ಸೋಮವಾರಪೇಟೆ, ನ. ೧೪: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಸಹಿತ ರಾಜ್ಯ ಆರೋಗ್ಯ ಇಲಾಖಾ ಸಚಿವರಿಗೆ ದೂರು ನೀಡಲು ಚೌಡ್ಲು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅಧ್ಯಕ್ಷತೆಯಲ್ಲಿ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ, ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಹಲವಷ್ಟು ಸಾರ್ವಜನಿಕರು ದೂರಿದರು.

ಆಸ್ಪತ್ರೆಯಲ್ಲಿ ಸೂಕ್ತ ತಜ್ಞ ವೈದ್ಯರಿಲ್ಲದೆ ವರ್ಷ ಕಳೆದಿದೆ. ಬಹುತೇಕ ವೈದ್ಯರು ಮೆಡಿಕಲ್ ಶಾಪ್‌ಗಳಿಗೆ ಚೀಟಿ ಬರೆಯುತ್ತಿದ್ದಾರೆ. ಕೆಲ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ವೃತ್ತಿ ಮಾಡುತ್ತಿದ್ದಾರೆ. ಇನ್ನು ಕೆಲವರು ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿ ಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿ ಸುತ್ತಿದ್ದಾರೆ. ರಕ್ತ ಪರೀಕ್ಷೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ರಕ್ತ ಪರೀಕ್ಷೆಗೆ ಬೇಕಾದ ರಾಸಾಯನಿಕ ಗಳನ್ನು ತರಿಸುವುದಿಲ್ಲ ಎಂದು ಬಿಳಕಿಕೊಪ್ಪ ಹರೀಶ್, ದಾಮೋದರ್, ಕಿಬ್ಬೆಟ್ಟ ಧರ್ಮ, ಚೌಡ್ಲು ಸತೀಶ್ ಸೇರಿದಂತೆ ಇತರರು ಆರೋಪಗಳ ಸುರಿಮಳೆಗೈದರು.

ಗ್ರಾ.ಪಂ. ಸದಸ್ಯ ಸುರೇಶ್ ಶೆಟ್ಟಿ ಅವರೂ ಸಹ ಈ ಆರೋಪಗಳಿಗೆ ಧನಿಗೂಡಿಸಿದರು. ಈ ಬಗ್ಗೆ ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿ ಕಾರಿಗಳು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಕ್ರಮಕ್ಕೆ ಮನವಿ ಮಾಡಿ ಕೊಳ್ಳಲಾಗುವುದು ಎಂದು ಪಿಡಿಓ ರವಿ ನಾಯರ್ ಸಭೆಗೆ ಭರವಸೆ ನೀಡಿದರು.

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕಡೆ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಗಾಂಜಾ ಸೇವನೆ ಮತ್ತು ಮಾರಾಟ ಎಗ್ಗಿಲ್ಲದಂತಾಗಿದೆ. ಗಾಂಜಾ ವ್ಯಸನಿಗಳ ಹಾವಳಿ ಮಿತಿಮೀರಿದೆ. ಇದನ್ನು ತಡೆ ಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಸದಸ್ಯ ಗಣಪತಿ ಅವರು ಅಬಕಾರಿ ಇಲಾಖೆಯ ಅಧಿಕಾರಿಯನ್ನು ಆಗ್ರಹಿಸಿದರು.

ಅಬಕಾರಿ ಇಲಾಖೆ ಈ ಬಗ್ಗೆ ನಿರ್ಲಕ್ಷö್ಯ ತೋರಬಾರದು ಎಂದು ಸದಸ್ಯ ಸುರೇಶ್‌ಶೆಟ್ಟಿ ಹೇಳಿದರು. ಅಕ್ರಮ ಮದ್ಯ ಮಾರಾಟದ ಮಾಹಿತಿ ಪಡೆದು ಹಲವು ಕಡೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರು ಮಾಹಿತಿ ನೀಡಿದರೆ ಮಾಹಿತಿದಾರರ ಹೆಸರನ್ನು ಗೌಪ್ಯ ವಾಗಿಡಲಾಗುವುದು ಎಂದು ಅಬಕಾರಿ ಉಪನಿರೀಕ್ಷಕಿ ಸುಮತಿ ಹೇಳಿದರು.

