ಕಣಿವೆ, ನ. ೧೫: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದುಬಾರೆ ಹಾಡಿಗೆ ಭೇಟಿ ನೀಡಿ ಗಿರಿಜನರ ಸಮಸ್ಯೆ ಆಲಿಸಿದರು.
ಸ್ವಾತಂತ್ರö್ಯ ಬಂದು ಏಳೂವರೆ ದಶಕಗಳು ಕಳೆದರೂ ಆದಿವಾಸಿ ಗಳಾದ ನಮಗೆ ಇದೂವರೆಗೂ ಸಮರ್ಪಕವಾದ ಸೂರಿಲ್ಲ, ಕಾವೇರಿ ನೀರನ್ನು ಹೊಳೆಯಿಂದ ತಂದು ಕುಡಿಯುವ ನಮಗೆ ಪರಿಶುದ್ಧವಾದ ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್ ಮೊದಲೇ ಇಲ್ಲ. ನಡೆಯಲೂ ರಸ್ತೆಯಂತೂ ಇಲ್ಲವೇ ಇಲ್ಲ..ಹೀಗೆ ಹತ್ತಾರು ಸಮಸ್ಯೆಗಳ ಕುರಿತು ಹಾಡಿ ನಿವಾಸಿಗಳು ಸಂಸದರ ಗಮನ ಸೆಳೆದು ಪರಿಹಾರಕ್ಕೆ ಕೋರಿದರು.
ಗಿರಿಜನ ಮುಖಂಡ ಆರ್.ಕೆ. ಚಂದ್ರು, ಗಿರಿಜನ ನಿವಾಸಿಗಳೂ ಆದ ಸಾಕಾನೆ ಶಿಬಿರದ ದಿನಗೂಲಿ ನೌಕರ. ಜೆ.ಟಿ. ಈರ, ವಿಜಯ, ಮಣಿ, ಶಿವು, ರಾಜಾ ಮೊದಲಾದವರು ದುಬಾರೆ ಹಾಡಿಗೆ ಈ ಹಿಂದೆ ಬಂದಿರುವ ಹಲವು ಜನಪ್ರತಿನಿಧಿಗಳ ಬಳಿ ನಮ್ಮಗಳ ಸಮಸ್ಯೆಗಳನ್ನು ಹೇಳಿ ಸಾಕಾಗಿದೆ. ಯಾರೂ ಕೂಡ ಇದುವರೆಗೂ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಮಹಾರಾಜರಾದ ನಿಮಗೆ ನಾಡಿನ ಬಡವರ, ದುರ್ಬಲ ವರ್ಗದವರ ನೋವನ್ನು ಪರಿಹರಿಸುವ ಶಕ್ತಿ ಹಾಗೂ ಸಾಮರ್ಥ್ಯವಿರುವ ಕಾರಣ ದಯಮಾಡಿ ನಮಗೆ ಸ್ಪಂದಿಸಿ ಬಗೆಹರಿಸಿ ಎಂದು ಮನವಿ ಮಾಡಿದರು.
ಶಾಂತ ಚಿತ್ತರಾಗಿ ಗಿರಿಜನರ ಎಲ್ಲಾ ಬವಣೆಗಳ ಮಾಹಿತಿ ಪಡೆದ ಸಂಸದ ಯದುವೀರ್ ಮಾತನಾಡಿ, ಇಡೀ ದೇಶಕ್ಕೆ ಶುದ್ಧವಾದ ಪರಿಸರವನ್ನು ಕೊಡುಗೆ ನೀಡಿರುವ ಪಶ್ಚಿಮಘಟ್ಟಗಳ ಸಾಲಿನಲ್ಲಿನ ನಿಮ್ಮಂತಹ ಜನರ ಪರಿಶ್ರಮದಿಂದ ಬೆಳೆಸಿದ ಹಸಿರು ಕಾಡಿನಿಂದಾಗಿ ನಾಡು ಉಸಿರಾಡುತ್ತಿದೆ. ಸಾಕಾನೆ ಶಿಬಿರಕ್ಕೆ ಅಗತ್ಯವಿರುವ ರಸ್ತೆ, ವಿದ್ಯುತ್ ಹಾಗೂ ಮನೆಗಳ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸ ಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳು ಹಾಗೂ ಅನುದಾನದ ಜೊತೆಗೆ ರಾಜ್ಯ
(ಮೊದಲ ಪುಟದಿಂದ) ಸರ್ಕಾರದ ವಿಶ್ವಾಸ ಪಡೆದು ಅಗತ್ಯ ವಿರುವ ಸೌಲಭ್ಯ ಕಲ್ಪಿಸಲು ಪ್ರಯತ್ನಿಸ ಲಾಗುವುದು. ಇಂದು ಕೊಡಗಿನಲ್ಲಿ ಅರಣ್ಯ ಹಾಗೂ ಪರಿಸರ ಸಮೃದ್ಧ ವಾಗಿದ್ದರೆ ಅದು ಕಾಡಿನ ಮಕ್ಕಳಾದ ನಿಮ್ಮಿಂದ ಮಾತ್ರ ಎಂದು ಶ್ಲಾಘಿಸಿದರು.
ರಸ್ತೆ ನಿರ್ಮಾಣದ ಭರವಸೆ
ಸಾಕಾನೆ ಶಿಬಿರಕ್ಕೆ ಮಾಲ್ದಾರೆ ಮಾರ್ಗವಾಗಿ ಅಗತ್ಯವಿರುವ ರಸ್ತೆಯನ್ನು ನಿರ್ಮಿಸಲು ಕೇಂದ್ರ ಹಾಗೂ ರಾಜ್ಯದ ಅರಣ್ಯ ಪರಿಸರ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಕುರಿತು ಮನದಟ್ಟು ಮಾಡಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು.
ಸಾಕಾನೆ ಶಿಬಿರಕ್ಕೆ ಸಂಸದರು ಧಾವಿಸಿದಾಗ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಸ್ವಾಗತಿಸಿ ಯಾಂತ್ರಿಕ ದೋಣಿಯಲ್ಲಿ ಸಂಸದರನ್ನು ಕಾವೇರಿ ನದಿಯನ್ನು ದಾಟಿಸಿ ಶಿಬಿರಕ್ಕೆ ಕರೆತರಲಾಯಿತು. ನಂತರ ಸಂಸದರು ಸಾಕಾನೆಗಳಿಗೆ ಸಿಹಿ ಬೆಲ್ಲ ತಿನ್ನಿಸಿದರು.
ಇದಕ್ಕೂ ಮುನ್ನ ಕಾವಾಡಿ ಹಾಗೂ ಮಾವುತರು ಸಂಸದರೊAದಿಗೆ ಪೋಟೋ ತೆಗೆಸಿಕೊಂಡು ಖುಷಿಪಟ್ಟರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಭಜರಂಗದಳದ ಜಿಲ್ಲಾ ಸಂಚಾಲಕ ಪ್ರವೀಣ್, ನಂಜರಾಯಪಟ್ಟಣದ ನವೀನ್ ಗಣಪತಿ, ಕೆ.ಎಸ್.ರತೀಶ್, ವಿಜು ಚೆಂಗಪ್ಪ ಮತ್ತಿತರರಿದ್ದರು.