾಡಬೇಡಿ ಎಂದು ಹೇಳಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ.

ಪೊಲೀಸರ ವಶದಿಂದ ರಾಣ ಓಡಿ ಹೋಗಿದ್ದಾನೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಗೆ ಹೇಳುವುದು,? ಆ ಧೈರ್ಯ ಬಾರದೇ ಡಿವೈಎಸ್ಪಿಗೆ ವಿಚಾರ ತಿಳಿಸಿ ದೆಹಲಿಗೆ ಹೊರಡುತ್ತಿರುವುದಾಗಿ ತಿಳಿಸಿ ತನ್ನದೇ ಕಾರ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣದತ್ತ ತಡ ಮಾಡದೇ ಪೊಲೀಸ್ ಸಿಬ್ಬಂದಿ ಪ್ರವೀಣ್ ಜತೆ ತೆರಳಿದೆ, ಸಿಕ್ಕಿದ ವಿಮಾನ ಹತ್ತಿ ದೆಹಲಿಗೆ ತೆರಳಿದ ತನ್ನನ್ನು ರಾತೋರಾತ್ರಿ ಹೈದರಾಬಾದ್‌ನಿಂದ ಬಂದ ತನಿಖಾಧಿಕಾರಿ ಮುದ್ದುಮಹದೇವ ಕೂಡ ತನ್ನೊಂದಿಗೆ ಸೇರ್ಪಡೆಯಾದರು ಎಂದು ಮಾಹಿತಿ ನೀಡಿದರು ಚಂದ್ರಶೇಖರ್. ಖಂಡಿತಾ ರಾಣ ತನ್ನ ಊರಾಗಿರುವ ಹರಿದ್ವಾರಕ್ಕೆ ಮರಳಿರುತ್ತಾನೆ. ಬೇರೆಲ್ಲೂ ಹುಡುಕದೇ ರಾಣನನ್ನು ಸ್ವಂತ ಊರಿನಲ್ಲಿಯೇ ಹುಡುಕುವುದೇ ಉತ್ತಮ ಎಂದು ಯೋಚಿಸಿ ದ್ದರು. ಚಂದ್ರಶೇಖರ್ ನಂಬಿದ್ದು ಸುಳ್ಳಾಗಲಿಲ್ಲ, ಹೈದರಾಬಾ ದ್‌ನಿಂದ ತಪ್ಪಿಸಿಕೊಂಡ ರಾಣ ಹರಿದ್ವಾರಕ್ಕೆ ತೆರಳಿದ್ದ.

ಇಷ್ಟಕ್ಕೂ ರಾಣ ತಾಯಿ ಸಂತೋಷಿ ಆ ಹೊತ್ತಿನಲ್ಲಿ ಚಂದ್ರಶೇಖರ್‌ಗೆ ಕರೆ ಮಾಡಿ ಮಗ ಪರಾರಿಯಾಗಿರುವ ಬಗ್ಗೆ ಹೇಳಿದ್ದಾದರೂ ಯಾಕೆ?

