ಸೋಮವಾರಪೇಟೆ,ನ. ೧೫ : ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ರಚನೆಯಾಗಿ ೫೦ ವರ್ಷಗಳು ತುಂಬುತ್ತಿದ್ದು, ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ದಸಂಸ ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಮೋಹನ್ ಮೌರ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದಲಿತ ಚಳುವಳಿ ಆರಂಭವಾಗಿ ೫೦ ವರ್ಷಗಳು ತುಂಬಿವೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಪರವಾಗಿ ಎತ್ತಿದ ದನಿಯನ್ನು ಕರ್ನಾಟಕದಲ್ಲಿ ಪ್ರೊ. ಕೃಷ್ಣಪ್ಪ ಅವರು ಮುಂದುವರೆಸಿಕೊAಡು ಬಂದಿದ್ದು, ದಲಿತ ಸಮುದಾಯದ ಜಾಗೃತಿಗೆ ಜೀವನವನ್ನೇ ಮುಡಿಪಾಗಿಟ್ಟರು. ಇವರ ಸ್ಮರಣಾರ್ಥವಾಗಿಯೂ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ ಎಂದರು.

ತಾ. ೧೭ರಂದು ಬೆಳಿಗ್ಗೆ ೧೦ ಗಂಟೆಗೆ ಶನಿವಾರಸಂತೆಯಲ್ಲಿರುವ ಬಸಪ್ಪ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ೯.೩೦ಕ್ಕೆ ಶನಿವಾರಸಂತೆ ಕೆ.ಆರ್.ಸಿ. ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಆರಂಭಿಕ ದಿನದಿಂದಲೂ ಕಟ್ಟಿ ಬೆಳೆಸಿದ ಕೊಡ್ಲಿಪೇಟೆ ಯಿಂದ ಕುಟ್ಟದವರೆಗಿನ ದಲಿತ ಮುಖಂಡರುಗಳಿಗೆ ಪ್ರೊ. ಕೃಷ್ಣಪ್ಪ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆರಂಭದಲ್ಲಿ ದಲಿತ ಚಳುವಳಿಕೆ ಮುನ್ನುಡಿ ಬರೆದ ಜಯಪ್ಪ ಹಾನಗಲ್ಲು, ಹೆಚ್.ಜೆ. ಹನುಮಯ್ಯ, ಗುರುಲಿಂಗಪ್ಪ ಕುಟುಂಬ, ವೀರಭದ್ರಪ್ಪ, ಡಿ.ಸಿ. ನಿರ್ವಾಣಪ್ಪ ಕುಟುಂಬ, ಶಿವಶಂಕರ್ ಕುಟುಂಬ, ಡಾ. ಜೆ. ಸೋಮಣ್ಣ, ಸಿ. ಸಣ್ಣಯ್ಯ ಕುಟುಂಬ, ರಾಮ್‌ಕುಮಾರ್ ಕುಟುಂಬ,, ಡಿ.ಎಸ್. ನಿರ್ವಾಣಪ್ಪ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಇದರೊಂದಿಗೆ ೭೦ ಮಂದಿ ಮುಂಚೂಣಿ ಹೋರಾಟಗಾರರಿಗೆ ಸನ್ಮಾನ, ಕಲೆ, ಸಿನಿಮಾ, ಸೈನ್ಯ, ಶೈಕ್ಷಣಿಕ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪುಷ್ಪಲತಾ ಮಂಜುನಾಥ್ ಅವರನ್ನು ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ, ಹಾಸನ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಗುಲ್ಬರ್ಗ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್, ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್, ಮಡಿಕೇರಿ ನಗರ ಸಭೆ ಮಾಜೀ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ಮಹಿಳಾ ಹೋರಾಟಗಾರ್ತಿ ಹೆಚ್.ಬಿ. ಜಯಮ್ಮ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಶನಿವಾರಸAತೆಯ ಬಸಪ್ಪ ಸಭಾಂಗಣದಲ್ಲಿ ದಲಿತ ಹೋರಾಟಗಾರರಾದ ಡಿ.ಸಿ.ನಿರ್ವಾಣಪ್ಪ ಹಾಗೂ ಶಿವಶಂಕರ್ ಮಾಸ್ಟರ್ ಅವರ ಹೆಸರಿನಲ್ಲಿ ನಿರ್ಮಿಸುವ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಮೋಹನ್ ಮೌರ್ಯ ಹೇಳಿದರು. ಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಸಂದೀಪ, ಉಪಾಧ್ಯಕ್ಷ ಎಸ್.ಎಸ್. ಶಿವಲಿಂಗು, ಡಿ.ವಿ. ಜಗದೀಶ್ ಕೊಡ್ಲಿಪೇಟೆ, ಸಹ ಕಾರ್ಯದರ್ಶಿ ಕೆ.ಡಿ. ಜಗದೀಶ್ ಅವರುಗಳು ಉಪಸ್ಥಿತರಿದ್ದರು.