ಭಾಗಮಂಡಲ, ನ. ೧೫: ಪವಿತ್ರ ದೀಪೋತ್ಸವದ ಸಂದರ್ಭದಲ್ಲಿ ಕಾವೇರಿ ಮಾತೆ ನಮ್ಮೆಲ್ಲರ ಅಂತರAಗದಲ್ಲಿ ಭಾರತೀಯತೆಯನ್ನು ಬೆಳಗಿಸಲಿ. ಹಿಂದುತ್ವದ ಬೆಳಕು ಎಂದು ಆರದಿರಲಿ ಎಂದು ಹುಬ್ಬಳ್ಳಿಯ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.
ಭಾಗಮಂಡಲದ ಕಾವೇರಿ, ಕನ್ನಿಕೆ, ಸುಜೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಭಾಗಮಂಡಲದ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮ ಸಂರಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿದೆ. ಭಾರತ ಜಗತ್ತಿಗೆ ಜಗನ್ಮಾತೆ ಆಗಬೇಕು. ಭಾರತ ನಮ್ಮೆಲ್ಲರ ತಾಯಿ ಜಗತ್ತಿಗೆ ತಾಯಿ ಆಗಬೇಕು. ಹೊಸ ಭಾರತದ ನವೋದಯ ಆಗುತ್ತಿದೆ. ನಿಜವಾದ ಭಾರತದ ಬೆಳಕು ಈಗ ಬೆಳಗುತಿದೆ ಎಂದರು.
ನದಿ, ಗೋವು, ಗಿಡ ಇವೆಲ್ಲಾ ತಾಯಿಯಂತೆ ನಮ್ಮನ್ನು ಪೋಷಿಸುತ್ತಿರುವಾಗ ಅವುಗಳನ್ನು ಕೃತಜ್ಞತೆಯಿಂದ ಭಕ್ತಿಯಿಂದ ಸ್ಮರಿಸಬೇಕು. ಆಗ ಮಾತ್ರ ನಾವು ಕುಟುಂಬದ ಕುಲಪುತ್ರರಾಗುತ್ತೇವೆ. ಇವೆಲ್ಲ ಮೂಢನಂಬಿಕೆಯಲ್ಲ. ಅದು ನಮ್ಮ ಮೂಲನಂಬಿಕೆ. ಅದುವೇ ನಮ್ಮನ್ನು ಪೋಷಿಸುತ್ತದೆ. ಪೂರ್ವಜರು ಕೆಲವೇ ನದಿಗಳನ್ನು ಪೂಜಿಸಿದರು. ಉಳಿದ ನದಿಗಳನ್ನು ಪ್ರತಿನಿಧಿಗಳಾಗಿ ಗುರುತಿಸಿಕೊಂಡರು ಎಂದರು.
ದಕ್ಷಿಣ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಜನೆ ವೇದ ಘೋಷಗಳ ಬಳಿಕ ಕಾವೇರಿಗೆ ಆರತಿ ನಡೆಯಿತು.
-ಸುನಿಲ್