ಸಿಂಗಾಪುರ ಸಿಟಿ ಬಳಿ ರೂಮ್‌ನಲ್ಲಿದ್ದ ಪೊಲೀಸ್ ಬಂಧನದಿAದ ತಪ್ಪಿಸಿಕೊಂಡ ಅಂಕುರ್ ರಾಣ ತನ್ನೊಂದಿಗೆ ತಂದಿದ್ದ ಮೊಬೈಲ್ ಮೂಲಕ ತಾಯಿಗೆ ಕರೆ ಮಾಡಿ ತಾನು ತಪ್ಪಿಸಿಕೊಂಡಿದ್ದಾಗಿ ತಿಳಿಸಿದ, ಅಂತೆಯೇ ತಾಯಿ ಸಂತೋಷಿಗೆ ಚಂದ್ರಶೇಖರ್ ಮೊಬೈಲ್ ನಂಬರ್ ನೀಡಿ ಹೇಗಾದರೂ ಅವರ ಯೋಜನೆ ಏನಿರಬಹುದು ಎಂದು ತಿಳಿದುಕೋ ಎಂದೂ ಸೂಚಿಸಿದ್ದ, ಹೀಗಾಗಿಯೇ ಆ ತಾಯಿ ಸಂತೋಷಿ ಚಂದ್ರಶೇಖರ್‌ಗೆ ಕರೆ ಮಾಡಿ ಅವರು ಎಲ್ಲಿದ್ದಾರೆ, ಮುಂದೆ ಎಲ್ಲಿಗೆ ಹೋಗುತ್ತಾರೆ ಎಂದು ಮಾಹಿತಿ ಬಯಸಿದ್ದರು. ಆದರೆ ಚಾಣಕ್ಷರಾದ ಚಂದ್ರಶೇಖರ್, ಮರ್ಯಾದೆಯಾಗಿ ಮಗನಿಗೆ ವಕೀಲರ ಮೂಲಕವೇ ಶರಣಾಗಲು ತಿಳಿಸಿ, ನೀವೇ ಇಲ್ಲಿಗೆ ಕರೆ ತನ್ನಿ, ಇಲ್ಲದೇ ಹೋದರೆ ಪರಿಣಾಮವೇ ಬೇರೆ, ಈಗ ಕೊಲೆ ಕೇಸ್ ಮಾತ್ರ ಇತ್ತು, ಇನ್ನು ಪೊಲೀಸ್ ವಶದಿಂದ ತಪ್ಪಿಸಿಕೊಂಡ ಕೇಸ್ ಕೂಡ ಆತನನ್ನು ಕಾಡುತ್ತದೆ ಎಂದು ಎಚ್ಚರಿಸಿದ್ದರು.

ಆದರೆ, ಈ ಹಿಂದೆ ಜೈಲಿಗೆ ತೆರಳಿ ವಾಪಸ್ ಬಂದಿದ್ದ ರಾಣನ ತಾಯಿ ಸಂತೋಷಿ ಪೊಲೀಸರ ಬದಲಿಗೆ ಕ್ರಿಮಿನಲ್ ಮಗನಿಗೇ ನೆರವಾಗಲು ಮುಂದಾಗಿದ್ದಳು ಎಂದು ಅಭಿಪ್ರಾಯಪಡುತ್ತಾರೆ. ಚಂದ್ರಶೇಖರ್, ತಾಯಿಗೆ ಕರೆ ಮಾಡಿದ ಬಳಿಕ ದಾರಿಹೋಕ ವಿಜಯ್ ಕುಮಾರ್ ಎಂಬುವವರಿAದ ಮೊಬೈಲ್ ಪಡೆದುಕೊಂಡು ಅದರಲ್ಲಿ ದೆಹಲಿಗೆ ರೈಲು ಎಷ್ಟು ಗಂಟೆಗಿದೆ ಎಂದು ಮಾಹಿತಿ ಪಡೆದಿದ್ದ ರಾಣ, ಹತ್ತಿರದ ರೈಲ್ವೇ ನಿಲ್ದಾಣಕ್ಕೆ ತೆರಳಿ ಅದಾಗ ತಾನೇ ಬಂದಿದ್ದ ತೆಲಂಗಾಣ - ದಿಲ್ಲಿ ಎಕ್ಸ್ಪ್ರೆಸ್ ರೈಲಿನಲ್ಲಿ ಟಿಕೇಟ್ ರಹಿತ ಪ್ರಯಾಣಕ್ಕೆ ಮುಂದಾಗಿದ್ದ ರಾಣನನ್ನು ಟಿಕೆಟ್ ಕಲೆಕ್ಟರ್ ತಪಾಸಣೆ ಸಂದರ್ಭ ರೈಲಿನಿಂದ ಇಳಿಸುತ್ತಾರೆ. ಆದರೆ ಮತ್ತೆ ಚಲಿಸುತ್ತಿರುವ ರೈಲನ್ನೇರಿ ಬೇರೊಂದು ಬೋಗಿಗೆ ಹೋಗಿ ಪಯಣ ಮುಂದುವರೆಸುತ್ತಾನೆ, ಹರಿದ್ವಾರಕ್ಕೆ ಹತ್ತಿರವಾದ ನಿಲ್ದಾಣ ಬರುತ್ತಿರುವಂತೆಯೇ ಅಲ್ಲಿ ಇಳಿದು ಊರಿನತ್ತ ಸಾಗುತ್ತಾನೆ.

