ವೀರಾಜಪೇಟೆ, ನ. ೧೫: ಸಾಧಿಕ್ ಆರ್ಟ್ಸ್ ಲಿಂಕ್ಸ್ ವೀರಾಜಪೇಟೆ ವತಿಯಿಂದ ಕಲಾ ಉತ್ಸವ ಕೊಡಗು ೨೦೨೪ ರ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ನಗರದ ಶಾನ್‌ಭಾಗ್ ಕಟ್ಟಡದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿ ಕಲಾ ಉತ್ಸವ ಕೊಡಗು ೨೦೨೪ ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ತಹಶೀಲ್ದಾರ್ ಎಲ್ಲಾ ವ್ಯಕ್ತಿಗಳಲ್ಲೂ ಕಲೆ ಎಂಬುದು ಅಡಗಿದ್ದು, ಅದು ಹೊರಹೊಮ್ಮಲು ವೇದಿಕೆ ಕಲ್ಪಿಸಬೇಕು ಅಲ್ಲದೆ ಪ್ರೋತ್ಸಾಹ ನೀಡಬೇಕು ಎಂದರು.
ಶಾನ್‌ಭಾಗ್ ಕಟ್ಟಡದ ಮಾಲೀಕರು, ವಕೀಲರಾದ ಎಸ್.ಆರ್. ಜಗದೀಶ್ ಮಾತನಾಡಿ, ಸಮಾಜದಲ್ಲಿ ಸಂಬAಧಗಳು ಮರಣದ ಬಳಿಕ ಅಂತ್ಯವಾಗುತ್ತವೆ. ಅದರೆ ಚಿತ್ರ ಕಲಾವಿದನೋರ್ವ ಬಿಡಿಸುವ ಚಿತ್ರಗಳು ಶಾಶ್ವತವಾಗಿ ಉಳಿಯುತ್ತಿವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಾ.ಫಾತಿಮಾ ಕಾರ್ಯಪ್ಪ ಚಿತ್ರಕಲಾವಿದರ ಕಲೆಯನ್ನು ಪ್ರದರ್ಶನ ಮಾಡಲು ಗ್ಯಾಲರಿ ನಿರ್ಮಾಣವಾಗಬೇಕು ಎಂದರು.
ಚಿತ್ರಕಲಾ ಪ್ರದರ್ಶನದ ಆಯೋಜಕ ಸಾಧಿಕ್ ಹಂಸ ಮಾತನಾಡಿ ಚಿತ್ರಕಲೆ ಪ್ರದರ್ಶನವು ಒಂದು ತಿಂಗಳ ಕಾಲ ನಡೆಯಲಿದೆ. ಪ್ರದರ್ಶನದಲ್ಲಿ ಕೊಡಗು ಜಿಲ್ಲೆಯ ಹೆಸರಾಂತ ಕಲಾವಿದರಾದ ದಿ. ಆಶಾ ಮಂದಪ್ಪ, ಬಿ.ಆರ್. ಸತೀಶ್, ದರ್ಶನ್ ಸುಬ್ಬಯ್ಯ, ವಿಠಲ್ ಸೋಮಯ್ಯ ಸುನದ್ ಭಾರಾದ್ವಜ್, ಸೋಹನ್ ಕೆ.ಆರ್, ಮಂಜುನಾಥ್ ಚಂದ್ರಶೇಖರ್ ನಾಯರ್, ಪ್ರವೀಣ್ ವರ್ಣಕುಠೀರ ಹಾಗೂ ನಂದನ್ ಕಣ್ಣೂರು, ಪ್ರಕಾಶನ್ ಕನ್ನಲೇರಿ, ಉಪಾಸನ ಕಣ್ಣೂರು ಚಿತ್ರಕಲಾವಿದರ ಚಿತ್ರಕಲೆಗಳು ಶಿಬಿರದಲ್ಲಿ ಪ್ರದರ್ಶನ ವಾಗಲಿದೆ ಎಂದರು. ರೋಟರಿ ಶಾಲೆಯ ಪ್ರಾಂಶುಪಾಲೆ ವಿಶಾಲಕ್ಷಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.