ಐಗೂರು, ನ. ೧೫: ಅಖಿಲ ಭಾರತ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥವು ಐಗೂರು ಗ್ರಾಮ ಪಂಚಾಯಿತಿಯ ಯಡವನಾಡಿಗೆ ಆಗಮಿಸಿದಾಗ ಐಗೂರು ಕಸಾಪ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಸಾಹಿತ್ಯ ಪರಿಷತ್ತಿನ ಸದಸ್ಯರು, ವಾಲ್ಮೀಕಿ ಆಶ್ರಮ ಶಾಲಾ ವಿದ್ಯಾರ್ಥಿಗಳು, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು ಯಡವನಾಡಿನ ಗ್ರಾಮಸ್ಥರು ಒಟ್ಟು ಸೇರಿ ವಾದ್ಯಗೋಷ್ಠಿ, ಪೂರ್ಣ ಕುಂಭ ಸ್ವಾಗತದೊಂದಿಗೆ ರಥವನ್ನು ಬರಮಾಡಿಕೊಂಡರು. ಅಲ್ಲಿಂದ ಗ್ರಾಮದ ಗಡಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಗ್ರಾಮದ ಕೇಂದ್ರ ಸ್ಥಾನದಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಮತ್ತು ಕಸಾಪ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಾಡಗೀತೆಯನ್ನು ಹಾಡಿದರು. ಶಿಕ್ಷಕ ಅಜಿತ್ ಕುಮಾರ್ ವಂದಿಸಿದರು. ಶಾಲಾ ಮಕ್ಕಳ ವಾದ್ಯಗೋಷ್ಠಿಯ ಮೆರವಣಿಗೆಯೊಂದಿಗೆ ಸೋಮವಾರಪೇಟೆಗೆ ರಥವನ್ನು ಬೀಳ್ಕೊಡಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್, ಆರ್.ಐ. ಪ್ರಹ್ಲಾದ್, ಕೆ.ಪಿ. ದಿನೇಶ್, ಕೋಶಾಧಿಕಾರಿ ಬೆಳ್ಳಿಯಪ್ಪ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ರಾಜೇಅರಸು, ಸತೀಶ್ ಕುಮಾರ್, ಹೇಮಂತ್ ಪಾರೇರ, ತಿಮ್ಮಯ್ಯ, ಯಡವನಾಡು ರಮೇಶ್, ಪ್ರಶಾಂತ್, ಮಾಜಿ ಗ್ರಾ.ಪಂ. ಅಧ್ಯಕ್ಷ ರಮೇಶ್, ಸುಬ್ರಮಣಿ, ಗಣೇಶ್, ಆಶ್ರಮ ಸರ್ಕಾರಿ ಶಾಲಾ ಅಧ್ಯಾಪಕ ವೃಂದ ಮತ್ತು ಗ್ರಾಮಸ್ಥರು ಹಾಜರಿದ್ದರು.