ದಿಲ್ಲಿಗೆ ತೆರಳಿದ ಪೊಲೀಸರು ಅಲ್ಲಿನ ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸುತ್ತಾರೆ, ಎಲ್ಲಿಯೂ ಸುಳಿವು ದೊರಕದಾದಾಗ ದಿಲ್ಲಿಯಲ್ಲಿ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಆಗಿರುವ ರಾಜ್ ಪಾಲ್ ಡಾಬಾಸ್ ಎಂಬುವವರನ್ನು ಭೇಟಿಯಾದ ಚಂದ್ರಶೇಖರ್ ಅವರ ನೆರವು ಕೋರುತ್ತಾರೆ, ಕೊಡಗಿನಿಂದ ಬಂದಿದ್ದೇವೆ ಎಂದು ಗೊತ್ತಾದ ತಕ್ಷಣ ಎಲ್ಲಾ ರೀತಿಯ ಪೊಲೀಸ್ ನೆರವಿಗೆ ರಾಜ್ ಪಾಲ್ ಮುಂದಾಗುತ್ತಾರೆ.

ಉತ್ತರ ಪ್ರದೇಶದಲ್ಲಿ ವಿಶೇಷವಾದ ಪೊಲೀಸ್ ತಂಡ ಕಾರ್ಯಾಚರಿಸುತ್ತದೆ, ಇದಕ್ಕೆ ಸ್ಪೆಷಲ್ ಆಪರೇಷನ್ ಗ್ರೂಪ್ (ಎಸ್‌ಓಜಿ) ಎಂದು ಹೆಸರು, ನಾಪತ್ತೆಯಾದ ಆರೋಪಿಗಳು, ಪರಾರಿಯಾದ ಕ್ರಿಮಿನಲ್‌ಗಳು, ಅತ್ಯಾಚಾರಿಗಳು, ಕೊಲೆಗಡುಕರು, ದರೋಡೆಕೋರರು ಇಂಥವರನ್ನು ಹುಡುಕಿ ಜೈಲಿಗಟ್ಟುವುದೇ ಈ ತಂಡದ ಮುಖ್ಯ ಕೆಲಸ, ಹೊರರಾಜ್ಯಗಳಿಂದ ತಲೆಮರೆಸಿಕೊಂಡು ಉತ್ತರ ಪ್ರದೇಶಕ್ಕೆ ಬರುವ ಆರೋಪಿಗಳ ಪತ್ತೆಯಲ್ಲಿ ಈ ತಂಡದ್ದು ಮುಖ್ಯ ಪಾತ್ರವಿರುತ್ತದೆ.

ಈ ತಂಡಕ್ಕೆ ನೆರವನ್ನು ರಾಜ್ ಪಾಲ್ ನೀಡುತ್ತಾರೆ, ಇವರು ನೀಡಿದ ಸಹಕಾರದ ಧೈರ್ಯದಿಂದ ಹರಿದ್ವಾರಕ್ಕೆ ಬಾಡಿಗೆ ಕಾರ್‌ನಲ್ಲಿ ಪೊಲೀಸ್ ತಂಡ ತೆರಳುತ್ತದೆ.

ಚಂದ್ರಶೇಖರ್ ಹೇಳುತ್ತಾರೆ, ಹರಿದ್ವಾರಕ್ಕೆ ತೆರಳುತ್ತಿರುವಾಗಲೇ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕರೆ ಬರುತ್ತದೆ. ನನಗಂತೂ ಇಲ್ಲಿಗೆ ಎಲ್ಲಾ ಮುಗಿದು ಹೋಯಿತು ಅಂಥ ಆತಂಕವಾಗುತ್ತದೆ ನಿಮ್ಮನ್ನು ಮತ್ತು ತಂಡವನ್ನು ಅಮಾನತ್ತು ಮಾಡಿದ್ದೇನೆ ಎಂದು ರಾಮರಾಜನ್ ಹೇಳುತ್ತಾರೆ ಎಂದು ಭಾವಿಸಿ ನಡುಗುವ ಕೈಗಳಿಂದಲೇ ಕರೆ ಸ್ವೀಕರಿಸುತ್ತೇನೆ, ಆದರೆ, ಆಗ ಕೇಳಿಬಂದದ್ದು,,,