ಬಿಳಿಕಿಕೊಪ್ಪದಲ್ಲಿ ವಿದ್ಯುತ್ ಮಾರ್ಗ ಲೈನ್ ಕೈಗೆಟುಕುತ್ತಿದೆ. ತುಂಡು ಕಂಬದಲ್ಲೇ ತಂತಿ ಇದೆ ಎಂದು ಹರೀಶ್ ಆರೋಪಿಸಿದರು. ತೋಟದ ಬದಿಯಲ್ಲಿ ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿರುವ ಮರದ ರೆಂಬೆಗಳನ್ನು ತೋಟ ಮಾಲೀಕರು ತೆಗೆಯುತ್ತಿಲ್ಲ. ಅಂತಹ ರೆಂಬೆಗಳು ಮತ್ತು ಮರಗಳಿಂದ ವಿದ್ಯುತ್ ಮಾರ್ಗಕ್ಕೆ ಹಾನಿಯಾದರೆ, ಅದರ ಖರ್ಚು ವೆಚ್ಚಗಳನ್ನು ಮಾಲೀಕನೇ ಭರಿಸುವಂತೆ ನೋಟಿಸ್ ಜಾರಿಗೊಳಿಸಿ ಎಂದು ಶ್ರೀಕಾಂತ್ ಒತ್ತಾಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡ ಲಾಗುವುದು ಎಂದು ಇಂಜಿನಿಯರ್ ಲೋಕೇಶ್ ಭರವಸೆ ನೀಡಿದರು.

ಚೌಡ್ಲು ಪಂಚಾಯಿತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಸ್ವಚ್ಛ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮೋಹನ್, ಹರೀಶ್, ದಾಮೋದರ್ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪ್ರಸ್ತಾವನೆಯಲ್ಲಿ ಕಳುಹಿಸಲಾಗಿದೆ. ಹಣ ಬಿಡುಗಡೆ ಯಾದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ವೀರೇಂದ್ರ ಮಾಹಿತಿ ನೀಡಿದರು.

ತಡೆಗೋಡೆ, ಬೀದಿದೀಪ, ಚರಂಡಿ, ತೆರೆದಬಾವಿ ದುರಸ್ತಿ, ರಸ್ತೆ ದುರಸ್ತಿ ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಆಯಾ ವಾರ್ಡ್ಗಳ ಸದಸ್ಯರು ಸ್ಥಳಪರಿಶೀಲನೆ ನಡೆಸಿ, ಅವಶ್ಯಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಸದಸ್ಯ ಮಹೇಶ್ ತಿಮ್ಮಯ್ಯ ಸಲಹೆ ನೀಡಿದರು.

ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಉಪಾಧ್ಯಕ್ಷ ನತೀಶ್ ಮಂದಣ್ಣ ಹೇಳಿದರು.

ಸಭೆಯಲ್ಲಿ ಸದಸ್ಯರಾದ ಆಶಾ ಯೋಗೇಂದ್ರ, ಸತ್ಯ, ಮಂಜುಳಾ ಸುಬ್ರಮಣಿ, ಪ್ರವೀಣ್, ಭವಾನಿ, ಜ್ಯೋತಿ, ವಿಶ್ವ ಇದ್ದರು. ಕೂಲಿ ಕೆಲಸ ಮಾಡುತ್ತಿದ್ದರೂ ಪ್ರತಿವರ್ಷ ಏಪ್ರಿಲ್ ಒಂದರAದು ಪಂಚಾಯಿತಿಗೆ ಆಗಮಿಸಿ ಪಂಚಾಯಿತಿಯ ಕಂದಾಯವನ್ನು ಕಟ್ಟುತ್ತಿರುವ ಪುಷ್ಪ ರೈ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.