ಗೋಣಿಕೊಪ್ಪ ವರದಿ, ನ. ೧೪ : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ೪ ತಂಡಗಳು ಸೆಮಿಫೈನಲ್ ಪ್ರವೇಶ ಪಡೆದಿವೆ.

ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮೂರ್ನಾಡು ಬ್ಲೇಜ್, ಕೋಣನಕಟ್ಟೆ ಇಲೆವೆನ್, ಬೊಟ್ಟಿಯತ್ನಾಡ್ ಕುಂದ ಹಾಗೂ ಬೇಗೂರು ಈಶ್ವರ ಯೂತ್‌ಕ್ಲಬ್ ತಂಡಗಳು ಗೆಲುವಿನೊಂದಿಗೆ ಮುನ್ನಡೆ ಪಡೆದುಕೊಂಡಿವೆ. ಎಂಆರ್‌ಎಫ್ ಮೂರ್ನಾಡು, ಮಲ್ಮ ಕಕ್ಕಬ್ಬೆ, ಯುಎಸ್‌ಸಿ ಬೇರಳಿನಾಡ್, ಬಲಮುರಿ ಮಹಾದೇವ ತಂಡಗಳು ಸೋಲಿನೊಂದಿಗೆ ಟೂರ್ನಿಯಿಂದ ಹೊರನಡೆದವು.

ಮೂರ್ನಾಡು ಬ್ಲೇಜ್ ತಂಡವು ಎಂಆರ್‌ಎಫ್ ಮೂರ್ನಾಡು ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಬ್ಲೇಜ್ ಆಟಗಾರರಾದ ಸುಗುಣ್, ದರ್ಶನ್ ಗೋಲು ಹೊಡೆದರು.

ಬೊಟ್ಟಿಯತ್ನಾಡ್ ಕುಂದ ತಂಡಕ್ಕೆ ಮಲ್ಮ ಕಕ್ಕಬ್ಬೆ ವಿರುದ್ಧ ೧-೦ ಗೋಲುಗಳ ಜಯ ಸಿಕ್ಕಿತು. ಕುಂದ ಆಟಗಾರ ಪೊನ್ನಣ್ಣ ಬಾರಿಸಿದ ಗೋಲು ಗೆಲುವಿಗೆ ಕಾರಣವಾಯಿತು.

ಬೇಗೂರು ಈಶ್ವರ ಯೂತ್‌ಕ್ಲಬ್ ತಂಡವು ಯುಎಸ್‌ಸಿ ಬೇರಳಿನಾಡ್ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ಬೇಗೂರು ಪರವಾಗಿ ಅಯ್ಯಮ್ಮ ಮತ್ತು ಮಂಜುನಾಥ್ ತಲಾ ಎರಡು ಗೋಲು, ಮಿಲನ್ ೧ ಗೋಲು ಬಾರಿಸಿದರು.

ಕೋಣನಕಟ್ಟೆ ಇಲೆವೆನ್ ತಂಡವು ಬಲಮುರಿ ಮಹಾದೇವ ತಂಡದ ವಿರುದ್ಧ ೫-೩ ಗೋಲುಗಳಿಂದ ಗೆದ್ದು ಬೀಗಿತು. ಕೋಣನಕಟ್ಟೆ ಆಟಗಾರರಾದ ದೀಪಕ್, ನರೇನ್, ಸೋಮಣ್ಣ, ಸಾವನ್, ದಿವಾನ್, ಬಲಮುರಿ ಆಟಗಾರರಾದ ಕಿರಣ್ ೨, ಕವನ್ ಗೋಲು ಹೊಡೆದರು.