ಚAದ್ರು, ತಲೆಕೆಡಿಸಿಕೊಳ್ಳಬೇಡಿಯಪ್ಪಾ,, ಪೊಲೀಸರು ಕೂಡ ಮನುಷ್ಯರೇ, ಪೊಲೀಸರಿಂದಲೂ ತಪ್ಪುಗಳಾಗುತ್ತದೆ, ಆದ ತಪ್ಪನ್ನು ಸರಿಪಡಿಸುವುದೂ ಪೊಲೀಸರ ಡ್ಯೂಟಿ, ಯು ಗೋ ಎಹೆಡ್, ಎಲ್ಲಾ ರೀತಿಯ ಸಪೋರ್ಟ್ ನನ್ನ ಕಡೆಯಿಂದ ನಿಮ್ ಟೀಂಗಿದೆ, ಆಲ್ ದಿ ಬೆಸ್ಟ್,,, ಐ ಎಂ ವಿತ್ ಯು,,,, ರಾಮರಾಜನ್ ಧೈರ್ಯದ ಮಾತು ಕೇಳಿ ಇಡೀ ತಂಡ ರೋಮಾಂಚನಗೊಳ್ಳುತ್ತದೆ, ಕಾರ್‌ನಂತೆ ಮನಸ್ಸು, ದೇಹ ಕೂಡ ವೇಗ ಪಡೆದುಕೊಳ್ಳುತ್ತದೆ. ಮರಳಿ ಕೊಡಗಿಗೆ ಹೋಗುವುದಾದರೆ ಅದು ರಾಣನ ಜತೆಯಲ್ಲಿಯೇ ಎಂದು ತಂಡದ ಸದಸ್ಯರೆಲ್ಲರೂ ನಿರ್ಧರಿಸಿಬಿಡುತ್ತಾರೆ.

ಹರಿದ್ವಾರದಲ್ಲಿ ಎಸ್‌ಓಜಿ ಪೊಲೀಸ್ ಪಡೆ ಕೊಡಗು ಪೊಲೀಸ್ ತಂಡಕ್ಕೆ ಜತೆಯಾಗುತ್ತದೆ, ಎಸ್‌ಓಜಿ ತಂಡದ ವಾಸಿಂ ಮತ್ತು ಕೊಡಗು ಸಿಡಿಆರ್ ತಂಡದ ಪ್ರವೀಣ್, ರಾಜೇಶ್ ರಾಣನ ಬಳಿಯಿದ್ದ ಪೊಲೀಸ್ ಅಸ್ವಕ್ ಮೊಬೈಲ್‌ನ ಲೋಕೇಶನ್ ಕಂಡು ಹಿಡಿದು ಇವರಿಗೆ ಕ್ಷಣಕ್ಷಣಕ್ಕೂ ನೀಡುತ್ತಿರುತ್ತದೆ. ಅಲ್ಲಿದ್ದಾಗಲೇ ರಾಣಾ ಅಸ್ವಕ್ ಮೊಬೈಲ್‌ನಿಂದ ನಿಹಾರಿಕಾಳ ಅಣ್ಣ ಸಾಯಿಕಿರಣ್‌ಗೆ ಕರೆ ಮಾಡಿ ಬೆದರಿಕೆ ಹಾಕಿ ಹಣ ಹಾಕುವಂತೆ ಒತ್ತಾಯಿಸುತ್ತಾನೆ. ಅಂತೆಯೇ ಆಂಧ್ರಪ್ರದೇಶದ ಶ್ರೀನಿವಾಸ ರೆಡ್ಡಿ ಎಂಬುವರಿಗೂ ಕರೆ ಮಾಡಿ ಹಣ ಹಾಕುವಂತೆ ಕೇಳುತ್ತಾನೆ. ಈ ರೀತಿ ಬೆದರಿಕೆ ಹಾಕಿದ ಕೂಡಲೇ ತಾನು ಬಳಸುತ್ತಿದ್ದ ಫೋನ್ ಆಫ್ ಮಾಡುತ್ತಾನೆ. ಈ ರೀತಿಯ ಕಣ್ಣಾಮುಚ್ಚಾಲೆ ಆಟವನ್ನು ರಾಣ ತನಿಖಾ ತಂಡದ ಮುಂದೆ ಸಾಕಷ್ಟು ಬಾರಿ ಆಡುತ್ತಾನೆ.

