ಚೆಯ್ಯಂಡಾಣೆ, ನ. ೧೫: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಚೆಯ್ಯಂಡಾಣೆಯ ನರಿಯಂದಡ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮತ್ತೆ ಮರುಕಳಿಸಿದೆ.

ಗ್ರಾಮದ ಪೋಕ್ಕುಳಂಡ್ರ ಈರಪ್ಪ ಅವರ ಭತ್ತದ ಗದ್ದೆಯನ್ನು ಕಾಡಾನೆ ಹಿಂಡು ತುಳಿದು ನಾಶಪಡಿಸಿದೆ. ಗ್ರಾಮದ ಸದಾರವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಕಾಫಿ ಹಾಗೂ ಮತ್ತಿತರ ಫಸಲು ಗಿಡಗಳನ್ನು ತುಳಿದು ನಾಶಪಡಿಸಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಈ ವ್ಯಾಪ್ತಿಯಲ್ಲಿ ಭತ್ತ ಬೆಳೆಯುವ ರೈತರು ಅಲ್ಪ ಪ್ರಮಾಣದಲ್ಲೇ ಇದ್ದು ಕಾಡಾನೆ ದಾಳಿಯಿಂದ ಅದನ್ನು ಕೂಡ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

ಕೂಡಲೇ ಅರಣ್ಯ ಇಲಾಖೆ ಕ್ರಮ ಕೈಗೊಂಡು ಗ್ರಾಮಕ್ಕೆ ಕಾಡಾನೆ ನುಸುಳದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು, ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಪರಿಹಾರ ಒದಗಿಸಬೇಕು, ಪ್ರಾಣ ಹಾನಿ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.