ಮಡಿಕೇರಿ, ನ. ೧೫: ಕರ್ನಾಟಕ ರಾಜ್ಯ ಸುನ್ನೀ ಸ್ಪೂಡೆಂಟ್ಸ್ ಫೆಡರೇಷನ್ (ಎಸ್.ಎಸ್.ಎಫ್) ವತಿಯಿಂದ ರಾಜ್ಯ ಮಟ್ಟದ ಸಾಹಿತ್ಯೋತ್ಸವ ತಾ. ೧೬ ಹಾಗೂ ೧೭ ರಂದು ಕೊಂಡAಗೇರಿಯಲ್ಲಿ ಚಾಲನೆ ದೊರೆಯಲಿದೆ ಎಂದು ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ತಿಳಿಸಿದರು.
ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಪ್ರತಿಭೆಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತಂದು ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ಎಸ್.ಎಸ್.ಎಫ್ ಪ್ರತಿ ವರ್ಷ ದೇಶದಾದ್ಯಂತ ಸಾಹಿತ್ಯೋತ್ಸವ ನಡೆಸಿಕೊಂಡು ಬರುತ್ತಿದೆ.
ಕಳೆದ ಹನ್ನೆರಡು ವರ್ಷಗಳಲ್ಲಿ ಎಸ್‌ಎಸ್‌ಎಫ್ ಸಾಹಿತ್ಯೋತ್ಸವದ ಮೂಲಕ ಹಲವಾರು ಪ್ರತಿಭೆಗಳು ಹೊರಬಂದಿದ್ದಾರೆ. ಯೂನಿಟ್, ಸೆಕ್ಟರ್, ಡಿವಿಷನ್ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಜೂನಿಯರ್, ಸೀನಿಯರ್, ಕ್ಯಾಂಪಸ್, ಜನರಲ್ ವಿಭಾಗಗಳು ಸೇರಿ ನೂರಕ್ಕೂ ಅಧಿಕ ವಿವಿಧ ಸ್ಪರ್ಧೆಗಳು ಹತ್ತು ವೇದಿಕೆಗಳಲ್ಲಿ ನಡೆಯಲಿದ್ದು, ಐವತ್ತು ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯದ ೨೫ ಜಿಲ್ಲೆಗಳ ಒಂದು ಸಾವಿರಕ್ಕೂ ಅಧಿಕ ಪ್ರತಿಭೆಗಳು ಭಾಗವಹಿಸಲಿದ್ದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ನ.೨೯,೩೦ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ,ಇಂಗ್ಲಿಷ್,ಹಿAದಿ,ಅರಬಿ, ಉರ್ದು ಭಾಷೆಗಳಲ್ಲಿ ವಿವಿಧ ಕಲಾ ಸ್ಪರ್ಧೆಗಳು ನಡೆಯಲಿವೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ವಹಿಸಲಿದ್ದು, ಖ್ಯಾತ ಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಪ್ರಶಸ್ತಿ ವಿಜೇತ ವೈ.ಜೆ.ಮೆಹಬೂಬ್ ಸಾಬ್ ಸಿಂಧಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂಧನ ಸಚಿವ ಕೆ.ಜೆ ಜಾರ್ಜ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಖ್ಯಾತ ಸಾಹಿತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಉಮ್ಮರ್ ಬೀಜದಕಟ್ಟೆ, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಳಕೇರಿ, ಸಯ್ಯದ್ ಶಿಹಾಬುದ್ದೀನ್ ಹೈದರೂಸಿ ತಂಙಳ್ ಅಧ್ಯಕ್ಷರು ಕೂರ್ಗ್ ಜಂಯಿಯ್ಯತುಲ್ ಉಲಮಾ, ಅಶ್ರಫ್ ಅಹ್ಸನಿ ಪ್ರಧಾನ ಕಾರ್ಯದರ್ಶಿ ಕೂರ್ಗ್ ಜಂಯಿಯ್ಯತುಲ್ ಉಲಮಾ, ಪ್ರಮುಖರಾದ ಅಬ್ದುಲ್ ಲತೀಫ್, ಮಹಮ್ಮದ್ ಹಾಜಿ ಕುಂಜಿಲ, ಹಮೀದ್ ಮುಸ್ಲಿಯಾರ್, ಆಹ್ಮದ್ ಮದನಿ ಹಾಗೂ ಇನ್ನಿತರ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಸ್ ಎಫ್ ,ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್, ಎಸ್.ಎಸ್ .ಎಫ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಾಹಿತ್ಯೋತ್ಸವ ಸ್ವಾಗತ ಸಮಿತಿ ಮುಖ್ಯಸ್ಥ ಇಸ್ಮಾಯಿಲ್ ಸಖಾಫಿ, ಸಾಹಿತ್ಯೋತ್ಸವ ಸಮಿತಿ ಮುಖ್ಯಸ್ಥ ಮುಜೀಬ್, ಪ್ರಮುಖರಾದ ಎಚ್.ವೈ.ನಸೀರ್, ತಾಜುದ್ಧೀನ್ ಫಾಳಿಲಿ ಉಪಸ್ಥಿತರಿದ್ದರು.