ಈ ಶ್ರೀನಿವಾಸ ರೆಡ್ಡಿ ಯಾರೆಂದು ಪರಿಶೀಲಿಸಿದಾಗ ಪೊಲೀಸರಿಗೆ ಅಚ್ಚರಿಯಾಗುತ್ತದೆ. ರಮೇಶ್ ಕುಮಾರ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿದಾರನಾಗಿದ್ದ ರೆಡ್ಡಿಗೆ ಹೇಗೆ ಮತ್ತು ಯಾಕೆ ರಾಣ ಕರೆ ಮಾಡಿದ್ದಾನೆ ಎಂದು ಸೂಕ್ಷö್ಮವಾಗಿ ತನಿಖೆ ಮಾಡಿದಾಗ, ರಾಣ ತನ್ನೊಂದಿಗೆ ಪೊಲೀಸ್ ಸಿಬ್ಬಂದಿ ಅಸ್ವಕ್‌ನ ಮೊಬೈಲ್ ಕದ್ದುದ್ದೊಯ್ದಿದ್ದನಲ್ಲ, ಅದೇ ಮೊಬೈಲ್‌ನಲ್ಲಿದ್ದ ರೆಡ್ಡಿ ನಂಬರ್ ಪತ್ತೆಹಚ್ಚಿ, ಈ ಮೂಲಕ ರೆಡ್ಡಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ರಾಣನೆಂಬ ಖತರ್ನಾಕ್ ಕಿಲಾಡಿ, ! ಆದರೆ, ಕಳವಳಕ್ಕೀಡಾಗುವಂತೆ ರಾಣನ ಬಳಿಯಿದ್ದ ಮೊಬೈಲ್ ದೆಹಲಿಯಲ್ಲಿ ಆತನಿರುವ ಮಾಹಿತಿ ನೀಡಿದಾಗ ಚಂದ್ರಶೇಖರ್ ಮತ್ತು ತಂಡ ಚಿಂತಾಕ್ರಾAತವಾಗುತ್ತದೆ, ದೆಹಲಿಗೆ ತೆರಳಿದ ರಾಣನ ಮುಂದಿನ ಗುರಿಯೇನು ಎಂದು ಈ ತಂಡದ ಮುಂದೆ ಪ್ರಶ್ನೆ ಕಾಡುತ್ತದೆ, ಹೀಗಿರುವಾಗಲೇ, ಮತ್ತೊಂದು ಮಾಹಿತಿ ದೊರಕುತ್ತದೆ.

ಶ್ರೀನಿವಾಸ್ ರೆಡ್ಡಿಗೆ ಋಷಿಕೇಶದಿಂದ ತನ್ನ ತಮ್ಮ ವಿಶಾಲ್‌ನ ಮೊಬೈಲ್ ವೈಫೈ ಕನೆಕ್ಟ್ ಮಾಡಿ ವಾಟ್ಸಾö್ಯಪ್ ಕರೆ ಮಾಡುವ ರಾಣ, ಕೂಡಲೇ ಈ ಮೊಬೈಲ್‌ಗೆ ಹಣ ಹಾಕುವಂತೆ ಕೋರುತ್ತಾನೆ. ಹಣ ಹಾಕಲು ಯಾವುದಾದರು ಸ್ಕಾö್ಯನರ್ ಕಳಿಸುತ್ತೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾನೆ. ಕೂಡಲೇ ಎಲರ್ಟ್ ಆದ ಪೊಲೀಸ್ ತಂಡ, ಋಷಿಕೇಶದಿಂದ ಯಾವುದಾದರು ಕಾರ್, ಬೈಕ್‌ನಲ್ಲಿ ರಾಣ ಬಂದಾನು ಎಂದು ಹದ್ದಿನಗಣ್ಣಿಟ್ಟು ಹೆದ್ದಾರಿಯ ಜುಂಕ್ಷನ್‌ನಲ್ಲಿ ಪಹರೆ ಕಾಯುತ್ತಾರೆ. ಆದರೆ ರಾಣನ ಸುಳಿವೇ ಇರುವುದಿಲ್ಲ ಇದೇ ಸಂದರ್ಭ ಶ್ರೀನಿವಾಸ ರೆಡ್ಡಿಯ ಕರೆಗಳನ್ನು ಗಮನಿಸಲಾಗುತ್ತದೆ, ನಿರೀಕ್ಷೆಯಂತೆ ರಾಣ ಮತ್ತೊಮ್ಮೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಮುಂದಿಡುತ್ತಾನೆ.

ರೆಡ್ಡಿಗೆ ಕಾಲ್ ಮಾಡಿದ ಚಂದ್ರಶೇಖರ್ ಮತ್ತೊಮ್ಮೆ ರಾಣ ಕರೆ ಮಾಡಿದರೆ ಸಾಕಷ್ಟು ಸಮಯ ಮಾತನಾಡುತ್ತಲೇ ಇರಿ, ಇವನಿರುವ ಸ್ಥಳ ಪತ್ತೆಯಾಗಬೇಕು, ಹಣ ಕೇಳಿದರೆ, ಸ್ಕಾö್ಯನ್ ಕಳಿಸಿದರೆ ೫೦ ಅಥವಾ ೧೦೦ ರೂಪಾಯಿ ಮಾತ್ರ ಹಾಕಿ ಎಂದು ಸೂಚಿಸುತ್ತಾರೆ.

ನಿರೀಕ್ಷೆಯಂತೆ ಮಧ್ಯಾಹ್ನ ೩ ಗಂಟೆಗೆ ರೆಡ್ಡಿಗೆ ಕರೆ ಮಾಡುವ ರಾಣ, ಸ್ಕ್ಯಾನರ್ ಕಳುಹಿಸಿ ೨೦ ಸಾವಿರ ರೂಪಾಯಿ ಹಾಕುವಂತೆ ಸೂಚಿಸುತ್ತಾನೆ, ಕೂಡಲೇ ರೆಡ್ಡಿ, ಪೊಲೀಸರಿಗೆ ಈ ಮಾಹಿತಿ ನೀಡುತ್ತಾರೆ, ಸ್ಕ್ಯಾನರ್ ಲೋಕೇಶನ್ ಗಮನಿಸಿದರೆ ಅದು ಹರಿದ್ವಾರ ರೈಲ್ವೇ ನಿಲ್ದಾಣ ಎಂದು ಸೂಚಿಸಿರುತ್ತದೆ, ತಾವಿದ್ದ ಸ್ಥಳದಿಂದ ಕೇವಲ ೩ ಕಿ.ಮೀ. ದೂರದಲ್ಲಿದ್ದ ರೈಲ್ವೇ ನಿಲ್ದಾಣಕ್ಕೆ ಪೊಲೀಸರು ದೌಡಾಯಿಸಿದರೆ ಕೆಲವೇ ಸೆಕೆಂಡ್‌ಗಳಲ್ಲಿ ರಾಣ ಅಲ್ಲಿಂದ ಪರಾರಿಯಾಗಿರುತ್ತಾನೆ, ಆತ ಕಳುಹಿಸಿದ್ದ ಸ್ಕಾö್ಯನರ್ ನಿಲ್ದಾಣದಲ್ಲಿನ ಬೀಡಾ ಅಂಗಡಿಯದ್ದಾಗಿರುತ್ತದೆ, ಪೊಲೀಸ್ ತಂಡ ಬೇಸರದಿಂದ ವಾಪಸ್ಸಾಗುತ್ತದೆ.

ರೈಲ್ವೇ ನಿಲ್ದಾಣದಿಂದ ಪರಾರಿಯಾದ ರಾಣ, ಮತ್ತೆ ರೆಡ್ಡಿಗೆ ಕರೆ ಮಾಡಿ ಸ್ಕ್ಯಾನರ್‌ಗೆ ಹಣ ಹಾಕುವುದು ಬೇಡ, ಸದ್ಯದಲ್ಲಿಯೇ ಬೇರೆ ನಂಬರ್ ಕೊಡುತ್ತೇನೆ ಎಂದು ಹೇಳಿರುವ ಮಾಹಿತಿ ಪೊಲೀಸರಿಗೆ ರೆಡ್ಡಿ ನೀಡುತ್ತಾರೆ. ಈವರೆಗೂ ಪೊಲೀಸ್ ಸಿಬ್ಬಂದಿ ಆಸ್ಪಕ್ ಮೊಬೈಲ್ ಮೂಲಕ ಕರೆ ಮಾಡುತ್ತಿದ್ದ ರಾಣ ನಂತರ ಬೇರೊಂದು ಸಂಖ್ಯೆಯಿAದ ಕರೆ ಮಾಡಲು ಮುಂದಾಗುತ್ತಾನೆ. ಸಂಜೆಯವರೆಗೆ ಹರಿದ್ವಾರದಲ್ಲಿದ್ದ ರಾಣ ರಾತ್ರಿ ೧೦.೩೦ ರ ವೇಳೆ ದೆಹಲಿಯಲ್ಲಿರುವ ಮಾಹಿತಿ ಪೊಲೀಸರಿಗೆ ಲಭಿಸುತ್ತದೆ, ಮುಂದೇನು, ದೆಹಲಿಯಲ್ಲಿ ರಾಣನಿಗಾಗಿ ಹುಡುಕಬೇಕೆ? ಎಂದು ಕಳವಳಕ್ಕೀಡಾಗುವ ಪೊಲೀಸರು ನಿಜಕ್ಕೂ ದಾರಿ ತಪ್ಪಿದಂತಾಗುತ್ತಾರೆ.

ಸ್ವಲ್ಪ ಹೊತ್ತಿನಲ್ಲಿಯೇ ರಾಣ ದಿಲ್ಲಿಯಿಂದ ಬೇರೊಂದು ಮಾರ್ಗದಲ್ಲಿ ಸಂಚರಿಸುತ್ತಿರುವ ಮಾಹಿತ ಆತನ ಬಳಿಯಿರುವ ಮೊಬೈಲ್ ಲೋಕೇಶನ್ ಮೂಲಕ ದೊರಕುತ್ತದೆ, ರಾಣ ಎಲ್ಲಿಗೆ ಸಾಗುತ್ತಿದ್ದಾನೆ ಎಂಬ ಪ್ರಶ್ನೆ ಕೊಡಗು ಪೊಲೀಸರಿಗೆ ಎದುರಾಗುತ್ತದೆ. ಆಗ ಸಿಡಿಆರ್ ವಿಭಾಗದ ಸಿಬ್ಬಂದಿ ವಾಸಿಂ ಹೇಳುತ್ತಾರೆ, ರಾಣ ದೆಹಲಿಯಿಂದ ಜೈಪುರಕ್ಕೆ ಬಸ್‌ನಲ್ಲಿ ಹೋಗುತ್ತಾನೆ ಬೇಕಿದ್ದರೆ ಗಮನಿಸಿ, ಬಹುತೇಕ ಕ್ರಿಮಿನಲ್‌ಗಳು ಇದೇ ಮಾರ್ಗದಲ್ಲಿ ತೆರಳುತ್ತಾರೆ.

ಈ ಮಾಹಿತಿ ಸರಿಯಾಗಿರುತ್ತದೆ, ರಾಣ ಬಸ್ ಮೂಲಕ ಜೈಪುರಕ್ಕೆ ಸಾಗುತ್ತಿರುತ್ತಾನೆ, ಹರಿದ್ವಾರದಿಂದ ದೆಹಲಿಗೆ ತೆರಳಿ ಜೈಪುರಕ್ಕೆ ಹೋಗಬೇಕೆಂದರೆ ರಾಣನಿಗೂ ಪೊಲೀಸರಿಗೂ ೩೦೦-೩೫೦ ಕಿ.ಮೀ. ಅಂತರ, ಆದದ್ದಾಗಲಿ ಎಂದು ತಾವು ಬಾಡಿಗೆಗೆ ಪಡೆದುಕೊಂಡಿದ್ದ ಕಾರ್‌ನ್ನು ಅತೀ ವೇಗವಾಗಿ ಹೈವೇಯಲ್ಲಿ ಪೊಲೀಸ್ ತಂಡದ ಪರಿಣಿತ ಚಾಲಕರಾದ ಉದಯ್, ರಂಜಿತ್ ಚಲಾಯಿಸುತ್ತಾರೆ. ದೆಹಲಿ ಮಾರ್ಗವಾಗಿ ಜೈಪುರಕ್ಕೆ ಪೊಲೀಸ್ ತಂಡ ತೆರಳುತ್ತಿರುವಾಗಲೇ ಪೊಲೀಸ್ ಸಿಬ್ಬಂದಿ ರಂಜಿತ್‌ಗೆ ಜೈಪುರದಲ್ಲಿನ ಪೊಲೀಸ್ ಅಧಿಕಾರಿಯೋರ್ವರ ಹೆಸರು ನೆನಪಾಗುತ್ತದೆ, ಮೈಸೂರು ಚಿನ್ನಾಭರಣ ಮಾಲೀಕರ ಹತ್ಯೆ ಯತ್ನದ ಕೇಸ್‌ನಲ್ಲಿ ಇದೇ ಅಧಿಕಾರಿ ಕರ್ನಾಟಕ ಪೊಲೀಸರಿಗೆ ನೆರವಾಗಿದ್ದರು ಎಂದು ರಂಜಿತ್ ಹೇಳುತ್ತಿರುವಂತೆಯೇ ಪೊಲೀಸ್ ಕಂಟ್ರೋಲ್ ರೂಮ್‌ನಿಂದ ಆ ಅಧಿಕಾರಿ ಫೋನ್ ಸಂಖ್ಯೆ ಸಂಗ್ರಹಿಸುವ ಚಂದ್ರಶೇಖರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿ ನೆರವು ಕೋರುತ್ತಾರೆ, ಡೋಂಟ್‌ವರಿ, ನೀವು ಜೈಪುರಕ್ಕೆ ತಲುಪಬೇಕಾದರೆ ನಮ್ಮ ಟೀಂ ಅಲ್ಲಿ ರೆಡಿಯಿರುತ್ತದೆ ಎಂದು ಆ ಅಧಿಕಾರಿ ಭರವಸೆ ನೀಡುತ್ತಾರೆ. ದೂರದ ಜೈಪುರದಲ್ಲಿ ಕೊಡಗು ಪೊಲೀಸ್ ತಂಡಕ್ಕೆ ಈ ರೀತಿ ಸಹಕಾರ ನೀಡಿದ ಅಧಿಕಾರಿ ಹೆಸರು ದಿನೇಶ್, ಇವರು ಕರ್ನಾಟಕದ ದಿಟ್ಟ ಪೊಲೀಸ್ ಅಧಿಕಾರಿಯಾಗಿದ್ದ ಕೆಂಪಯ್ಯ ಅವರ ಅಳಿಯ! ಎಲ್ಲಿಯ ಕೊಡಗು? ಎಲ್ಲಿಯ ಜೈಪುರ? ಎಲ್ಲಿಯ ಪೊಲೀಸ್ ಅಧಿಕಾರಿ,, ಎಂಥ ಸಂಬAಧ ನೋಡಿ!

- ಅನಿಲ್ ಎಚ್.ಟಿ.

(ನಾಳಿನ ಸಂಚಿಕೆಯಲ್ಲಿ- ಪೊಲೀಸರು ತಲುಪುವುದು ಒಂದು ಗಂಟೆ ತಡವಾಗಿದ್ದರೂ ರಾಣ ಕಾಶ್ಮೀರ ಗಡಿ ತಲುಪಿಬಿಡುತ್ತಿದ್ದ!)